ಇರಾನ್-ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ತನ್ನ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ದಾಳಿಯಾದರೆ ಸಂಯಮ ತೋರುವುದಿಲ್ಲ ಎಂದು ಇರಾನ್ ತನ್ನ ಶತ್ರುರಾಷ್ಟ್ರಗಳಾದ ಅಮೆರಿಕಾ ಹಾಗೂ ಇಸ್ರೇಲ್‌ಗೆ ಎಚ್ಚರಿಸಿದೆ.
ಅಮೆರಿಕಾದ ಫೈಟರ್ ಜೆಟ್ ಮೇಲೆ ದಾಳಿ ಮಾಡಿತಾ ಇರಾನ್
ಇಸ್ರೇಲ್ ಹಾಗೂ ಅಮೆರಿಕಾ ಇರಾನ್ ಮೇಲೆ ನಡೆಸುತ್ತಿರುವ ಯುದ್ಧ ದಿನಕಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದೆ. ಇರಾನ್‌ನನ್ನು ಪುಟ್ಟ ರಾಷ್ಟ್ರ ಎಂದು ಕೇವಲವಾಗಿ ನೋಡಿದ ಅಮೆರಿಕಾಗೆ ಇರಾನ್‌ನ ಶಕ್ತಿ ನೋಡಿ ಬೆಚ್ಚುವಂತಾಗಿದೆ. ಈ ಯುದ್ಧದ ನಡುವೆಯೇ ಈಗ ಅಮೆರಿಕಾದ ಫೈಟರ್ ಜೆಟ್ ಎಫ್ 35 ಮೇಲೆ ಇರಾನ್ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಇದರಿಂದ ಅಮೆರಿಕದ ಎಫ್ -35 ಲೈಟ್ನಿಂಗ್ II ವಿಮಾನವು ಮಧ್ಯಪ್ರಾಚ್ಯದಲ್ಲಿರುವ ತನ್ನ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಯುಎಸ್ ಎಫ್-35 ತುರ್ತು ಲ್ಯಾಂಡಿಂಗ್
ಒಂದು ವೇಳೆ ಇರಾನ್ ಈ ಅಮೆರಿಕಾದ ಫೈಟರ್ ಜೆಟ್ ಮೇಲೆ ದಾಳಿ ನಡೆಸಿದ್ದು ಧೃಡವಾದಲ್ಲಿ, ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಇರಾನ್ ಅಮೆರಿಕದ ವಿಮಾನವನ್ನು ಹೊಡೆದುರುಳಿಸಿದ ಮೊದಲ ಘಟನೆ ಇದಾಗಲಿದೆ. ಅಮೆರಿಕಾದ ಈ ಎಫ್ 35 ಯುದ್ಧ ವಿಮಾನವೂ ಸೇವೆಯಲ್ಲಿರುವ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಇದಕ್ಕೆ 100 ಮಿಲಿಯನ್ ಡಾಲರ್‌ಗಿಂತಲೂ ಅಧಿಕ ಬೆಲೆ ಇದೆ.
ಇರಾನ್ ಮೇಲೆ ಯುದ್ಧ ಕಾರ್ಯಾಚರಣೆ ನಡೆಸಿದ ನಂತರ ವಿಮಾನ ಸುರಕ್ಷಿತವಾಗಿ ಮರಳಿದೆ ಎಂದು ಈ ವಿಮಾನದ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣವೇನು ಇದರಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ಪೈಲಟ್ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಹಾಕಿನ್ಸ್ ಹೇಳಿದ್ದಾರೆ. ಇರಾನ್ ವಿರುದ್ಧ ಅಮೆರಿಕಾದ ಹಾಗೂ ಇಸ್ರೇಲ್‌ನ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಮತ್ತು ಇಸ್ರೇಲ್ ಎರಡೂ ಎಫ್ -35 ಜೆಟ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸುತ್ತಿವೆ.
