ಪಾಕಿಸ್ತಾನದ ಪರ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಜಾನ್ ಮಹಲ್ ಯೂಟ್ಯೂಬ್ ಚಾನೆಲ್‌ನ ಜಸ್ಬೀರ್ ಸಿಂಗ್ ಬಂಧನ. ಬಂಧಿತೆ ಜ್ಯೋತಿ ಮಲ್ಹೋತ್ರಾ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪ.

ಚಂಡೀಗಢ (ಜೂ.5): ಭಾರತದಲ್ಲಿದ್ದು ಪಾಕಿಸ್ತಾನದ ಪರ ಗೂಢಚರ್ಯೆ ನಡೆಸಿದವರ ಬಂಧನ ಸರಣಿ ಮುಂದುವರೆದಿದೆ. ಪಾಕ್ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಜ್ಯೋತಿ ಮಲ್ಹೋತ್ರಾ ಜೊತೆಗೆ ಸಂಪರ್ಕದಲ್ಲಿದ್ದ ಜಸ್ಬೀರ್‌ ಸಿಂಗ್ ಎಂಬ ಯೂಟ್ಯೂಬರ್‌ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ರೂಪನಗರ ಜಿಲ್ಲೆಯ ಮಹ್ಲಾನ್ ಗ್ರಾಮದ ಜಸ್ಬೀರ್‌ ಸಿಂಗ್ 10 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜಾನ್ ಮಹಲ್ ಎಂಬ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದನು. ಆತ ಬೇಹುಗಾರಿಕೆ ಪ್ರಕರಣದ ಬಂಧಿತೆ ಜ್ಯೋತಿ ಜತೆ ನಿಕಟ ಸಂಪರ್ಕದಲ್ಲಿರುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೇ ಆತನು ಕೂಡ 3 ಬಾಕಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದ್ದು, ‘ಜಸ್ಬೀರ್‌ ಸಿಂಗ್ ಪಾಕಿಸ್ತಾನ ಗುಪ್ತಚರದ ಶಕೀರ್‌ ಅಲಿಯಾಸ್‌ ಜುಟ್‌ ರಂಧಾವಾ ಎನ್ನುವಾತ ಜೊತೆಗೆ ನಂಟು ಹೊಂದಿದ್ದಾನೆ. ಅಲ್ಲದೇ ಭಾರತದಲ್ಲಿ ಪಾಕ್ ಹೈಕಮಿಷನ್ ಅಧಿಕಾರಿಯಾಗಿದ್ದ ಡ್ಯಾನಿಶ್‌ ಜೊತೆಗೆ ಸಂಪರ್ಕ ಹೊಂದಿದ್ದ. ಆತನ ಆಹ್ವಾನದ ಮೇರೆಗೆ ದೆಹಲಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ.’

‘ಅಲ್ಲಿ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಹಾಗೂ ವ್ಲಾಗರ್‌ಗಳನ್ನು ಭೇಟಿಯಾಗಿದ್ದ. ಈ ನಡುವೆ 2020, 2021,2024ರಲ್ಲಿ ಒಟ್ಟು 3 ಬಾರಿ ಪಾಕಿಸ್ತಾನ ಹೋಗಿ ಬಂದಿದ್ದ. ಅಲ್ಲದೇ ಆತನಲ್ಲಿ ಹಲವಾರು ಪಾಕಿಸ್ತಾನಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದು, ಜ್ಯೋತಿ ಬಂಧನ ಬಳಿಕ ತಾನು ಬಚಾವಾಗಲು ಪಾಕ್‌ ಜತೆಗಿನ ಸಂಪರ್ಕದ ಗುರುತು ಅಳಿಸಲು ಪ್ರಯತ್ನಿಸಿದ್ದ’ ಎಂದಿದ್ದಾರೆ.

ಇನ್ನು ಪ್ರಕರಣ ಸಂಬಂಧ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.