ಇಸ್ಲಾಂಗೆ ಮತಾಂತರವಾದ ಅಂಜುಗೆ ಜಾಗ, ಹಣ ಹಾಗೂ ಉಡುಗೊರೆ ನೀಡಿದ ಪಾಕ್ ಉದ್ಯಮಿ!
ಫೇಸ್‌ಬುಕ್ ಗೆಳೆಯನ ಸಲುವಾಗಿ ಪತಿಯನ್ನು ತೊರೆದು ಪಾಕಿಸ್ತಾನ ಸೇರಿರುವ ಭಾರತೀಯ ಮೂಲದ ಅಂಜು ಈಗ ಫಾತಿಮಾ ಆಗಿ ಮತಾಂತರಗೊಂಡಿದ್ದಾರೆ. ಆಕೆಗೆ ಇತ್ತೀಚೆಗೆ ಪಾಕ್ ಸ್ಟಾರ್ ಗ್ರೂಪ್ ಕಂಪನಿಗಳ ಸಿಇಒ ಮೊಹ್ಶಿನ್ ಖಾನ್ ಅಬ್ಬಾಸಿ, ಜಾಗ, ಹಣ ಹಾಗೂ ಉಡುಗೊರೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ನವದೆಹಲಿ (ಜು.29): ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪಾಕಿಸ್ತಾನಿ ಗೆಳೆಯ ನಸ್ರುಲ್ಲಾನನ್ನು ಭೇಟಿಯಾಗುವ ಸಲುವಾಗಿ ಭಾರತೀಯ ಮಹಿಳೆ ಅಂಜು ತನ್ನ ಪತಿಯನ್ನು ರಾಜಸ್ಥಾನದ ಅಲ್ವಾರ್‌ನಲ್ಲಿಯೇ ಬಿಟ್ಟು ತೆರಳಿದ್ದರು. ಪಾಕಿಸ್ತಾನಕ್ಕೆ ತೆರಳಿದ್ದ ಆಕೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಟುತ್ತಿರುವಂತೆಯೇ ಇತ್ತೀಚೆಗೆ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನಕ್ಕೆ ಬಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿರುವ ಅಂಜುಗೆ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50 ಸಾವಿರ ರೂಪಾಯಿಯ ಪಾಕಿಸ್ತಾನಿ ಚೆಕ್ ಹಾಗೂ ಇತರ ಕೆಲ ಉಡುಗೊರೆಯನ್ನು ಅವರಿಗೆ ನೀಡಿದ್ದಾರೆ. ಈ ಉಡುಗೊರೆಯನ್ನು ಪಡೆದ ಅಂಜುವಿಗೆ ಪಾಕಿಸ್ತಾನದಲ್ಲಿಯೇ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಅವರು ಹೇಳಿರುವ ವಿಡಿಯೋ ವೈರಲ್ ಆಗಿದೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವೀಡಿಯೊ ವೈರಲ್ ಆಗುತ್ತಿದೆ.
'ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸುವ ಸಲುವಾಗಿ ನೀಡುತ್ತಿದ್ದೇವೆ. ನಾವು ಅಪಾರವಾಗಿ ಸಂತೋಷವಾಗಿರುವುದರಿಂದ ಅವಳನ್ನು ಅಭಿನಂದಿಸಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ" ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.
ಇನ್ನೊಂದು ವಿಚಾರವೆಂದರೆ, ಯಾರಾದರೂ ಹೊಸ ಸ್ಥಳಕ್ಕೆ ಬಂದಾಗ ಅವರಿಗೆ ಎದುರಾಗುವ ಮೊದಲ ಸಮಸ್ಯೆ ವಸತಿ. ನಮ್ಮ ಒಂದು ಪ್ರಾಜೆಕ್ಟ್ ಚಾಲ್ತಿಯಲ್ಲಿರುವ ಕಾರಣ, ಅಂಜುಗೆ ಒಂದು ವಸತಿ ನೀಡುವ ತೀರ್ಮಾನ ಮಾಡಿದ್ದೇವೆ. ನಮ್ಮ ಆಡಳಿತ ಮಂಡಳಿ ನಿರ್ದೇಶಕರು ಕೂಡ ಇದನ್ನು ಒಪ್ಪಿದ್ದಾರೆ. ಹಾಗಾಗಿ ಆಕೆಯ ಹೆಸರಿಗೆ ಜಾಗವನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಉಳಿದೆಲ್ಲವೂ ಸಣ್ಣ ಸಣ್ಣ ಉಡುಗೊರೆಗಳು. ಇಸ್ಲಾಂಗೆ ಮತಾಂತರವಾಗಿದ್ದರಿಂದ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅದನ್ನು ನೀಡಿದ್ದೆವೆ. ಇದನ್ನು ತನ್ನ ಮನೆಯೆಂದೇ ಆಕೆ ಭಾವಿಸಬೇಕು' ಎಂದು ಮೋಹ್ಶಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.
ಇದು ಅಂಜು ಲವ್ಸ್ ನಾಸ್ರುಲ್ಲಾ; ಪ್ರೀತಿಗಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಯುವತಿಯ ಕಹಾನಿ!
