ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಶೆಹಜಾದ್ ವಹಾಬ್ ಎಂಬ ಖದೀಮನನ್ನು ಬಂಧಿಸಲಾಗಿದೆ. 

ಲಕ್ಕೋ: ದಿನಗಳ ಹಿಂದಷ್ಟೇ ಭಾರತದ ಒಬ್ಬಳು ಯುಟ್ಯೂಬರ್ ಸೇರಿದಂತೆ ಒಟ್ಟು ಆರು ಜನರನ್ನು ಪಾಕ್ ಪರ ಗೂಢಚರ್ಯೆ ಮಾಡಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಈಗ ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಓರ್ವ ಖದೀಮನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮೊಹಲ್ಲಾ ಆಜಾದ್ ನಗರದ ತಾಂಡಾದ ಮನೆ ಸಂಖ್ಯೆ 135 ರ ನಿವಾಸಿ ಶೆಹಜಾದ್ ವಹಾಬ್ ಎಂದು ಗುರುತಿಸಲಾಗಿದೆ. 

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಶಂಕಿತ ಪಾಕಿಸ್ತಾನಿ ಗೂಢಚಾರ ಶೆಹಜಾದ್‌ ವಹಾಬ್‌ನನ್ನು ಭಾನುವಾರ ಬಂಧಿಸಿದೆ. ಯುಪಿ ಎಟಿಎಸ್ ಅಧಿಕಾರಿಗಳ ಪ್ರಕಾರ, ಭಾರತ-ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರ ಬೆಂಬಲವನ್ನು ಪಡೆಯುತ್ತಿದ್ದಾನೆ ಎಂಬ ವಿಶ್ವಾಸಾರ್ಹ ಮಾಹಿತಿ ಸಿಕ್ಕ ನಂತರ ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ.

ಶೆಹಜಾದ್ ಕಳೆದ ಹಲವಾರು ವರ್ಷಗಳಿಂದ ಪಾಕಿಸ್ತಾನಕ್ಕೆ ಆಗಾಗ್ಗೆ ಪ್ರಯಾಣಿಸುತ್ತಿದ್ದ ಮತ್ತು ಸೌಂದರ್ಯವರ್ಧಕಗಳು, ಮಸಾಲೆಗಳು, ಬಟ್ಟೆ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಸರಕುಗಳನ್ನು ಗಡಿಯುದ್ದಕ್ಕೂ ಅಕ್ರಮವಾಗಿ ಸಾಗಿಸುತ್ತಿದ್ದ ಎಂದು ಎಟಿಎಸ್‌ ತನಿಖೆಯಿಂದ ಬಯಲಾಗಿದೆ. ವ್ಯಾಪಾರದ ಸೋಗಿನಲ್ಲಿ ಶೆಹಜಾದ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಕಾರ್ಯಕರ್ತರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದ ಮತ್ತು ಭಾರತದ ಆಂತರಿಕ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಐಎಸ್‌ಐಗೆ ಒದಗಿಸುತ್ತಿದ್ದ ಎಂದು ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಶೆಹಜಾದ್ ಐಎಸ್‌ಐ ಏಜೆಂಟ್‌ ಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಲ್ಲದೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಹ್ಯಾಂಡ್ಲರ್‌ಳಿಗೆ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸಿದ್ದ ಎಂದು ಅಧಿಕಾರಿ ಹೇಳಿದರು. ಭಾರತದಲ್ಲಿ ಐಎಸ್‌ಐ ಸಂಬಂಧಿತ ವ್ಯಕ್ತಿಗಳಿಗೆ ಹಣವನ್ನು ವರ್ಗಾಯಿಸಲು ಈ ಶೆಹಜಾದ್‌ ಸಹಾಯ ಮಾಡಿದ್ದ ಎಂದು ಎಡಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

 ಇದಲ್ಲದೆ, ಶೆಹಜಾದ್ ರಾಂಪುರ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡು, ಐಎಸ್‌ಐಗೆ ಸಹಾಯ ಮಾಡುವ ಅಂತಿಮ ಗುರಿಯೊಂದಿಗೆ ಕಳ್ಳಸಾಗಣೆ ಅಥವಾ ಉದ್ಯೋಗದ ನೆಪದಲ್ಲಿ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಪಾಕಿಸ್ತಾನದ ಗುಪ್ತಚರ ವ್ಯವಸ್ಥಾಪಕರು ಶೆಹಜಾದ್ ಆಯ್ಕೆ ಮಾಡಿದ ಈ ವ್ಯಕ್ತಿಗಳಿಗೆ ವೀಸಾ ಮತ್ತು ಇತರ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುತ್ತಿದ್ದರು ಎಂದು ಎಟಿಎಸ್ ಅಧಿಕಾರಿ ಹೇಳಿದ್ದಾರೆ.

ಶೆಹಜಾದ್ ಐಎಸ್‌ಐ ಏಜೆಂಟ್‌ಗಳಿಗೆ ಅವರ ಬೇಹುಗಾರಿಕೆ ಚಟುವಟಿಕೆಗಳಿಗೆ ಸಹಾಯ ಮಾಡಲು ಭಾರತೀಯ ಸಿಮ್ ಕಾರ್ಡ್‌ಗಳನ್ನು ಸಹ ಪೂರೈಸಿದ್ದಾನೆ ಎಂದು ಅಧಿಕಾರಿ ಹೇಳಿದರು. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ಎಟಿಎಸ್ ಲಕ್ಕೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಇದರಲ್ಲಿ ಬೇಹುಗಾರಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆರೋಪಗಳು ಸೇರಿವೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.