ಇನ್ನೊಂದು ಕ್ಷಿಪಣಿ ತನ್ನ ಮೂಲಸೌಕರ್ಯವನ್ನು ಮತ್ತೊಮ್ಮೆ ಹೊಡೆದರೆ ಟೆಹ್ರಾನ್ ಸುಮ್ಮನಿರಲ್ಲ:
ಮತ್ತೊಂದೆಡೆ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳಲ್ಲಿ ಒಂದಾದ ಇರಾನ್‌ನ ಸೌತ್ ಪಾರ್ಸ್ ನೈಸರ್ಗಿಕ ತೈಲಾಗಾರದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಮಧ್ಯಪ್ರಾಚ್ಯದಲ್ಲಿ ಪ್ರಾರಂಭವಾದ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಇನ್ನೊಂದು ಕ್ಷಿಪಣಿ ತನ್ನ ಮೂಲಸೌಕರ್ಯವನ್ನು ಮತ್ತೊಮ್ಮೆ ಹೊಡೆದರೆ ಟೆಹ್ರಾನ್ ಯಾವುದೇ ಸಂಯಮ ತೋರಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರ್ಘ್ಜಿ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಫ್ಲೈಒವರ್‌ನಿಂದ ಕೆಳಗೆ ಬಿದ್ದ ಫಾರ್ಚುನರ್ : ಲಡಾಕ್ ಟ್ರಿಪ್ ಮುಗಿಸಿ ವಾಪಸ್ ಬರ್ತಿದ್ದ ಮೂವರು ಸ್ನೇಹಿತರು ಸಾವು
ಇಸ್ರೇಲ್ ವಿರುದ್ಧದ ದಾಳಿಯಲ್ಲಿ ನಮ್ಮ ಶಕ್ತಿಯ ಒಂದು ಭಾಗವನ್ನು ಈಗಾಗಲೇ ತೋರಿಸಲಾಗಿದೆ. ನಮ್ಮ ಮೂಲಸೌಕರ್ಯದ ಮೇಲಿನ ಇಸ್ರೇಲ್ ದಾಳಿಗೆ ನಮ್ಮ ಪ್ರತಿಕ್ರಿಯೆಯಾಗಿ ನಮ್ಮ ಶಕ್ತಿಯ ಒಂದು ಭಾಗವನ್ನು ತೋರಿಸಲಾಯ್ತು. ನಮ್ಮ ಸಂಯಮಕ್ಕೆ ಏಕೈಕ ಕಾರಣವೆಂದರೆ ಯುದ್ದೋನ್ಮಾದವನ್ನು ಕಡಿಮೆ ಮಾಡಬೇಕು ಎಂಬ ವಿನಂತಿಯನ್ನು ಗೌರವಿಸುವುದು. ಆದರೆ ನಮ್ಮ ಮೂಲಸೌಕರ್ಯಗಳು ಮತ್ತೊಮ್ಮೆ ದಾಳಿಗೊಳಗಾದರೆ ನಾವು ಯಾವುದೇ ಸಂಯಮ ತೋರುವುದಿಲ್ಲ ಎಂದು ಅರಘ್ಜಿ ಹೇಳಿದ್ದಾರೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಬರುವ ಕರೆಗಳಿಗೆ ಗೌರವ ನೀಡುವ ಸಲುವಾಗಿ ಮಾತ್ರ ಸಂಯಮವನ್ನು ಕಾಯ್ದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್‌ನ ಸೌತ್ ಪಾರ್ಸ್ ನೈಸರ್ಗಿಕ ತೈಲ ನಿಕ್ಷೇಪದ ಸಾಮರ್ಥ್ಯವಿದು
ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್ ಮತ್ತು ಕತಾರ್ ನಡುವೆ ವಿಭಜಿಸಲಾದ ಸೌತ್ ಪಾರ್ಸ್/ನಾರ್ತ್ ಡೋಮ್ ತೈಲ ಕ್ಷೇತ್ರವೂ ಜಾಗತಿಕ ಇಂಧನ ಶಕ್ತಿ ಕೇಂದ್ರವಾಗಿದೆ. ಸರಿಸುಮಾರು 1,800 ಟ್ರಿಲಿಯನ್ ಘನ ಅಡಿಗಳಷ್ಟು ಮರುಪಡೆಯಬಹುದಾದ ಅನಿಲವನ್ನು ಹೊಂದಿರುವ ಈ ತಾಣವು 13 ವರ್ಷಗಳ ಕಾಲ ಇಡೀ ಜಗತ್ತಿಗೆ ವಿದ್ಯುತ್ ಪೂರೈಸುವಷ್ಟು ಇಂಧನವನ್ನು ಹೊಂದಿದೆ. ಈ ದಾಳಿಗೆ ಪ್ರತೀಕಾರವಾಗಿ ಇರಾನ್ ಗಲ್ಫ್‌ನ ತೈಲಾಗಾರಗಳ ಮೇಲೆ ದಾಳಿ ಮಾಡಿದ್ದು, ಇಸ್ರೇಲ್ ಅಮೆರಿಕಾ ದಾಳಿ ಮುಂದುವರೆದರೆ ಮತ್ತೆ ದಾಳಿ ನಡೆಸುವುದಾಗಿ ಇರಾನ್ ಬೆದರಿಕೆಯೊಡ್ಡಿದೆ. ಅಲ್ಲದೇ ಇರಾನ್ ಶತ್ರುರಾಷ್ಟ್ರಗಳಿಗೆ ತನ್ನ ಹಿಡಿತದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿದ ಕಾರಣ ಯುದ್ಧವು ಜಾಗತಿಕ ಅನಿಲ ಮತ್ತು ಇಂಧನ ಪೂರೈಕೆ ಸರಪಳಿಗೆ ತೀವ್ರವಾಗಿ ಅಡ್ಡಿಪಡಿಸಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾ*ಚಾರ: ಪ್ರಭಾವಿ ಜ್ಯೋತಿಷಿಯ ಬಂಧನ: ತನಿಖೆಗಿಳಿದ ಪೊಲೀಸರಿಗೆ ಸಿಕ್ತು ಬೆಚ್ಚಿಬೀಳಿಸುವ ಪೆನ್‌ಡ್ರೈವ್


