ಮಧ್ಯ ಪ್ರಾಚ್ಯದ ಯುದ್ಧ ಭೀತಿಯ ಹಿನ್ನೆಲೆಯಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ತನ್ನ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿಗಳಲ್ಲಿ ಇಂಧನ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಂಧನ ಸಂಗ್ರಹಣೆ ಮತ್ತು ದುರುಪಯೋಗ ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ/ಬೆಂಗಳೂರು (ಮೇ 12): ಮಧ್ಯ ಪ್ರಾಚ್ಯದ ದೇಶಗಳಲ್ಲಿ (Middle East) ಉಂಟಾಗಿರುವ ಯುದ್ಧದ ಭೀತಿಯು ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ, ದೇಶದ ಪ್ರಮುಖ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇಂದಿನಿಂದ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿಗಳಲ್ಲಿ ಇಂಧನ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮೋದಿ ಅವರ ಮಿತಬಳಕೆಯ ಕರೆ:
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ದೇಶದಲ್ಲಿ ಇಂಧನದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಜನತೆಗೆ ಮಿತಬಳಕೆಯ ಸಂದೇಶ ನೀಡಿದ್ದಾರೆ. ಅನಗತ್ಯವಾಗಿ ಇಂಧನ ಪೋಲು ಮಾಡಬೇಡಿ ಮತ್ತು ಮಿತವ್ಯಯ ಸಾಧಿಸಿ ಎಂಬ ಅವರ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ತೈಲ ಸಂಸ್ಥೆಗಳು, ಈಗ ವಿತರಣಾ ಕ್ರಮಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿವೆ.
IOCL ಆದೇಶದಲ್ಲೇನಿದೆ?
ಇಂಡಿಯನ್ ಆಯಿಲ್ ಸಂಸ್ಥೆಯು ತನ್ನ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಮತ್ತು ಆಪರೇಟರ್‌ಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಮಾರುಕಟ್ಟೆಯ ಇಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, 'ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಬಾಟಲಿಗಳಲ್ಲಿ (1 ಲೀಟರ್ ಅಥವಾ 2 ಲೀಟರ್ ಸೇರಿದಂತೆ ಯಾವುದೇ ಅಳತೆ) ವಿತರಿಸಬಾರದು' ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ತಿಳಿಸಲಾಗಿದೆ.
ಡೀಲರ್‌ಗಳಿಗೆ ಎಚ್ಚರಿಕೆ:
ಒಂದು ವೇಳೆ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ನಿಯಮ ಮೀರಿ ಬಾಟಲಿಗಳಿಗೆ ಇಂಧನ ತುಂಬಿಸಿಕೊಡುತ್ತಿರುವುದು ಕಂಡುಬಂದಲ್ಲಿ, ಅಂತಹ ಬಂಕ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ಎಚ್ಚರಿಸಿದೆ. 'ಯಾವುದಾದರೂ ಫೋಟೋ ಅಥವಾ ವಿಡಿಯೋ ಸಾಕ್ಷ್ಯಗಳು ಲಭ್ಯವಾದಲ್ಲಿ, ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್‌ಲೈನ್ಸ್ (Marketing Discipline Guidelines) ಅಡಿಯಲ್ಲಿ ಬಂಕ್ ಮಾಲೀಕತ್ವದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಇಂಡಿಯನ್ ಆಯಿಲ್ ಸ್ಪಷ್ಟಪಡಿಸಿದೆ.
ಏಕೆ ಈ ನಿರ್ಧಾರ?
ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ಅಥವಾ ವಾಹನಗಳಲ್ಲಿ ಪೆಟ್ರೋಲ್ ಖಾಲಿಯಾದಾಗ ಜನರು ಬಾಟಲಿಗಳಲ್ಲಿ ಇಂಧನ ತೆಗೆದುಕೊಂಡು ಹೋಗುತ್ತಾರೆ. ಆದರೆ, ಇಂದಿನ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಇಂಧನವನ್ನು ಸಂಗ್ರಹಿಸಿಡುವುದು (Hoarding) ಅಥವಾ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಬಾಟಲಿಗಳಲ್ಲಿ ಪೆಟ್ರೋಲ್ ಒಯ್ಯುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ. ಆದ್ದರಿಂದ, ವಾಹನ ಸವಾರರು ಇನ್ನು ಮುಂದೆ ನೇರವಾಗಿ ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಇಂಧನ ತುಂಬಿಸಿಕೊಳ್ಳಬೇಕಾಗುತ್ತದೆ. ಇಂಧನ ಉಳಿತಾಯದ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.


