ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ವಿಮಾನದಲ್ಲಿ ಸಹ-ಪೈಲಟ್‌ನಿಂದ ಚಾಕು ದಾಳಿಗೊಳಗಾದರೂ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ 174 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಅವರ ಈ ಅಪ್ರತಿಮ ಶೌರ್ಯಕ್ಕಾಗಿ ಗುಜರಾತ್ ಸರ್ಕಾರ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ' ಘೋಷಿಸಿದೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಈ ಸಾಹಸವನ್ನು ಶ್ಲಾಘಿಸಿದ್ದಾರೆ.
ಮುಂಬೈ: ಆಕಾಶಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತವನ್ನು ತಮ್ಮ ಪ್ರಾಣದ ಹಂಗು ತೊರೆದು ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಗಾಥೆಗೆ ದೇಶ ಮಾತ್ರವಲ್ಲ ವಿದೇಶದಲ್ಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 174 ಪ್ರಯಾಣಿಕರ ಪ್ರಾಣ ರಕ್ಷಿಸಿದ ಈ ಧೀರ ನಾಯಕನಿಗೆ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ಮತ್ತು ಜೊತೆಗೆ ₹25 ಲಕ್ಷ ನಗದು ಬಹುಮಾನ ನೀಡಿ ಗೌರವಿಸುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕೃತವಾಗಿ ಘೋಷಿಸಿದ್ದಾರೆ.
ರಕ್ತಸಿಕ್ರವಾಗಿದ್ದರೂ ಅಂಜದ ಅದಮ್ಯ ಶೌರ್ಯ
ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ 'ಫ್ಲೈದುಬೈ' (Flydubai) ಸಂಸ್ಥೆಯ FZ1073 ವಿಮಾನದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿತ್ತು. ವಿಮಾನ ಹಾರಾಟ ನಡೆಸುತ್ತಿದ್ದಾಗ ಕಾಕ್‌ಪಿಟ್‌ನಲ್ಲಿದ್ದ ಒಮಾನಿ ಮೂಲದ ಸಹ-ಪೈಲಟ್, ವಿಮಾನವನ್ನು ಅಪಘಾತಕ್ಕೀಡುಮಾಡುವ ದುರುದ್ದೇಶದಿಂದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ದಿಢೀರ್ ಭೀಕರ ದಾಳಿ ನಡೆಸಿದನು.
ತೀವ್ರವಾಗಿ ಗಾಯಗೊಂಡು ರಕ್ತಸಿಕ್ರವಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಮಚ್ಚರ್, ಸಹ-ಪೈಲಟ್‌ನೊಂದಿಗೆ ದಿಟ್ಟ ಹೋರಾಟ ನಡೆಸಿ ಅವನನ್ನು ಮಟ್ಟಹಾಕಿದರು. ಬಳಿಕ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನನಿಲ್ದಾಣಕ್ಕೆ ಸುರಕ್ಷಿತವಾಗಿ ಕೊಂಡೊಯ್ದು ತುರ್ತು ಭೂಸ್ಪರ್ಶ ಮಾಡಿದರು. ಪರಿಣಾಮವಾಗಿ ವಿಮಾನದಲ್ಲಿದ್ದ 174 ಪ್ರಯಾಣಿಕರು ಮತ್ತು ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಗುಜರಾತಿನ ಧೀರ ಪುತ್ರ': ಸಿಎಂ ಭೂಪೇಂದ್ರ ಪಟೇಲ್ ಶ್ಲಾಘನೆ
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಕೊಂಡಾಡಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ತಮ್ಮ 'X' ಖಾತೆಯಲ್ಲಿ "ತೀವ್ರವಾಗಿ ಗಾಯಗೊಂಡಿದ್ದರೂ 174 ಜನರ ಜೀವ ರಕ್ಷಿಸಲು ಅದಮ್ಯ ಶೌರ್ಯ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಇಂದು ಇಡೀ ಜಗತ್ತೇ ಶ್ಲಾಘಿಸುತ್ತಿದೆ. ಗುಜರಾತಿನ ಈ ಧೀರ ಪುತ್ರ ತನ್ನ ಅಪ್ರತಿಮ ಸಾಹಸದ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಅವರ ಅಸಾಧಾರಣ ಶೌರ್ಯ ಮತ್ತು ಮಾನವೀಯ ಕಾರ್ಯವನ್ನು ಗೌರವಿಸಲು 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ' ನೀಡಲಾಗುತ್ತಿದೆ.
ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸಲ್ಯೂಟ್
ಕ್ಯಾಪ್ಟನ್ ಮಚ್ಚರ್ ಅವರ ಸಮಯಪ್ರಜ್ಞೆಗೆ ದೇಶದ ಅತ್ಯುನ್ನತ ನಾಯಕರು ಹೃತೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು: "ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ವೀರೋಚಿತ ಧೈರ್ಯ ಮತ್ತು ಅದ್ಭುತ ಸಮಯಪ್ರಜ್ಞೆ ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ತಟ್ಟಿದೆ. ತೀವ್ರ ಅಪಾಯದ ಕ್ಷಣದಲ್ಲೂ ಅವರು ತೋರಿಸಿದ ದೃಢನಿಶ್ಚಯ ಶ್ಲಾಘನೀಯ."
ಪ್ರಧಾನಿ ನರೇಂದ್ರ ಮೋದಿ: "ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಹೀರೋ. ಅವರ ಸಾಹಸವು ನೂರಾರು ಜೀವಗಳನ್ನು ಉಳಿಸಿ ಬೃಹತ್ ದುರಂತವನ್ನು ತಪ್ಪಿಸಿದೆ. ಅವರು ಶೀಘ್ರವೇ ಚೇತರಿಸಿಕೊಂಡು ಪೂರ್ಣ ಆರೋಗ್ಯ ಪಡೆಯಲಿ."
ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು: "ಭಾರತೀಯ ಪೈಲಟ್‌ನ ಈ ಶೌರ್ಯದ ಬಗ್ಗೆ ವಿಶ್ವದಾದ್ಯಂತ ಹೆಮ್ಮೆ ವ್ಯಕ್ತವಾಗುತ್ತಿದೆ."
ಮುಂಬೈ ನಿವಾಸದ ಬಳಿಕ ಸಂಭ್ರಮಾಚರಣೆ, ಕಾಶಿ ವಿಶ್ವನಾಥನಲ್ಲಿ ವಿಶೇಷ ಪೂಜೆ
ಮುಂಬೈನ ಘಾಟ್‌ಕೋಪರ್ ನಿವಾಸಿಯಾಗಿರುವ 30 ವರ್ಷದ ಸ್ಮಿತ್ ಮಚ್ಚರ್, ನ್ಯೂಜಿಲೆಂಡ್‌ನಲ್ಲಿ ಪೈಲಟ್ ತರಬೇತಿ ಪಡೆದು 2022 ರಲ್ಲಿ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಅವರ ಸಹೋದರ ಕೂಡ ಅದೇ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂಬೈನಲ್ಲಿರುವ ಅವರ ನಿವಾಸದ ಹೊರಗೆ ಹಿತೈಷಿಗಳು ಹಾಗೂ ನೆರೆಹೊರೆಯವರು ರಾಷ್ಟ್ರಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು. ನಮ್ಮ ಹುಡುಗ ಜಾಗತಿಕ ವೇದಿಕೆಯಲ್ಲಿ ದೇಶದ ಕೀರ್ತಿ ಹೆಚ್ಚಿಸಿದ್ದಾನೆ. ಆತನಿಗೆ ದೇಶದ ಅತ್ಯುನ್ನತ ಸಿವಿಲಿಯನ್ ಗೌರವ ಸಿಗಬೇಕು ಎಂದು ನೆರೆಹೊರೆಯವರು ಹರ್ಷ ವ್ಯಕ್ತಪಡಿಸಿದರು. ಮತ್ತೊಂದೆಡೆ, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಮಚ್ಚರ್ ಅವರ ಶೀಘ್ರ ಚೇತರಿಕೆಗಾಗಿ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಸ್ತುತ ಕಾಕ್‌ಪಿಟ್ ದಾಳಿಯ ಹಿನ್ನೆಲೆ ಹಾಗೂ ದುಷ್ಕರ್ಮಿ ಸಹ-ಪೈಲಟ್‌ನ ದುರುದ್ದೇಶದ ಕುರಿತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು ತನಿಖಾಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.


