Ketan Agarwal murder case Pune: ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಬೆನ್ನಲ್ಲೇ, ಆ ಕುಟುಂಬಕ್ಕೆ ಮತ್ತೊಂದು ಬರಸಿಡಿಲು ಬಡಿದಿದೆ. ಒಂದೇ ಕುಟುಂಬದಲ್ಲಿ ವಾರದ ಅಂತರದಲ್ಲಿ ಸಂಭವಿಸಿದ ಈ ಎರಡನೇ ಸಾವು ಇಡೀ ಅಗರ್ವಾಲ್ ಕುಟುಂಬವನ್ನು ಕಣ್ಣೀರಲ್ಲಿ ಮುಳುಗುವಂತೆ ಮಾಡಿದೆ.

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಅಗರ್ವಾಲ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಕೇತನ್ ಸಾವಿನ ದುಃಖದಲ್ಲಿದ್ದ ಅವರ ಕುಟುಂಬದಲ್ಲಿ ಈಗ ಎರಡನೇ ಸಾವು ಸಂಭವಿಸಿದ್ದು, ಮನೆಯಲ್ಲಿ ಮೌನ ಆವರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ

ಕೆಲವು ದಿನಗಳ ಹಿಂದೆ ಪುಣೆಯ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಲೋಹಘಡ ಕೋಟೆಯ ಪ್ರಪಾತಕ್ಕೆ (ಕಂದಕ) ತಳ್ಳಿ ಕೊಲೆ ಮಾಡಿದ್ದರು. ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಹುಡುಗಿಯೇ ತನ್ನ ಪ್ರೇಮಿಯೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು ಎಲ್ಲರನ್ನೂ ದಂಗಾಗಿಸಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕೇತನ್ ಅವರ 71 ವರ್ಷದ ತಾತ ದೇವಿಚಂದ್ ಅಗರ್ವಾಲ್ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ತಾತನ ಸಾವಿಗೆ ಕಾರಣವೇನು?

ಜೂನ್ 18ರಂದು ಕೇತನ್ ಅಗರ್ವಾಲ್ ಕೊಲೆಯಾದ ಸುದ್ದಿ ಕೇಳಿದಾಗಿನಿಂದ ದೇವಿಚಂದ್ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ತನ್ನ ಮೊಮ್ಮಗನಿಗೆ ಇಂತಹ ಸ್ಥಿತಿ ಬಂತಲ್ಲ ಎಂದು ಅವರು ಸದಾ ಕಾಲ ಮಾನಸಿಕ ಒತ್ತಡದಲ್ಲಿದ್ದರು. ಕುಟುಂಬದ ಸದಸ್ಯರ ಪ್ರಕಾರ, ಮೊಮ್ಮಗನ ಸಾವಿನ ನಂತರ ಅವರು ಸಹಜ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಶನಿವಾರ ರಾತ್ರಿ ಸುಮಾರು 9:45ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತ (Cardiac Arrest) ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೇತನ್ ಸಾವಿನ ಆಘಾತವೇ ದೇವಿಚಂದ್ ಅವರ ಸಾವಿಗೆ ನೇರ ಕಾರಣ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

