ಭಾರತ ಮತ್ತು ಪಾಕಿಸ್ತಾನದ ನಡುವೆ ಅಣು ಯುದ್ಧದ ಸಾಧ್ಯತೆ ಇತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವ್ಯಾಪಾರವನ್ನು ಅಸ್ತ್ರವಾಗಿ ಬಳಸಿ ಎರಡೂ ದೇಶಗಳ ನಾಯಕರನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದಾಗಿ ಹೇಳಿಕೊಂಡಿದ್ದಾರೆ.

ವಾಷಿಂಗ್ಟನ್‌ (ಜೂ.8): ’ಭಾರತ ಮತ್ತು ಪಾಕಿಸ್ತಾನದ ನಡುವೆ ಅಣು ಯುದ್ಧ ನಡೆಯುವ ಸಾಧ್ಯತೆ ಇತ್ತು. ನಾನು ವ್ಯಾಪಾರವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಎರಡೂ ದೇಶಗಳ ನಾಯಕರನ್ನು ಕದನ ವಿರಾಮಕ್ಕೆ ಒಪ್ಪಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ಪಾಕ್‌ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ.

ಶುಕ್ರವಾರ ತಮ್ಮ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬಹುತೇಕರಿಗೆ ಗೊತ್ತಿಲ್ಲದ ಕೆಲಸ ನಾನು ಮಾಡಿದ್ದೇನೆ. ನಾವು ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಿದ್ದೇವೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಅಣುಯುದ್ಧದ ಸಾಧ್ಯತೆ ತಪ್ಪಿಸಿದ್ದೇವೆ’ ಎಂದರು.

‘ಪಾಕ್‌-ಭಾರತ ಎರಡೂ ದೇಶಗಳ ಪ್ರಧಾನಿಗಳು ಒಳ್ಳೆಯ ನಾಯಕರು. ಇವೆರಡೂ ಅಣ್ವಸ್ತ್ರ ಹೊಂದಿರುವ ಬಲಿಷ್ಠ ರಾಷ್ಟ್ರಗಳು. ನಾನು ಎರಡೂ ದೇಶಗಳ ನಾಯಕರ ಜತೆ ಮಾತನಾಡಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಅಮೆರಿಕವು ನಿಮ್ಮ ಜತೆಗೆ ವ್ಯಾಪಾರ ನಿಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಆಗ ಎರಡೂ ದೇಶಗಳು ತಕ್ಷಣ ಯುದ್ಧ ನಿಲ್ಲಿಸಿದವು’ ಎಂದರು.

ಪಹಲ್ಗಾಂ ದಾಳಿ ಬಳಿಕ ಭಾರತವು ಆಪರೇಷನ್‌ ಸಿಂದೂರ ಕಾರ್ಯಾಚರಣೆ ಮೂಲಕ ಪ್ರತಿದಾಳಿ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆ ನಾಶ ಮಾಡಿತ್ತು. ಈ ವೇಳೆ ಎರಡೂ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದ್ದು, ಕೊನೆಗೆ ಪಾಕಿಸ್ತಾನದ ಮನವಿ ಮೇರೆಗೆ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು.