ಮೂರು ತಿಂಗಳ ಹಿಂದೆ ಕಳುವಾಗಿದ್ದ ಬೈಕ್‌ಗೆ ಮಾಲೀಕನ ಮನೆಗೆ ಟ್ರಾಫಿಕ್ ಚಲನ್ ಬಂದಿದೆ. ಆ ಚಲನ್‌ನಲ್ಲಿ ಬೈಕ್ ಓಡಿಸುತ್ತಿದ್ದ ಕಳ್ಳನ ಫೋಟೋ ಸ್ಪಷ್ಟವಾಗಿ ಮುದ್ರಿತವಾಗಿದ್ದು, ಮಾಲೀಕರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಳ್ಳನನ್ನು ಹಿಡಿಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರಿಗಿಂತ ಮುಂಚೆ ಕಳ್ಳನನ್ನು ಪತ್ತೆ ಹಚ್ಚಿದ 'ಸ್ಮಾರ್ಟ್' ಕ್ಯಾಮೆರಾ

ಹೈದರಾಬಾದ್: ಕೆಲವೊಂದು ವಾಹನಗಳು ಕಳ್ಳತನವಾದರೆ ಮರಳಿ ಸಿಗುವುದೇ ಇಲ್ಲ. ಅದರಲ್ಲು ಬೈಕ್‌ಗಳು ಒಮ್ಮೆ ಕಳ್ಳತನವಾದರೆ ಅದರ ಪಾರ್ಟ್‌ಗಳು ಬೇರೆ ಬೇರೆಯಾಗಿ ಇನ್ನೆಲ್ಲೋ ಹೋಗಿ ಸೇರುತ್ತವೆ. ಅಥವಾ ಹೊರರಾಜ್ಯಗಳಿಗೆ ಮಾರಾಟವಾಗಿ ಬಿಡುತ್ತವೆ. ಒಮ್ಮೆ ಬೈಕ್ ಕಳ್ಳತನವಾಯ್ತು ಎಂದರೆ ಅನೇಕ ಮಾಲೀಕರು ಅದರ ಆಸೆಯನ್ನೇ ಬಿಡುತ್ತಾರೆ. ಹೀಗಿರುವಾಗ ಬೈಕ್ ಕಳ್ಳನ ಫೋಟೋ ನೇರವಾಗಿ ಮನೆಗ ಬಂದರೆ ಹೇಗಿರುತ್ತದೆ. ಇಂತಹದೊಂದು ಅನುಭವ ಹೈದರಾಬಾದ್ ನಿವಾಸಿಯೊಬ್ಬರಿಗೆ ಆಗಿದ್ದು, ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಈ ಬೈಕ್ ಕಳ್ಳನನ್ನು ಹಿಡಿಯುವಂತೆ ನೆಟ್ಟಿಗರು ಪೊಲೀಸರಿಗೆ ಆಗ್ರಹಿಸುತ್ತಿದ್ದಾರೆ.

ಬೈಕ್ ಕಳವಾದ 3 ತಿಂಗಳ ಬಳಿಕ ಮನೆಗೆ ಬಂತು ಕಳ್ಳನ ಫೋಟೋ!

ಹೌದು ಟ್ರಾಫಿಕ್ ಚಲನ್‌ಗಳು ಈಗ ಮೊದಲಿನಂತೆ ಇಲ್ಲ, ಅತ್ಯಾಧುನಿಕವಾಗಿದ್ದು, ನಿಮ್ಮ ಸುಂದರವಾದ ಫೋಟೋ ಸಹಿತ ಟ್ರಾಫಿಕ್ ಚಲನ್‌ಗಳು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಹಾಗೆಯೇ ಹೈದರಾಬಾದ್‌ನ ನಿವಾಸಿಯಾದ ಫೈಸಲ್ ರೆಹಮಾನ್ ಅವರಿಗೂ ಅವರ ಬೈಕ್ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬಗ್ಗೆ ಟ್ರಾಫಿಕ್ ಚಲನ್‌ವೊಂದು ಅವರ ಮನೆ ಬಾಗಿಲು ತಲುಪಿತ್ತು. ಈ ಚಲನ್ ನೋಡಿ ಅವರು ಅಚ್ಚರಿ ಪಟ್ಟಿದ್ದರು. ಏಕೆಂದರೆ 3 ತಿಂಗಳ ಹಿಂದೆ ತಮ್ಮ ಕಳುವಾದ ಬೈಕ್‌ಗೆ ಸಂಬಂಧಿಸಿದ ಚಲನ್ ಇದಾಗಿದ್ದು, ಆ ಬೈಕ್ ಓಡಿಸುತ್ತಿದ್ದವನ ಫೋಟೋ ಸ್ಪಷ್ಟವಾಗಿ ಆ ಚಲನ್‌ನಲ್ಲಿ ಕಾಣಿಸುತ್ತಿತ್ತು.

