ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ಮೈಸೂರಿನ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಪ್ರಭಾವ ಬೀರಿದ್ದರು. ಭಾರತದಲ್ಲಿ ಬ್ರಿಟಿಷರನ್ನು ದುರ್ಬಲಗೊಳಿಸುವ ಮೂಲಕ, ಅವರು ಅಮೆರಿಕನ್ನರಿಗೆ ಪ್ರತಿರೋಧದ ಸಂಕೇತವಾದರು ಮತ್ತು ಅಲ್ಲಿನ ಪತ್ರಿಕೆ, ಪಠ್ಯಗಳಲ್ಲಿಯೂ ಸ್ಥಾನ ಪಡೆದಿದ್ದರು.

ನವದೆಹಲಿ: ದೂರದ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೂ ಮೈಸೂರಿನ ಹೈದರ್‌ ಅಲಿ, ಟಿಪ್ಪು ಸುಲ್ತಾನ್‌ಗೂ ಸಂಬಂಧ ಇದೆ ಅಂದ್ರೆ ನಂಬ್ತೀರಾ? ಇತಿಹಾಸದ ಪುಟ ತಿರುವಿ ಹಾಕಿದರೆ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ನಮ್ಮ ಮೈಸೂರಿನ ದೊರೆಗಳಾದ ಹೈದರ್‌ ಅಲಿ ಮತ್ತು ಟಿಪ್ಪುಸುಲ್ತಾನ್‌ ತಮ್ಮದೇ ಆದ ಪ್ರಭಾವ ಬೀರಿದ್ದು ಬೆಳಕಿಗೆ ಬರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ ಈಗ ತನ್ನ 250ನೇ ಸ್ವಾತಂತ್ರ್ಯೋತ್ಸ ಘೋಷಣೆ (ಡಿಕ್ಲರೇಷನ್‌ ಆಫ್‌ ಇಂಡಿಪೆಂಡೆನ್ಸ್‌)ಯ ಸಂಭ್ರಮದಲ್ಲಿದೆ. ಜು.4, 1776ರಲ್ಲಿ ಅಮೆರಿಕದ ಸ್ವಾತಂತ್ರ್ಯಘೋಷಣೆ ಆಗುವ ಹೊತ್ತಿನಲ್ಲಿ ಹೈದರ್‌ ಅಲಿ, ಟಿಪ್ಪು ಸುಲ್ತಾನ್‌ ಹೆಸರು ಅಲ್ಲಿ ಚಿರಪರಿಚಿತವಾಗಿತ್ತು.

ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಬೆಂಬಲ

ಹೈದರ್‌ ಅಲಿ ಆಗಲಿ, ಟಿಪ್ಪು ಆಗಲಿ ಅಮೆರಿಕ ನಾಯಕರ ಜತೆಗೆ ನೇರವಾಗಿ ಮಾತುಕತೆ ನಡೆಸಿದ್ದಾಗಲಿ, ನೆರವಿಗಾಗಿ ಸೇನೆ ಕಳುಹಿಸಿಕೊಟ್ಟಿದ್ದಾಗಲಿ ಇಲ್ಲ. ಆದರೆ, ಅಮೆರಿಕದ ಮೇಲೆ ನಿಯಂತ್ರಣಕ್ಕೆ ಹೆಣಗಾಡುತ್ತಿದ್ದ ಬ್ರಿಟಿಷ್‌ ಸೇನೆಗೆ ಫ್ರೆಂಚರ ಜತೆಗೂಡಿ ಭಾರತದಲ್ಲಿ ಭಾರೀ ಹೊಡೆತ ನೀಡುವ ಮೂಲಕ ಶಕ್ತಿಗುಂದುವಂತೆ ನೋಡಿಕೊಂಡಿದ್ದರು. ಈ ಮೂಲಕ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದರು.

ಅಮೆರಿಕದ ಯುದ್ಧ ನೌಕೆಗೆ ಹೈದರ್‌ ಅಲಿ ಹೆಸರು

1780ರ ಪೊಲ್ಲಿಲುರ್‌ ಕದನದಲ್ಲಿ ಬ್ರಿಟಿಷರನ್ನು ಹೀನಾಯವಾಗಿ ಸೋಲಿಸಿದ ಬಳಿಕ ಅಮೆರಿಕದ ಜನ ಹೈದರ್‌ ಅಲಿ ಬಗ್ಗೆ ಪ್ರಭಾವಿತರಾಗಿದ್ದರು. ಸಾರ್ವಜನಿಕವಾಗಿಯೇ ಹೈದರ್‌ ಅಲಿ ಹೋರಾಟಕ್ಕೆ ಶುಭ ಹಾರೈಸುತ್ತಿದ್ದರು. 1781ರಲ್ಲಿ ಅಮೆರಿಕದ ಯುದ್ಧ ನೌಕೆಗೆ ಹೈದರ್‌ ಅಲಿ ಹೆಸರಿಡಲಾಗಿತ್ತು. ಈ ನೌಕೆ ಬ್ರಿಟನ್‌ನ ನೌಕೆಯನ್ನು ಮಣಿಸಿತ್ತು. ಈ ಸಾಹಸದ ಕುರಿತು ಕವನಗಳನ್ನೂ ಬರೆಯಲಾಗಿತ್ತು.

ಹೈದರ್‌ ಅಲಿ ಸಾವಿನ ಬಳಿಕ ಪುತ್ರ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸಿದ್ದು, ಅಮೆರಿಕದ ಪತ್ರಿಕೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿತ್ತು. ಶಾಲಾ ಪಠ್ಯ ಪುಸ್ತಕಗಳಲ್ಲೂ ಈ ಕುರಿತ ಮಾಹಿತಿ ಇತ್ತು. ರೇಸ್‌ ಕುದುರೆಗಳಗೂ ಮೈಸೂರಿನ ಈ ರಾಜರ ಹೆಸರಿಡಲಾಗಿತ್ತು. 1799ರಲ್ಲಿ ಟಿಪ್ಪು ಹತನಾದಾಗ ಅಮೆರಿಕನ್ನರೂ ಕಂಬನಿ ಮಿಡಿದಿದ್ದರು.