ಪಾಕಿಸ್ತಾನದ ಟ್ರಾವೆಲ್ ಏಜೆನ್ಸಿ ಮಾಲಕಿಯೊಬ್ಬರು ಭಾರತೀಯ ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳನ್ನು ಪಾಕ್‌ಗೆ ಪ್ರವಾಸಕ್ಕೆ ಕಳುಹಿಸಿ ಗೂಢಚಾರಿಕೆಗೆ ಬಳಸಿಕೊಳ್ಳುತ್ತಿದ್ದರು. ಈಕೆ 'ಮೇಡಂ ಎನ್‌' ಎಂದೇ ಕರೆಯಲ್ಪಡುವ ನೊಷಾಬಾ ಶೆಹಜಾದ್‌, ಲಾಹೋರ್‌ನ ಟ್ರಾವೆಲ್ ಏಜೆನ್ಸಿ ಮಾಲಕಿ.

ಶ್ರೀನಗರ/ನವದೆಹಲಿ (ಜೂ.6): ಭಾರತ ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳಿಗೆ ಗಾಳ ಹಾಕಿ ಅವರನ್ನು ಗೂಢಚಾರಿಕೆಗೆ ಬಳಸುವಲ್ಲಿ ಪಾಕಿಸ್ತಾನದಲ್ಲಿ ಟ್ರಾವೆಲ್‌ ಏಜೆನ್ಸಿ ನಡೆಸುತ್ತಿರುವ ಮಹಿಳಾ ಉದ್ಯಮಿಯೊಬ್ಬಳ ಪಾತ್ರವಿರುವುದು ಇದೀಗ ಬಯಲಾಗಿದೆ.

ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳ ಪಾಕ್‌ ಪ್ರವಾಸಕ್ಕೆ ನೆರವು ನೀಡುತ್ತಿದ್ದ ಈಕೆ, ನಂತರ ಪಾಕ್‌ ಪರ ಗೂಢಚಾರಿಕೆಗೆ ಅವರನ್ನು ಬಳಸಿಕೊಳ್ಳಲು ವೇದಿಕೆ ಸಿದ್ಧಪಡಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ಲಾಹೋರ್‌ ಮೂಲದ ಜೈಯಾನ್ ಟ್ರಾವೆಲ್ ಆ್ಯಂಡ್‌ ಟೂರಿಸಂ ಕಂಪನಿಯ ಮಾಲಕಿ ನೊಷಾಬಾ ಶೆಹಜಾದ್‌ ಭಾರತದ ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳಾದ ಜ್ಯೋತಿ ಮಲ್ಹೋತ್ರಾ, ಇತರರನ್ನು ಪಾಕ್‌ಗೆ ಭೇಟಿ ನೀಡಲು ನೆರವು ನೀಡಿದ್ದಳು.

ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ‘ಮೇಡಂ ಎನ್‌’ ಎಂದೇ ಕರೆಯಲ್ಪಡುವ ಶೆಹಜಾದ್‌ಳ ನಿಜವಾದ ಮುಖ ಪಾಕ್‌ ಪರ ಗೂಢಚಾರಿಕೆ ಮಾಡಿ ಸೆರೆ ಸಿಕ್ಕ ಭಾರತೀಯರ ವಿಚಾರಣೆ ವೇಳೆ ಬಯಲಾಗಿದೆ. ಈಕೆ ಭಾರತದಲ್ಲಿ ಕನಿಷ್ಠ 500 ಮಂದಿ ಗೂಢಚಾರರ ಸ್ಲೀಪರ್‌ ಸೆಲ್‌ ನೆಟ್‌ವರ್ಕ್‌ ಸ್ಥಾಪಿಸಲು ಕೆಲಸ ಮಾಡುತ್ತಿದ್ದಳು. ಪಾಕ್‌ ಸೇನೆ ಈಕೆಗೆ ಭಾರತದಲ್ಲಿ ಯಾವ ರೀತಿ ಸ್ಲೀಪರ್‌ ಸೆಲ್‌ ನೆಟ್‌ವರ್ಕ್‌ ಸ್ಥಾಪಿಸಬೇಕೆಂದು ಸಲಹೆ-ಸೂಚನೆಗಳನ್ನೂ ಕೊಡುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಈಕೆ ಭಾರತದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳನ್ನು ಪಾಕ್‌ ಸೇನೆ ಮತ್ತು ಐಎಸ್‌ಐಗೆ ಪರಿಚಯಿಸುತ್ತಿದ್ದಳು, ಹಿಂದೂ ಮತ್ತು ಸಿಖ್ಖರಿಗೆ ಪಾಕ್‌ ಪರ ಕೆಲಸ ಮಾಡಲು ಆಮಿಷವೊಡ್ಡುತ್ತಿದ್ದಳು. ಕಳೆದ 6 ತಿಂಗಳಲ್ಲಿ ಈಕೆ 3 ಸಾವಿರ ಭಾರತೀಯರು ಮತ್ತು 1500 ಮಂದಿ ಭಾರತೀಯ ಎನ್‌ಆರ್‌ಐಗಳಿಗೆ ಪಾಕ್‌ಗೆ ಭೇಟಿ ನೀಡಲು ನೆರವು ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.