ಇದನ್ನೂ ಓದಿ: ಗದಗದಲ್ಲಿ ಮಧ್ಯರಾತ್ರಿ ಅಟ್ಟಹಾಸ: ಗಾಢ ನಿದ್ರೆಯಲ್ಲಿದ್ದವರ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ

ತಮ್ಮ ಬೈಕ್ ನಾಪತ್ತೆಯಾದ ಬಗ್ಗೆ ಫೈಸಲ್ ರೆಹಮಾನ್ ಅವರು ಮೂರು ತಿಂಗಳ ಹಿಂದೆ ಹೈದರಾಬಾದ್‌ನ ಹಬೀಬ್‌ ನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದೂರಿನ ನಂತರವೂ ಅವರಿಗೆ ಅವರ ಬೈಕ್ ಬಗ್ಗೆ ಯಾವುದೇ ಸುಳಿವು ಸಿಗದೇ ಹೋಗಿದ್ದರಿಂದ ಅವರು ತಮ್ಮ ಬೈಕ್‌ನ ಆಸೆಯನ್ನೇ ಬಿಟ್ಟಿದ್ದರು. ಆದರೆ ಮೂರು ತಿಂಗಳ ನಂತರ ಆ ಬೈಕ್‌ನ ಟ್ರಾಫಿಕ್ ಚಲನ್ ಅವರ ಮನೆ ಬಾಗಿಲನ್ನು ತಲುಪಿದ್ದು, ಜೊತೆಗೆ ಅದರಲ್ಲಿ ಬೈಕ್ ಕಳ್ಳನ ಫೋಟೋವೂ ಕೂಡ ಮುದ್ರಿತವಾಗಿದ್ದನ್ನು ನೋಡಿ ಅವರು ಅಚ್ಚರಿಪಟ್ಟಿದ್ದರು.

ಈ ಸ್ವಯಂಚಾಲಿತ ಟ್ರಾಫಿಕ್ ಚಲನ್‌ನಲ್ಲಿ ರೈಡರ್ ಫೋಟೋ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದನ್ನು ಫೈಸಲ್ ರೆಹಮಾನ್ ಅವರು ಫೋಟೋ ಸಮೇತ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಹೈದರಾಬಾದ್ ಸಿಟಿ ಟ್ರಾಫಿಕ್ ಪೊಲೀಸರು ಹಾಗೂ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದು, ಈ ವಾಹನ ಕಳ್ಳನನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.

ನನ್ನ ಬೈಕ್ ಕಳ್ಳ ಇಲ್ಲಿದ್ದಾನೆ ನೋಡಿ: ಮನೆಗೆ ಬಂದ ಚಲನ್ ನೋಡಿ ಪೊಲೀಸರಿಗೆ ದೂರು ನೀಡಿದ ಮಾಲೀಕ

ಡಿಯರ್ @HYDTP @hydcitypolice, ನನ್ನ ವಾಹನವನ್ನು 3 ತಿಂಗಳ ಹಿಂದೆ ಕಳುವು ಮಾಡಲಾಗಿತ್ತು, ಮತ್ತು ಹಬೀಬ್ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ FIR ದಾಖಲಾಗಿದೆ. ಇಂದು, ಅದೇ ವಾಹನಕ್ಕೆ ನನಗೆ ಟ್ರಾಫಿಕ್ ಚಲನ್ ಬಂದಿದೆ, ಮತ್ತು ಫೋಟೋದಲ್ಲಿ ಕಳ್ಳನ ಮುಖ ಸ್ಪಷ್ಟವಾಗಿ ಗೋಚರಿಸುತ್ತದೆ. ದಯವಿಟ್ಟು ನೀವು ಇದರ ಬಗ್ಗೆ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬರೆದು ಅವರು ಪೋಸ್ಟ್ ಮಾಡಿದ್ದು, ಈ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ವಾಹನ ಕಳ್ಳನನ್ನು ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪೋಸ್ಟ್‌ನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 700ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಬಹುಶಃ ಇದನ್ನು ಕಳ್ಳತನ ಮಾಡಿದ ಬಳಿಕ ಮಾರಾಟ ಮಾಡಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಕಳ್ಳತನವಾದ ವಸ್ತುಗಳನ್ನು ಖರೀದಿಸುವುದು ಕೂಡ ಅಪರಾಧವೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವನು ಬಹುಶಃ ಕಳ್ಳನಿಂದ ಈ ವಾಹನವನ್ನು ಖರೀದಿಸಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ಕಳ್ಳನಾಗಿರುವ ಸಾಧ್ಯತೆ ಕಡಿಮೆ ಬಹುಶಃ ಈತ ಕಡಿಮೆ ದರಕ್ಕೆ ಈ ವಾಹನವನ್ನು ಖರೀದಿಸಿರಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಾಲೆಗಳಿಗೆ ಲಕ್ಷ ಲಕ್ಷ ವೆಚ್ಚ ಮಾಡಿದರೆ ಏನು ಪ್ರಯೋಜನ: ಪಾಠ ಮಾಡುವ ಟೀಚರ್‌ಗೆ ಗೊತ್ತಿಲ್ಲ ಕನಿಷ್ಟ ಗ್ರ್ಯಾಮರ್

Scroll to load tweet…