- Home
- Viral News
- ಇದೇನು ನೀರಿನ ಟ್ಯಾಂಕ್ ಅಥವಾ ಹಾವಿನ ತೊಟ್ಟಿಯೋ? ಮನೆಯ ನೀರಿನ ತೊಟ್ಟಿಯಲ್ಲಿ 27 ಹಾವಿನ ಮರಿಗಳು ಪ್ರತ್ಯಕ್ಷ!
ಇದೇನು ನೀರಿನ ಟ್ಯಾಂಕ್ ಅಥವಾ ಹಾವಿನ ತೊಟ್ಟಿಯೋ? ಮನೆಯ ನೀರಿನ ತೊಟ್ಟಿಯಲ್ಲಿ 27 ಹಾವಿನ ಮರಿಗಳು ಪ್ರತ್ಯಕ್ಷ!
ಮನೆಯೊಂದರ ನೀರಿನ ಟ್ಯಾಂಕ್‌ನಲ್ಲಿ 27 ಹಾವುಮರಿಗಳು ಪತ್ತೆಯಾಗಿವೆ. ಅರಣ್ಯ ಇಲಾಖೆಯು ಇವು 'ಚೆಕರ್ಡ್ ಕೀಲ್‌ಬ್ಯಾಕ್' (ನೀರುಹಾವು) ಜಾತಿಗೆ ಸೇರಿದ ವಿಷರಹಿತ ಹಾವುಗಳೆಂದು ಖಚಿತಪಡಿಸಿ, ಅವುಗಳನ್ನು ಸುರಕ್ಷಿತವಾಗಿ ರಕ್ಷಿಸಿದೆ.

ಬೇಸಿಗೆ ಕಾಲದಲ್ಲಿ ಹಾವುಗಳು ತಮ್ಮ ಬಿಲಗಳಿಂದ ಹೊರಗೆ ಬರುವುದು ಸಾಮಾನ್ಯ. ಆಹಾರ ಅಥವಾ ನೀರಿಗಾಗಿ ಅವು ಹೊರಬಂದರೂ, ಜನರಿಗೆ ಇದು ದೊಡ್ಡ ತಲೆನೋವು ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಇದೇ ರೀತಿ ಹರಿದ್ವಾರದಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಲ್ಲಿನ ಸರಾಯ್ ಗ್ರಾಮದ ಮನೆಯೊಂದರ ನೀರಿನ ಟ್ಯಾಂಕ್‌ನಲ್ಲಿ ಬರೋಬ್ಬರಿ 27 ಹಾವುಮರಿಗಳು ಪತ್ತೆಯಾಗಿವೆ.
ವಾಟರ್ ಟ್ಯಾಂಕ್‌ನಲ್ಲಿ 27 ಹಾವುಮರಿಗಳು!
ಜೂನ್ 8 ರಂದು ಈ ಘಟನೆ ನಡೆದಿದೆ. ಮನೆಯ ಟ್ಯಾಂಕ್‌ನಿಂದ ನೀರು ಬರದಿದ್ದಾಗ, ಕುಟುಂಬದವರು ಪರಿಶೀಲಿಸಲು ಹೋಗಿದ್ದಾರೆ. ಆಗ ಟ್ಯಾಂಕ್ ಒಳಗೆ ಹಾವುಮರಿಗಳು ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಅರಣ್ಯ ಇಲಾಖೆಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಅನುಭವಿ ಹಾವು ಹಿಡಿಯುವವರಾದ ತಾಲಿಬ್ ಮತ್ತು ಭೋಲಾ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಬಹಳ ಸಮಯದ ಕಾರ್ಯಾಚರಣೆ ಬಳಿಕ, ತಾಲಿಬ್ ಮತ್ತು ಭೋಲಾ ಎಲ್ಲಾ 27 ಹಾವುಮರಿಗಳನ್ನು ಸುರಕ್ಷಿತವಾಗಿ ಹೊರತೆಗೆದರು. ಆದರೆ, ಈ ಹಾವುಗಳು ನೀರಿನ ಟ್ಯಾಂಕ್ ಒಳಗೆ ಹೇಗೆ ಬಂದವು ಎಂಬುದು ಇನ್ನೂ ನಿಗೂಢವಾಗಿದೆ.
ಇವು ಭಾರತೀಯ ಉಪಖಂಡದ ಸಿಹಿನೀರಿನ ಮೂಲಗಳ ಬಳಿ ಸಾಮಾನ್ಯವಾಗಿ ಕಂಡುಬರುವ 'ಚೆಕರ್ಡ್ ಕೀಲ್‌ಬ್ಯಾಕ್' (ನೀರುಹಾವು) ಜಾತಿಗೆ ಸೇರಿದ ಹಾವುಗಳು. ಇವು ವಿಷಕಾರಿಯಲ್ಲ, ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನೆಯವರಿಗೆ ತಿಳಿಸಿದ್ದಾರೆ.
ನೀರುಹಾವು ಚೆಕರ್ಡ್ ಕೀಲ್‌ಬ್ಯಾಕ್
'ಏಷ್ಯಾಟಿಕ್ ವಾಟರ್ ಸ್ನೇಕ್' ಎಂದೂ ಕರೆಯಲ್ಪಡುವ ಈ ಚೆಕರ್ಡ್ ಕೀಲ್‌ಬ್ಯಾಕ್ ಹಾವುಗಳನ್ನು ಕರ್ನಾಟಕದಲ್ಲಿ ಸಾಮಾನ್ಯವಾಗಿ 'ನೀರುಹಾವು' ಎಂದು ಕರೆಯುತ್ತಾರೆ. ಕೆರೆ, ನದಿ, ಕಾಲುವೆ ಮತ್ತು ಜೌಗು ಪ್ರದೇಶಗಳ ಬಳಿ ಇವು ಹೆಚ್ಚಾಗಿ ಕಾಣಸಿಗುತ್ತವೆ. ಇವು ವಿಷರಹಿತ ಹಾವುಗಳು. ಇವುಗಳ ಮೈಮೇಲಿನ ವಿಶಿಷ್ಟವಾದ ಚೌಕಳಿ ವಿನ್ಯಾಸದಿಂದ (ಚೆಕರ್ಡ್ ಪ್ಯಾಟರ್ನ್) ಇವನ್ನು ಸುಲಭವಾಗಿ ಗುರುತಿಸಬಹುದು.
ಮೀನು, ಕಪ್ಪೆ ಹಾಗೂ ಇತರ ಸಣ್ಣ ಜಲಚರಗಳನ್ನು ಇವು ತಿಂದು ಬದುಕುತ್ತವೆ. ಅಪಾಯ ಎದುರಾದಾಗ ಆಕ್ರಮಣಕಾರಿ ಸ್ವಭಾವ ತೋರಿಸಿದರೂ, ಸಾಮಾನ್ಯವಾಗಿ ಮನುಷ್ಯರಿಗೆ ಇವುಗಳಿಂದ ಯಾವುದೇ ಹಾನಿಯಿಲ್ಲ. ಸಿಹಿನೀರಿನ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಈ ಹಾವುಗಳು ಪ್ರಮುಖ ಪಾತ್ರ ವಹಿಸುತ್ತವೆ.

