ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲ ಮಹತ್ವದ ನಿರ್ಧಾರಗಳು ಹೊರಬಂದಿದೆ. ಇದೀಗ ಗುಜರಾತ್ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಫೈನಲ್ ಅನುಮತಿಗೆ ಕಾಯುತ್ತಿದ್ದಾರೆ.

ಅಹಮ್ಮದಬಾದ್ (ಅ.01) ಗುಜರಾತ್ ಬಿಜೆಪಿಯ ಭದ್ರಕೋಟೆಯಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕವೂ ಗುಜರಾತ್‌ನಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಿದೆ. ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಇದೀಗ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಗುಜರಾತ್ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಸೇರಲು ಕಾಂಗ್ರೆಸ್ ಹೈಕಮಾಂಡ್ ಅಂತಿಮ ಅನುಮತಿಗಾಗಿ ಸ್ಥಳೀಯ ನಾಯಕರು ಕಾಯುತ್ತಿದ್ದಾರೆ. ಹೌದು ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹ ವಘೇಲಾ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತಗೊಂಡಿದೆ.

ಜನಸಂಘದಿಂದ ರಾಜಕೀಯ ಆರಂಭಿಸಿದ ವಘೇಲಾ

ಜನ ಸಂಘದ ಸದಸ್ಯನಾಗಿ ರಾಜಕೀಯ ಆರಂಭಿಸಿದ ವಘೇಲಾ ಬಳಿಕ ಭಾರತೀಯ ಜನತಾ ಪಾರ್ಟಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇದೀಗ ಶಂಕರ್ ಸಿನ್ಹ ವಘೇಲಾ ಮತ್ತೆ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಗುಜರಾತ್ ಕಾಂಗ್ರೆಸ್ ಈಗಾಗಲೇ ಶಂಕರ್ ಸಿನ್ಹ ವಘೇಲಾಗೆ ಗ್ರೀನ್ ಸಿಗ್ನಲ್ ನೀಡಿದೆ. ಗುಜರಾತ್ ಕಾಂಗ್ರೆಸ್ ನಾಯಕರು ವಘೇಲಾರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ಹಲವು ಸುತ್ತಿನ ಸಭೆ ನಡೆಸಿ ಸರ್ವಾನುಮತದ ಅನುಮತಿ ನೀಡಿದೆ. ಕೇವಲ ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದಾರೆ.

ಗಾಂಧಿನಗರ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ

ಗಾಂಧಿನಗರದ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಗೆಲ್ಲಲು ಕಾಂಗ್ರೆಸ್ ಭಾರಿ ಕಸರತ್ತು ನಡೆಸುತ್ತಿದೆ. ಗಾಂಧಿನಗರ ಚುನಾವಣೆ ಗೆದ್ದರೆ ಗುಜರಾತ್ ವಿಧಾನಸಭೆಯಲ್ಲೂ ಅಧಿಕಾರ ಹಿಡಿಯಬಹುದು ಅನ್ನೋ ಮಾತಿದೆ. ಇದಕ್ಕಾಗಿ ಮೊದಲು ಗಾಂಧಿನಗರ ಮುನ್ಸಿಪಲ್ ಕಾರ್ಪೋರೇಶನ್ ಗೆದ್ದು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಅವಿರತ ಪ್ರಯತ್ನಪಡುತ್ತಿದೆ. ಹೀಗಾಗಿ ಶಂಕರ್ ಸಿನ್ಹ ವಘೇಲಾ ಅವರನ್ನು ಗಾಂಧಿನಗರ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ಗುಜರಾತ್ ಕಾಂಗ್ರೆಸ್ ಮುಂದಾಗಿದೆ.

ನರೇಂದ್ರ ಮೋದಿ ಜೊತೆ ಕೆಲಸ ಮಾಡಿದ್ದ ವಘೇಲಾ

86ರ ಹರೆಯದ ವಘೇಲಾ ಗುಜರಾತ್ ರಾಜಕೀಯದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಜನಸಂಘದ ಸದಸ್ಯರಾಗಿದ್ದ ವಘೇಲಾ ಬಳಿಕ ಬಿಜೆಪಿ ಪಾರ್ಟಿ ಮೂಲಕ ಅತೀ ದೊಡ್ಡ ನಾಯಕರಾಗಿ ಬೆಳೆದಿದ್ದರು. ಬಿಜೆಪಿಯ ಕೇಶುಬಾಯಿ ಪಟೇಲ್, ನರೇಂದ್ರ ಮೋದಿ ಜೊತೆ ಕೆಲಸ ಮಾಡಿದ್ದ ವಘೇಲಾ 1996ರಲ್ಲಿ ಭಿನ್ನಾಭಿಪ್ರಾಯ ಕಾರಣದಿಂದ ಬಿಜೆಪಿ ತೊರೆದಿದ್ದರು. ಬಳಿಕ ರಾಷ್ಟ್ರೀಯ ಜನತಾ ಪಾರ್ಟಿ ಆರಂಭಿಸಿದ್ದರು.

ರಾಷ್ಟ್ರೀಯ ಜನತಾ ಪಾರ್ಟಿಗೆ ಕಾಂಗ್ರೆಸ್ ನೀಡಿದ ಬೆಂಬಲದ ಪರಿಣಾಮ 1996ರಿಂದ 1997ರ ಅವಧಿಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ವಘೇಲಾ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ತಮ್ಮ ರಾಷ್ಟ್ರೀಯ ಜನತಾ ಪಾರ್ಟಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಳಿಕ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಯುಪಿಎ ಸರ್ಕಾರದಲ್ಲಿ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದ ವಘೇಲಾ 2017ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದಿದ್ದರು.