Asianet Suvarna News Asianet Suvarna News

ಚೆನ್ನೆನಲ್ಲಿ ಭಾರಿ ಮಳೆಗೆ ಶಾಲಾ ಕಾಲೇಜುಗಳಿಗೆ ರಜೆ: ಲ್ಯಾಂಡಿಂಗ್ ಮಾಡಲಾಗದೇ ಬೆಂಗಳೂರಿನತ್ತ ಬಂದ ವಿಮಾನಗಳು

ಚೆನ್ನೈನಲ್ಲಿ ನಿನ್ನೆ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಒಂದೆಡೆ ಬಿಸಿಲಿನಿಂದ ಕಂಗೆಟ್ಟ ಜನರಿಗೆ ವರುಣ ತಂಪೆರೆದಿದ್ದಾನೆ. ಜೊತೆಗೆ ತೀವ್ರವಾದ ನಿರಂತರ ಮಳೆಯಿಂದಾಗಿ ಚೆನ್ನೈ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Heavy rains in lashes out in Chennai causes schools and colleges off: Flights diverted to Bangalore after unable to land in chennai akb
Author
First Published Jun 19, 2023, 9:13 AM IST | Last Updated Jun 19, 2023, 9:14 AM IST

ಚೆನ್ನೈ: ಚೆನ್ನೈನಲ್ಲಿ ನಿನ್ನೆ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಒಂದೆಡೆ ಬಿಸಿಲಿನಿಂದ ಕಂಗೆಟ್ಟ ಜನರಿಗೆ ವರುಣ ತಂಪೆರೆದಿದ್ದಾನೆ. ಜೊತೆಗೆ ತೀವ್ರವಾದ ನಿರಂತರ ಮಳೆಯಿಂದಾಗಿ ಚೆನ್ನೈ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 6ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳು ಲ್ಯಾಂಡ್ ಆಗಲಾಗದೇ ಬೆಂಗಳೂರಿಗೆ ಮಾರ್ಗ ಬದಲಿಸಿವೆ. ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಗುಡುಗು ಮಿಂಚುಗಳ ಸಹಿತ ಭಾರಿ ಮಳೆಯಾಗಿದ್ದು, ಈ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಭಾರೀ ಮಳೆಯಿಂದಾಗಿ ಚೆನ್ನೈಗೆ ತೆರಳುತ್ತಿದ್ದ ಆರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು (International Airport) ಬೆಂಗಳೂರಿಗೆ ತಿರುಗಿಸಲಾಗಿದೆ. ಅಷ್ಟೇ ಅಲ್ಲದೇ ಮಳೆಯಿಂದಾಗಿ ಟೇಕಾಫ್ ಮಾಡಲಾಗದೇ 12ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನದಲ್ಲಿಯೂ ವಿಳಂಬವಾಗಿದೆ. ಚೆನ್ನೈನ ಮೀನಂಬಾಕ್ಕಂನಲ್ಲಿ ಇಂದು ಮುಂಜಾನೆ 5.30ರವರೆಗೆ ಮಳೆ ಸುರಿದಿದ್ದು, 13.7 ಸೆಂ.ಮೀ ಮಳೆಯಾಗಿದೆ.

ರಾಜ್ಯದಲ್ಲಿ ಮುಂಗಾರು ಚುರುಕು: 5 ದಿನ ಉತ್ತಮ ಮಳೆ ಸಂಭವ

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಸಾಕಷ್ಟು ನೀರಿನ ಮೂಲಗಳ ಒಳಹರಿವು ಹೆಚ್ಚಿದ್ದು ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೆಳಗ್ಗೆ 10 ಗಂಟೆಯವರೆಗೆ ಸಾಧಾರಣ ಮಳೆ ಮುಂದುವರೆಯು ನಿರೀಕ್ಷೆಯಿದೆ. ಚೆನ್ನೈ (Chennai) ಮತ್ತು ಹಲವು ಜಿಲ್ಲೆಗಳಲ್ಲಿ ಜೂನ್ 21 ರವರೆಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಬಾರದ ಮುಂಗಾರು, ಮುಧೋಳದಲ್ಲಿ ಜಲಮೂಲಗಳು ಖಾಲಿ ಖಾಲಿ 

ರಾಜಸ್ಥಾನದಲ್ಲಿ ಪ್ರವಾಹ, ಉತ್ತರ ಗುಜರಾತ್‌ನಲ್ಲಿ ಭಾರಿ ಮಳೆ

ಗುಜರಾತ್‌ನಲ್ಲಿ ಸಾಕಷ್ಟು ಪ್ರಾಕೃತಿಕ ಅನಾಹುತ ಸೃಷ್ಟಿಸಿದ ಬಳಿಕ ವಾಯುಭಾರ ಕುಸಿತವಾಗಿ ಬದಲಾಗಿರುವ ಬಿಪೊರ್‌ಜೊಯ್‌ ಚಂಡಮಾರುತ, ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದರೆ, ಉತ್ತರ ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಿದೆ.

ಶುಕ್ರವಾರ ಸಂಜೆ ರಾಜಸ್ಥಾನ ಪ್ರವೇಶ ಮಾಡಿದ್ದ ಬಿಪೊರ್‌ಜೊಯ್‌ ಚಂಡಮಾರುತ ಕಳೆದ 3 ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆ ಸುರಿಸುತ್ತಿದ್ದು, ಜಲೋರ್‌, ಸಿರೋಹಿ ಮತ್ತು ಬಾಢ್ಮೇರ್‌ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು(NDRF) ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಪಾಲಿ ಜಿಲ್ಲೆಯಲ್ಲಿ ನೀರಿನಲ್ಲಿ ಸಿಕ್ಕಿಬಿದ್ದಿದ್ದ 6 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ. ಆದರೆ ಇದುವರೆಗೆ ರಾಜ್ಯದಲ್ಲಿ ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಬಿಪೊರ್‌ಜೊಯ್‌ನ (BiporJoy) ಪರಿಣಾಮಗಳು ಉತ್ತರ ಗುಜರಾತ್‌ನ (Gujarat) ಎರಡು ಜಿಲ್ಲೆಗಳಲ್ಲಿ ಇನ್ನೂ ತನ್ನ ಪ್ರಭಾವ ಮುಂದುವರೆಸಿದೆ. ಬನಾಸ್‌ಕಂಠಾ ಮತ್ತು ಪಾಟಣ್‌ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆ ಸುರಿದಿದೆ. ಬನಸ್‌ಕಂಠಾ ಜಿಲ್ಲೆಯ ಅಮೀರ್‌ಗಢ ತಾಲೂಕಿನಲ್ಲಿ 24 ಗಂಟೆ ಅವಧಿಯಲ್ಲಿ 20.6 ಸೆ.ಮೀ, ದಂತಾ, ಧನೇರಾ ತಾಲೂಕಿನಲ್ಲಿ ಕ್ರಮವಾಗಿ 16.8, 16.4 ಸೆ.ಮೀ ಪೊಸಿನಾದಲ್ಲಿ 15.1 ಸೆ.ಮೀ, ದಂತೀವಾಡಾದಲ್ಲಿ 15 ಸೆ.ಮೀ.,ಪಾಲನ್‌ಪುರದಲ್ಲಿ 13.6 ಸೆ.ಮೀ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios