ಇವತ್ತು ಬೇಡ. ನಾಳೆ ಬೆಳಗ್ಗೆ ಮಾಡಿದ್ದರೆ ಆಯ್ತು. ಇವತ್ತಿನ ಯಂಗ್‌ಸ್ಟರ್‍‌ಗಳ ಕಾಮನ್ ಮಾತು ಇದು. ಇಂಥ ಯುವಕರನ್ನ ಬಡೆದೆಬ್ಬಿಸಬಹುದಾದ ಒಂದು ಸ್ಫೂರ್ತಿದಾಯಕ ಕತೆ ಇಲ್ಲಿದೆ. ಯುವಕರು ಓದಲೇಬೇಕಾದ ಸ್ಟೋರಿ ಇದು..

ಹೆಸರು ರಿತು ಖೋಖರ್ (Ritu Khokhar). ಹುಟ್ಟಿದ್ದು 1994ರ ಅಕ್ಟೋಬರ್ 23. ಸ್ಥಳ ಹರಿಯಾಣದ ಪಾಣಿಪತ್ ಜಿಲ್ಲೆ. ತಾರಾಚಂದ್ ಹಾಗೂ ಸುನೀತಾ ದೇವಿ ದಂಪತಿಯ ಪುತ್ರಿ. ಮುದ್ದಿನ ಮಗಳು. ಅಪ್ಪ ಬಡ ಕೃಷಿಕ. ಆದರೆ ಈಕೆಯ ಓದಿಗೆ, ಕನಸಿಗೆ ಬಡತನ ಅಡ್ಡಿ ಆಗಲಿಲ್ಲ.

ಸಾಧನೆ.. ಸರ್ಕಾರಿ ಶಾಲೆಯಲ್ಲಿ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿ ಐಪಿಎಸ್‌ ಅಧಿಕಾರಿಯಾಗಿ ಇದು ಸೇವೆ ಸಲ್ಲಿಸುತ್ತಿದ್ದಾರೆ. ಐಪಿಎಸ್‌ ರಿತು ಖೋಖರ್ ಸಾಧನೆ ಅಷ್ಟು ಸುಲಭಕ್ಕೆ ಸಿಕ್ಕಿದ್ದಲ್ಲ. ಅದಕ್ಕೂ ಮೊದಲು ಅವರ ಬಾಲ್ಯದ ದಿನಗಳು ಹೇಗಿತ್ತು ಅಂತಾ ನೋಡೋದಾದ್ರೆ.. ತಮ್ಮ ಮೂಲ ಗ್ರಾಮ ಭಾದೇರ್‌ನ ಸರ್ಕಾರಿ ಶಾಲೆಯಲ್ಲೇ 10ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಪಾಣಿಪತ್‌ನಲ್ಲಿ ದ್ವಿತಿಯ ಪಿಯುಸಿ ಮುಗಿಸಿ ಕುರುಕ್ಷೇತ್ರ ವಿಶ್ವವಿದ್ಯಾಲಯಕ್ಕೆ ಬಂದರು. ಅಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (M.Sc Mathematics) ಪಡೆದರು.

ಮುಂದೆ?

M.Sc ಓದಿದ ಬಳಿಕ ತಾವು ಐಪಿಎಸ್ ಅಧಿಕಾರಿ ಆಗಬೇಕು ಎಂಬ ಕನಸು ಅವರಿಗೆ ಬಂತು. ಕನಸುಗಳ ಮೂಟೆ ಹತ್ತು ದೆಹಲಿಯ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಸೇರಿಕೊಂಡರು. ಅಲ್ಲಿ 9 ತಿಂಗಳುಗಳ ಕಾಲ ಕಠಿಣ ಅಭ್ಯಾಸ ನಡೆಸಿದರು. ಇತರ ಯಾವುದೇ ಸರ್ಕಾರಿ ಹುದ್ದೆಗಳ ಪರೀಕ್ಷೆಗಳ ಕಡೆಗೆ ಗಮನ ಹರಿಸಲಲ್ಲ. UPSC ಪರೀಕ್ಷೆಯ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸಿ ಕೊನೆಗೂ ಯಶಸ್ವಿಯಾದರು.

ಮೊದಲ ಪ್ರಯತ್ನದಲ್ಲೇ ಸಕ್ಸಸ್

ರಿತು ಕೇವಲ ಕನಸು ಕಾಣಲಿಲ್ಲ. ಅದಕ್ಕಾಗಿ ಹಗಲು ರಾತ್ರಿ ಶ್ರಮ ಹಾಕಿದರು. 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 141ನೇ ರ್ಯಾಂಕ್ (AIR 141) ಗಳಿಸಿ ಇತಿಹಾಸ ಸೃಷ್ಟಿಸಿಬಿಟ್ಟರು. ಆಮೂಲಕ 2018ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಮಹಾರಾಷ್ಟ್ರ ಕೇಡರ್‌ಗೆ ಆಯ್ಕೆಯಾದರು ರಿತು.

ರಿತು ಅವರ ಸಾಧನೆ ಬಡತನ ಅಡ್ಡಿ ಆಗಲಿಲ್ಲ. ಸರ್ಕಾರಿಶಾಲೆ ಅಡ್ಡಿ ಆಗಲಿಲ್ಲ. ಯಾಕೆಂದರೆ ಅವರ ಗುರಿ ಸ್ಪಷ್ಟವಾಗಿತ್ತು. ಸತತ ಪ್ರಯತ್ನದ ಮೇಲೆ ಅಚಲ ನಂಬಿಕೆ ಇಟ್ಟಿದ್ದರು. ಕೊನೆಗೂ ಅವರು ಅದರಲ್ಲಿ ಯಶಸ್ವಿಯಾದರು. ಅಂದರೆ ಗುರಿ ಸ್ಪಷ್ಟವಾಗಿದ್ದ ನಮ್ಮ ಯಶಸ್ಸು ಖಂಡಿತ ಅನ್ನೋದಕ್ಕೆ ರಿತು ಖೋಖರ್ ಯಶೋಗಾಥ ಜೀವಂತ ಸಾಕ್ಷಿ. ಅವರ ಈ ಸಾಧನೆ ಗ್ರಾಮೀಣ ಭಾಗದ ರೈತರ ಮಕ್ಕಳ ಸೇರಿದಂತೆ ಅದೆಷ್ಟೋ ಯುವಕ, ಯುವತಿಯರಿಗೆ ಸ್ಫೂರ್ತಿಯಾಗಿದೆ.

ಕಠಿಣ ಪರಿಶ್ರಮ, ಅಚಲ ಸಂಕಲ್ಪವಿದ್ದರೆ ಎಂಥದ್ದೇ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಹರಿಯಾಣದ ರೈತನ ಮಗಳೇ ಸಾಕ್ಷಿ. ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಸರ್ಕಾರಿ ಶಾಲೆಯಲ್ಲಿ ಓದಿ ಎತ್ತರಕ್ಕೆ ಹೋಗಿದ್ದಾರೆ. ದೇಶದ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡಿರುವ UPSC ನಾಗರಿಕ ಸೇವಾ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸಾಧನೆಯ ಹಾದಿ ಪ್ರತಿಯೊಬ್ಬ ಆಕಾಂಕ್ಷಿಗೂ ಸ್ಫೂರ್ತಿದಾಯಕ.