ಸಿಯಾ ಗೋಯಲ್ ಸ್ನ್ಯಾಪ್‌ಚಾಟ್ ಚಾಟ್ ಬಹಿರಂಗ

ಇತ್ತ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಅತ್ಯಂತ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದೆ. ಸಿಯಾ ಗೋಯಲ್ ಮೇ ತಿಂಗಳಿನಲ್ಲಿ ತನ್ನ ಗೆಳತಿಯೊಂದಿಗೆ ನಡೆಸಿದ್ದ ಸ್ನ್ಯಾಪ್‌ಚಾಟ್ ಸಂಭಾಷಣೆ ಈಗ ಹೊರಬಂದಿದೆ. ಆ ಸಮಯದಲ್ಲಿ ಎರಡೂ ಕುಟುಂಬಗಳು ಉದಯಪುರದಲ್ಲಿ ನಡೆಯಬೇಕಿದ್ದ ವಿವಾಹದ ಸಿದ್ಧತೆಯಲ್ಲಿ ತೊಡಗಿದ್ದವು. ವಿಮಾನದ ಟಿಕೆಟ್ ಬುಕ್ ಮಾಡಲು ಸಿಯಾ ತನ್ನ ಗೆಳತಿಯ ಬಳಿ ಗುರುತಿನ ಚೀಟಿಯ ವಿವರ ಕೇಳಿದ್ದಳು. ಆದರೆ ಅದರ ಜೊತೆಗೆ ಆಕೆ ಬರೆದಿದ್ದ ಸಂದೇಶ ಆಘಾತಕಾರಿಯಾಗಿದೆ. "ಮದುವೆಯ ಟಿಕೆಟ್‌ಗಾಗಿ ನಿನ್ನ ಐಡಿ ಕಾರ್ಡ್ ಫೋಟೋ ಕಳುಹಿಸು. ಹೇಗಿದ್ದರೂ ಈ ಮದುವೆ ನಡೆಯುವುದಿಲ್ಲ, ಆದರೂ ಕಳುಹಿಸು" ಎಂದು ಸಿಯಾ ಸಂದೇಶ ಕಳುಹಿಸಿದ್ದಳು.

ಪೂರ್ವನಿಯೋಜಿತ ಸಂಚು?

ಸಿಯಾಳ ಈ ಒಂದು ಸಂದೇಶವು ಕೇತನ್ ಹತ್ಯೆ ಆಕಸ್ಮಿಕವಲ್ಲ, ಬದಲಾಗಿ ತಿಂಗಳುಗಳ ಮೊದಲೇ ರೂಪಿಸಿದ ಪೂರ್ವನಿಯೋಜಿತ ಸಂಚು ಎಂಬ ಸಂಶಯವನ್ನು ಬಲಪಡಿಸಿದೆ. ಮದುವೆ ನಡೆಯುವುದಿಲ್ಲ ಎಂಬುದು ಸಿಯಾಳಿಗೆ ಮೊದಲೇ ತಿಳಿದಿತ್ತು ಎಂದರೆ, ಕೇತನ್‌ನನ್ನು ಕೊಲ್ಲುವ ಯೋಜನೆ ಆಕೆಯ ಮನಸ್ಸಿನಲ್ಲಿ ಮೊದಲೇ ಇತ್ತು ಎನ್ನುವುದಕ್ಕೆ ಇದು ಡಿಜಿಟಲ್ ಪುರಾವೆಯಾಗಿದೆ. ಸದ್ಯ ಪೊಲೀಸರು ಸಿಯಾಳ ಆ ಗೆಳತಿಯನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಸೈಬರ್ ಸೆಲ್ ಈ ಸ್ಕ್ರೀನ್‌ಶಾಟ್‌ನ ಅಧಿಕೃತತೆಯನ್ನು ಪರಿಶೀಲಿಸುತ್ತಿದ್ದು, ಇದು ದೃಢಪಟ್ಟರೆ ಸಿಯಾ ಮತ್ತು ಚೇತನ್ ವಿರುದ್ಧದ ಪ್ರಕರಣ ಮತ್ತಷ್ಟು ಬಲಗೊಳ್ಳಲಿದೆ.

ಸದ್ಯ ಆರೋಪಿಗಳಾದ ಸಿಯಾ ಮತ್ತು ಚೇತನ್ ಜುಲೈ 16ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಂದು ಕಡೆ ಕೇತನ್ ಹತ್ಯೆಯ ನ್ಯಾಯಕ್ಕಾಗಿ ಕುಟುಂಬ ಹೋರಾಡುತ್ತಿದ್ದರೆ, ಇನ್ನೊಂದೆಡೆ ತಾತನ ಸಾವು ಅವರನ್ನು ಮತ್ತಷ್ಟು ಕುಗ್ಗಿಸಿದೆ.