ನದಿಯಲ್ಲಿ ಮುಳುಗುತ್ತಿದ್ದ ಶ್ವಾನವನ್ನು ರಕ್ಷಿಸಿದ ಯುವಕ: ವಿಡಿಯೋ ವೈರಲ್
- ನದಿಯ ಬದಿಯಲ್ಲಿ ರಕ್ಷಣೆಗಾಗಿ ಕಾಯುತ್ತಿದ್ದ ಶ್ವಾನ
- ಶ್ವಾನವನ್ನು ರಕ್ಷಿಸಲು ಸಂಭ್ರಮಾಚರಣೆ ಬಿಟ್ಟು ಬಂದ ಯುವಕ
- ಕೊನೆಗೂ ಇಬ್ಬರು ಯುವಕರ ಶ್ರಮದಿಂದ ಪಾರಾದ ಶ್ವಾನ
ನದಿಯಲ್ಲಿ ಸಿಲುಕಿ ಮೇಲೆ ಬರಲಾಗದೇ ರಕ್ಷಣೆಗಾಗಿ ಕಾಯುತ್ತಿದ್ದ ಶ್ವಾನವನ್ನು ಯುವಕನೋರ್ವ ರಕ್ಷಿಸಿದ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ತೊಡಗಿದ್ದ ಯುವಕನಿಗೆ ಶ್ವಾನವೊಂದು ನದಿಯಲ್ಲಿ ಸಿಲುಕಿ ಮೇಲೆ ಬರಲಾರದೇ ಒದ್ದಾಡುತ್ತಿರುವುದು ತಿಳಿದಿದೆ. ಕೂಡಲೇ ಮದ್ವೆ ಸಮಾರಂಭದಿಂದ ಹೊರಟು ಬಂದ ಆತ ಶ್ವಾನದ ರಕ್ಷಣೆಗೆ ಮುಂದಾಗಿದ್ದಾನೆ. ಈತನಿಗೆ ಮತ್ತೊಬ್ಬ ವ್ಯಕ್ತಿ ಜೊತೆಯಾಗಿದ್ದು, ಇಬ್ಬರು ಸೇರಿ ಶ್ವಾನವನ್ನು ರಕ್ಷಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, 70 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವೀಡಿಯೊದಲ್ಲಿ ಕಾಣಿಸುವಂತೆ ತುಂಬಿ ಹರಿಯುತ್ತಿರುವ ನದಿಯ ಒಂದು ಭಾಗದಲ್ಲಿ ಶ್ವಾನವೂ ಆಸರೆಗಾಗಿ ತನ್ನ ಮುಂಭಾಗದ ಎರಡು ಕೈಗಳನ್ನು ಎತ್ತಿ ಹಿಂಭಾಗದ ಎರಡು ಕಾಲುಗಳ ಮೇಲೆ ನಿಂತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ ಅಲ್ಲಿಗೆ ಬರುವ ಸೂಟು ಬೂಟುಧಾರಿ ವ್ಯಕ್ತಿಯೊಬ್ಬ ನಾಯಿಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ತಮ್ಮ ಸೂಟನ್ನು ಬಿಚ್ಚುವ ಅವರು ಅದನ್ನು ನದಿಯ ಪಕ್ಕದ ದಡದಲ್ಲಿ ಇರಿಸಿ ನದಿ ಪಕ್ಕದ ಕಾಂಕ್ರೀಟ್ ಗೋಡೆಯ ಮೇಲೆ ಮಲಗಿ ಶ್ವಾನದತ್ತ ಕೈ ನೀಡುತ್ತಾರೆ. ಆದರೂ ಶ್ವಾನವನ್ನು ಮುಟ್ಟಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ತಮ್ಮನ್ನು ಅಪಾಯಕ್ಕೊಡುತ್ತಾ ಆತ ಮತ್ತಷ್ಟು ಕೆಳಗೆ ಬಾಗುತ್ತಾರೆ.
ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಚೆಂಡು ಎತ್ತಿಕೊಂಡು ಹೋದ ಶ್ವಾನ
ಈ ವೇಳೆ ಅಲ್ಲಿಗೆ ಬರುವ ಮತ್ತೊಬ್ಬ ಸೂಟುಧಾರಿ ವ್ಯಕ್ತಿ ಆತನಿಗೆ ನಾಯಿಯನ್ನು ರಕ್ಷಿಸಲು ಸಹಾಯ ಮಾಡುತ್ತಾರೆ. ಆತ ನಾಯಿಯನ್ನು ರಕ್ಷಿಸಲು ಕೆಳಗೆ ಬಾಗುತ್ತಿದ್ದಂತೆ ಮತ್ತೊಬ್ಬರು ಆತನನ್ನು ನದಿಗೆ ಬೀಳದಂತೆ ಹಿಂಭಾಗದಿಂದ ಹಿಡಿದುಕೊಳ್ಳುತ್ತಾರೆ. ಈ ವೇಳೆ ಕೆಳಗೆ ಬಾಗಿದ ವ್ಯಕ್ತಿಗೆ ಶ್ವಾನ ಸಿಗುವುದು ಹಾಗೂ ಅವರು ಅದನ್ನು ಮೇಲೆತ್ತುತ್ತಾರೆ. ಹೀಗೆ ರಕ್ಷಿಸಲ್ಪಟ್ಟ ನಾಯಿ ಆತನಿಗೆ ತನ್ನ ಬಾಲವನ್ನು ಆಡಿಸಿ ಕೃತಜ್ಞತೆ ಸಲ್ಲಿಸಿದ್ದಲ್ಲದೇ ಆತನನ್ನೇ ಹಿಂಬಾಲಿಸಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ರೆಡ್ಡಿಟ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯನ್ನು ಕೋಟ್‌ಲೆಸ್ ಹೀರೋ ಎಂದು ಪ್ರಶಂಸಿದ್ದಾರೆ. ಈ ವೀಡಿಯೊಗೆ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಇದು ನಿಜವಾಗಿಯೂ ನನ್ನ ಹೃದಯವನ್ನು ಬೆಚ್ಚಗಾಗಿಸುತ್ತದೆ ಎಂದು ಬರೆದಿದ್ದಾರೆ.
ಪ್ರಾಣಿಗಳೇ ಗುಣದಲಿ ಮೇಲು: ಭೂಕಂಪದ ವೇಳೆ ಸ್ನೇಹಿತನ ರಕ್ಷಿಸಿದ ಶ್ವಾನ, ವಿಡಿಯೋ
ಬಾವಿಗೆ ಬಿದ್ದ ಬೀದಿ ನಾಯಿಯನ್ನು (Street Dog) ಅರ್ಧಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಇತ್ತೀಚೆಗೆ ಬೆಳಗಾವಿಯಲ್ಲಿ (Belagavi) ನಡೆದಿತ್ತು. ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ (Dog) ಕಚ್ಚಿದರೂ ಸಹ ಛಲಬಿಡದೇ ರಕ್ಷಣೆ ಮಾಡಿದ್ದು, ಮೇ 10ರ ಬೆಳಗ್ಗೆ ನಡೆದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿ ನಗರದ ಕಚೇರಿ ಗಲ್ಲಿಯಲ್ಲಿ ಮಕ್ಕಳ ಕಲ್ಲೇಟಿಗೆ ಮೇ 10ರ ಬೆಳಗ್ಗೆ 10 ಗಂಟೆಗೆ ಬೀದಿ ನಾಯಿಯೊಂದು ಬಾವಿಗೆ ಬಿದ್ದಿತ್ತು. ಬೀದಿನಾಯಿ ಬಾವಿಗೆ ಬಿದ್ದ ಬಗ್ಗೆ ಸ್ಥಳೀಯರು ಎಸ್ ಡಿಆರ್‌ಎಫ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ಬಾವಿಗಿಳಿದು ಬೀದಿ ನಾಯಿಯನ್ನು ರಕ್ಷಿಸಿದ್ದಾರೆ.
ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ, ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ ಕಚ್ಚಿದರೂ ಛಲಬಿಡದೇ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ್ದಾರೆ. ಬಾವಿಗೆ ಬಿದ್ದ ಬೀದಿನಾಯಿ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.