ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳ ಜೊತೆ ರೈಲ್ವೆ ಪೊಲೀಸ್ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.
ರೈಲಿನಲ್ಲಿ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಪೊಲೀಸ್ ಪೋರ್ಸ್‌ನ್ನು ನಿಯೋಜಿಸಲಾಗಿರುತ್ತದೆ. ಪ್ರತಿ ರೈಲಿನಲ್ಲಿ ಗನ್ ಹಿಡಿದ ರೈಲ್ವೆ ಪೊಲೀಸರಿರುತ್ತಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಅವರನ್ನು ನಿಯೋಜಿಸಲಾಗಿರುತ್ತದೆ. ಆದರೆ ಅವರಿಂದಲೇ ಸುರಕ್ಷತೆಗೆ ಅಡ್ಡಿಯಾದರೆ ಕಾಯುವವರು ಯಾರು? ಅಂತಹದೊಂದು ಘಟನೆ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲಿನ ಸ್ಲೀಪರ್ ಕೋಚ್‌ನಲ್ಲಿ ನಿದ್ದೆಗೆ ಜಾರಿದ ಯುವತಿಯೊಬ್ಬಳನ್ನು ರೈಲ್ವೆ ಪೊಲೀಸ್ ಓರ್ವ ಅಸಭ್ಯವಾಗಿ ಮುಟ್ಟಿದ್ದು, ಕೂಡಲೇ ಎಚ್ಚೆತ್ತ ಯುವತಿ ಆತನ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ನಾಚಿಕೆಗೇಡಿನ ಘಟನೆ:
ಆಗಸ್ಟ್ 14ರಂದು ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದ್ದು, ಸರ್ಕಾರಿ ರೈಲ್ವೆ ಪೊಲೀಸಪ್ಪನ ಈ ಮಾನಗೇಡಿ ಕೃತ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ತನ್ನ ಸೀಟಿನಲ್ಲಿ ನಿದ್ದೆಗೆ ಜಾರಿದ ಯುವತಿಯನ್ನು ರೈಲ್ವೆ ಪೊಲೀಸ್ ಅಶಿಶ್ ಗುಪ್ತಾ ಅಸಭ್ಯವಾಗಿ ಮುಟ್ಟಿದ್ದಾನೆ. ಕೂಡಲೇ ಎಚ್ಚೆತ್ತ ಯುವತಿ ಆ ಕ್ಷಣವನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ವಿಚಾರ ತಿಳಿದ ಸಹಪ್ರಯಾಣಿಕರು, ಪ್ರಯಾಣಿಕರ ರಕ್ಷಣೆಗೆ ನಿಯೋಜಿಸಲ್ಪಟ್ಟ ರೈಲ್ವೇ ಪೊಲೀಸೇ ಈ ಕೃತ್ಯವೆಸಗಿರುವುದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಆ ಯುವತಿ ಈ ಘಟನೆಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲೇ ದೂರು ನೀಡಿದ್ದಾರೆ. ಇದಾದ ನಂತರ ಈ ಅನುಚಿತ ವರ್ತನೆ ತೋರಿದ ಅಶಿಶ್ ಗುಪ್ತಾನನ್ನು ಪ್ರಯಾಗ್‌ರಾಜ್‌ನ ಜಿಆರ್‌ಪಿಯ ಎಸ್‌ಪಿ ಅಮಾನತುಗೊಳಿಸಿದ್ದಾರೆ. ಆತನ ವಿರುದ್ಧ ಈಗ ರೈಲ್ವೆಯಿಂದ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಯ ಇಂತಹ ಅಶಿಸ್ತಿನ ವರ್ತನೆಯನ್ನು ಸಹಿಸುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ
ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಆಶೀಶ್ ಗುಪ್ತಾ ತನ್ನ ಎರಡು ಕೈಗಳನ್ನು ಜೋಡಿಸಿ ಕೈ ಮುಗಿಯುವ ಜೊತೆಗೆ ಕಿವಿಗಳನ್ನು ಹಿಡಿದುಕೊಂಡು ತನ್ನನ್ನು ಕ್ಷಮಿಸುವಂತೆ ಕೇಳುತ್ತಿರುವ ದೃಶ್ಯ ಸೆರೆ ಆಗಿದೆ. ಆದರೆ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆಯಾಗಿದೆ ಹೀಗಾಗಿ ಈ ಸಾರ್ವಜನಿಕ ನಂಬಿಕೆಯನ್ನು ಎತ್ತಿಹಿಡಿಯಲು ತ್ವರಿತ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸುರಕ್ಷತೆಗೆ ನಿಯೋಜಿಸಿದ ರೈಲ್ವೆ ಪೊಲೀಸನೇ ಈ ಕೃತ್ಯವೆಸಗಿರುವುದು ಅನೇಕರಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ. ಅನೇಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರೇ ಹೀಗೆ ಮಾಡಿದರೆ ಯಾರು ರಕ್ಷಿಸ್ತಾರೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೊಬ್ಬರು ಮಹಿಳಾ ಪೊಲೀಸರನ್ನು ನಿಯೋಜಿಸಬೇಕು ಎಂದು ಹೇಳಿದ್ದಾರೆ ಅದಕ್ಕೆ ಅವರ ರಕ್ಷಣೆಯನ್ನು ಯಾರು ಮಾಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೆ ಡ್ರಾಮಾದಲ್ಲಿ ಅರಬ್, ಭಾರತೀಯ ಸಂಸ್ಕೃತಿಯ ಅವಹೇಳನ: ಕ್ಷಮೆ ಕೇಳಿದ ಎಂಬಿಸಿ
ಇದನ್ನೂ ಓದಿ: 3 ದಶಕಗಳ ಹಿಂದೆ ಮಾಡಿದ ಕೇವಲ 7000 ರೂ ಹೂಡಿಕೆ: ಇಂದು ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ ನಾಯ್ಡು