ಇನ್ನು ಅಂಜುವಿಗೆ ಭಾರತದಲ್ಲಿ ಅರವಿಂದ್ ಕುಮಾರ್ ಎನ್ನುವ ಹೆಸರಿನ ಪತಿ ಇದ್ದು, ವಿಚ್ಛೇದನ ಕೂಡ ಆಗಿಲ್ಲ. 2007ರಲ್ಲಿ ನಾವಿಬ್ಬರೂ ಮದುವೆಯಾಗಿದ್ದು ಮಗಳು ಕೂಡ ಇದ್ದಾಳೆ ಎಂದು ಅರವಿಂದ್ ಹೇಳಿದ್ದು, ಇನ್ನು ಮುಂದೆ ಆಕೆ ನನ್ನ ಮಗಳಿಗೆ ತಾಯಿಯಲ್ಲ ಎಂದು ಹೇಳಿದ್ದಾರೆ. ಜುಲೈ 20 ರಂದು ಗೆಳತಿಯರನ್ನು ಭೇಟಿಯಾಗುವ ಸಲುವಾಗಿ ಜೈಪುರಕ್ಕೆ ಹೋಗುತ್ತಿರುವುದಾಗಿ ಆಕೆ ಮನೆಯಿಂದ ತೆರಳಿದ್ದಳು. ಆ ಬಳಿಕ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ದಾಟಿದ್ದಾಳೆ ಎನ್ನುವ ಮಾಹಿತಿ ನಮ್ಮ ಕುಟುಂಬಕ್ಕೆ ಸಿಕ್ಕಿತ್ತು. ಆ ನಂತರವೇ ಆಕೆ ಅಲ್ಲಿ ನಸ್ರುಲ್ಲಾ ಎನ್ನುವ ವ್ಯಕ್ತಿಯನ್ನು ಮದುವೆಯಾಗಿರುವ ಫೋಟೋ ಹಾಗೂ ವಿಡಿಯೋಗಳು ಬಿತ್ತರವಾಗಿದ್ದವು. ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ತಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಂಜು ಹೇಳಿದ್ದರಾದರೂ, ನನಗೆ ಇನ್ನೂ ಆ ಬಗ್ಗೆ ನೋಟಿಸ್ ಬಂದಿಲ್ಲ ಎಂದಿದ್ದಾರೆ. 2019ರಲ್ಲಿ ಫೇಸ್‌ಬುಕ್ ಮೂಲಕ ತನಗಿಂತ ಐದು ವರ್ಷ ಕಿರಿಯನಾಗಿರುವ ನಸ್ರುಲ್ಲಾರನ್ನು 34 ವರ್ಷದ ಅಂಜು ಭೇಟಿಯಾಗಿದ್ದರು.
ಮಾಸ್ಟರ್ ಆನಂದ್ ಮಗಳಿಂದ ನಾನು ಬದುಕಿಲ್ಲ, ಯಶಸ್ವಿನಿ ಪುಗ್ಸಟ್ಟೆ ಯಾವ ಕಾರ್ಯಕ್ರಮಕ್ಕೂ ಮಗಳನ್ನ ಕಳಿಸಲ್ಲ!
ಅಧಿಕೃತ ವೀಸಾ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ: ಜುಲೈ 22 ರಂದು ಅಂಜು ಅಧಿಕೃತ ವೀಸಾ ಮೂಲಕ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದರು. ಈಕೆಯನ್ನು ನಸ್ರುಲ್ಲಾ ರಾವಲ್ಪಿಂಡಿಯಲ್ಲಿ ಸ್ವಾಗತಿಸಿದ್ದ. 30 ದಿನಗಳ ಅಧಿಕೃತ ವೀಸಾದಲ್ಲಿ ಅಂಜು ಪಾಕಿಸ್ತಾನಕ್ಕೆ ಹೋಗಿದ್ದಳು. ಅಂಜು ತನ್ನ ವೀಸಾ ಅವಧಿ ಮುಗಿದ ನಂತರ ಭಾರತಕ್ಕೆ ಹಿಂತಿರುಗುವುದಾಗಿ ನಸ್ರುಲ್ಲಾ ಈ ಹಿಂದೆ ಹೇಳಿಕೊಂಡಿದ್ದರು. ಆದರೆ, ಈಗ ಆಕೆ ನಸ್ರುಲ್ಲಾನನ್ನು ವಿವಾಹವಾಗಿ ಫಾತಿಮ ಆಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂಜುವಿನ ತಂದೆ ಗಯಾ ಪ್ರಸಾದ್ ಥಾಮಸ್, ಇದಕ್ಕಿಂತ ಆಕೆಗೆ ಸಾಯುವುದೇ ಒಳ್ಳೆಯದಿಲ್ಲ. ಆಕೆಯನ್ನು ಯಾವುದೇ ಕಾರಣಕ್ಕೆ ಭಾರತಕ್ಕೆ ಬರಲು ಬಿಡಬಾರದು ಎಂದಿದ್ದಾರೆ.