ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಶಾಲಾ ವಾರ್ಷಿಕೋತ್ಸವದ ವೇಳೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರಿನಿಂದಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಕೆರಳಿದ ಸಾರ್ವಜನಿಕರು ಹಾಗೂ ವಾಹನ ಸವಾರರು ಒಟ್ಟಾಗಿ ಕಾರನ್ನೇ ಕೈಗಳಿಂದ ಎತ್ತಿ ರಸ್ತೆ ಬದಿಗೆ ಸರಿಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಎಲೈಟ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಕಾರ್ಯಕ್ರಮಕ್ಕೆ ನೂರಾರು ಜನರು ಆಗಮಿಸಿದ್ದರು. ಆದರೆ, ಶಾಲಾ ಆಡಳಿತ ಮಂಡಳಿಯು ವಾಹನಗಳ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಮಾಡದ ಕಾರಣ, ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಕಾರನ್ನು ಮುಖ್ಯ ರಸ್ತೆಯ ಮೇಲೆಯೇ ಪಾರ್ಕ್ ಮಾಡಿ ಹೋಗಿದ್ದಾನೆ. ಈ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಯಿತು.
ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್
ರಸ್ತೆಯ ಮಧ್ಯದಲ್ಲೇ ಕಾರು ನಿಂತಿದ್ದರಿಂದ ಕಬ್ಬು ತುಂಬಿದ ಟ್ರಾಕ್ಟರ್‌ಗಳು ಹಾಗೂ ಪ್ರಯಾಣಿಕರ ಬಸ್‌ಗಳು ಸಂಚರಿಸಲಾಗದೆ ರಸ್ತೆಯಲ್ಲೇ ಬಾಕಿಯಾದವು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ತುರ್ತು ಕೆಲಸಗಳಿಗೆ ಹೋಗುವವರು ಹಾಗೂ ವಾಹನ ಸವಾರರು ಬಿಸಿಲಿನಲ್ಲಿ ಪರದಾಡುವಂತಾಯಿತು. ಕಾರ್ ಪಾರ್ಕ್ ಮಾಡಿದ ವ್ಯಕ್ತಿಯ ವಿರುದ್ಧ ಜನರು ಹಿಡಿಶಾಪ ಹಾಕಿದರು.
ಕಾರನ್ನೇ ಎತ್ತಿ ಸೈಡಿಗೆ ಇಟ್ಟ ಸಾರ್ವಜನಿಕರು!
ಟ್ರಾಫಿಕ್ ಜಾಮ್‌ನಿಂದ ಹೈರಾಣಾದ ಸಾರ್ವಜನಿಕರು ಕೊನೆಗೆ ತಾವೇ ರಸ್ತೆಗಿಳಿದರು. ಕಾರಿನ ಮಾಲೀಕ ಎಷ್ಟೇ ಹುಡುಕಿದರೂ ಸಿಗದಿದ್ದಾಗ, ಆಕ್ರೋಶಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು ಒಗ್ಗಟ್ಟಾಗಿ ಕಾರನ್ನೇ ಕೈಗಳಿಂದ ಎತ್ತಿ ರಸ್ತೆಯ ಪಕ್ಕಕ್ಕೆ ಸರಿಸಿದ್ದಾರೆ. ಸಾರ್ವಜನಿಕರೇ ಕಾರನ್ನು ಎತ್ತಿ ಪಕ್ಕಕ್ಕೆ ಇಟ್ಟ ವಿಡಿಯೋಗಳು ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲಾ ಆಡಳಿತ ಮಂಡಳಿ ವಿರುದ್ಧ ಜನರ ಆಕ್ರೋಶ
ಕಾರ್ಯಕ್ರಮ ಆಯೋಜಿಸುವ ಮೊದಲು ಪಾರ್ಕಿಂಗ್ ವ್ಯವಸ್ಥೆ ಮಾಡದ ಎಲೈಟ್ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಯಡವಟ್ಟಿನಿಂದಾಗಿ ಸಾಮಾನ್ಯ ಜನರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವಂತಾಯಿತು ಎಂದು ದೂರಿದ್ದಾರೆ


