ಕೆ-ಡ್ರಾಮಾ 'ಟು ದಿ ಮೂನ್' ಟೀಸರ್‌ನಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿಯನ್ನು ಅವಹೇಳನ ಮಾಡಿರುವ ಆರೋಪ ಕೇಳಿಬಂದಿದ್ದು, ವ್ಯಾಪಕ ಟೀಕೆಗಳ ನಂತರ ಪ್ರಸಾರಕರು ಕ್ಷಮೆ ಯಾಚಿಸಿದ್ದಾರೆ.
ಕೆ ಡ್ರಾಮಾ ಅಥವಾ ಕೊರಿಯನ್ ಡ್ರಾಮಾಗಳನ್ನು ಭಾರತೀಯ ಯುವ ಸಮುದಾಯ ಹುಚ್ಚರಂತೆ ವೀಕ್ಷಿಸುತ್ತಾರೆ. ಕೆ ಡ್ರಾಮಾ ಸಿರೀಸ್‌ಗಳನ್ನು ಒಮ್ಮೆ ನೋಡಲು ಶುರು ಮಾಡಿದರೆ ಆ ಸಿರೀಸ್‌ಗಳನ್ನು ಪೂರ್ತಿ ನೋಡಿ ಮುಗಿಸುವವರೆಗೂ ಸಮಾಧಾನ ಇಲ್ಲ ಅಂತ ಹೇಳ್ತಾರೆ ಕೆ ಡ್ರಾಮಾ ಸಿರೀಸ್ ನೋಡುವ ಯುವಕ ಯುವತಿಯರು. ಭಾರತದ ಯುವ ಸಮುದಾಯಕ್ಕೆ ಅಷ್ಟೊಂದು ಹುಚ್ಚು ಹತ್ತಿಸಿವೆ ಕೆ ಡ್ರಾಮಾ ಸಿರೀಸ್‌ಗಳು. ಆದರೆ ಟು ದಿ ಮೂನ್ ಹೆಸರಿನ ಕೆ ಡ್ರಾಮಾ ಸಿರೀಸ್‌ನಲ್ಲಿ ಅಗತ್ಯವೇ ಇಲ್ಲದಿದ್ದರೂ ಭಾರತೀಯ ಹಾಗೂ ಅರಬ್ ಸಂಸ್ಕೃತಿಯನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ 'ಟು ದಿ ಮೂನ್' ಹೆಸರಿನ ಕೆ ಡ್ರಾಮಾ ಕತೆಗೆ ಸಂಬಂಧವೇ ಇಲ್ಲದಿದ್ದರೂ ಇದರಲ್ಲಿ ಅನಗತ್ಯವಾಗಿ ತಂದು ಭಾರತೀಯ ಹಾಗೂ ಅರಬ್ ಸಂಸ್ಕೃತಿಯನ್ನು ವ್ಯಂಗ್ಯ ಮಾಡಲಾಗಿದೆ ಎಂಬ ಆರೋಪಗಳು ಬಳಕೆದಾರರಿಂದ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗ ದಕ್ಷಿಣ ಕೊರಿಯಾದ ಬ್ರಾಡ್‌ಕಾಸ್ಟರ್ ಸಂಸ್ಥೆ ಎಂಬಿಸಿ ತನ್ನ ವೀಕ್ಷಕರಿಗೆ ಕ್ಷಮೆ ಕೇಳಿದೆ.
ಕೆ ಡ್ರಾಮಾ ಟು ದಿ ಮೂನ್ ಟೀಸರ್‌ಗೆ ಭಾರಿ ಆಕ್ರೋಶ:
ಟು ದಿ ಮೂನ್' ಹೆಸರಿನ ಕೆ ಡ್ರಾಮಾದ ಟೀಸರ್ ಆಗಸ್ಟ್ 20 ರಂದು ಬಿಡುಗಡೆಯಾದ ನಂತರ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಟೀಸರ್‌ನಲ್ಲಿ ಕೊರಿಯನ್ ಕಲಾವಿದರಾದ ಲೀ ಸನ್-ಬಿನ್(Lee Sun-bin), ರಾ ಮಿ-ರನ್(Ra Mi-ran), ಜೋ ಎ-ರಾಮ್(Jo A-ram) ಮತ್ತು ಕಿಮ್ ಯಂಗ್-ಡೇ (Kim Young-dae) ಅರಬ್ ಮತ್ತು ಭಾರತೀಯ ಸಂಸ್ಕೃತಿ ಮಿಶ್ರಿತ ಬಟ್ಟೆ ಧರಿಸಿದ್ದರು.
ಹಾಸ್ಯಕ್ಕೆ ಭಾರತೀಯ ಹಾಗೂ ಅರಬ್ ಸಂಸ್ಕೃತಿಯ ಬಳಸಿದ ಆರೋಪ
ಈ ಟೀಸರ್‌ನಲ್ಲಿ ನಟಿಯರು ಭಾರತದಲ್ಲಿ ಸಾಂಪ್ರದಾಯಿಕ ಭಾರಿ ಮಹತ್ವ ಹೊಂದಿರುವ ಬಿಂದಿಗಳನ್ನು ಧರಿಸಿ, ಅರಬ್ ಶೈಲಿಯ ಹಿಜಾಬ್ ಅನ್ನು ಧರಿಸಿದ್ದರು. ಇದರ ಜೊತೆಗೆ ಅವರು ಅತಿರೇಕವೆನಿಸುದ ನೃತ್ಯ ಸನ್ನಿವೇಶಗಳನ್ನು ಸಹ ಬಳಸಿದರು, ಇದನ್ನು ಅನೇಕರು ಭಾರತೀಯ ಸಂಪ್ರದಾಯಗಳ ವಿಡಂಬನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೆ ಡ್ರಾಮಾದ ಕತೆಗೆ ಈ ಧಿರಿಸುಗಳ ಯಾವುದೇ ಅಗತ್ಯತೆ ಇಲ್ಲದಿದ್ದರೂ ಅರಬ್ ಮತ್ತು ಭಾರತೀಯ ಸಂಸ್ಕೃತಿಗಳನ್ನು ಹಾಸ್ಯಕ್ಕಾಗಿ ಬಳಸಲಾಗಿದೆ ಎಂದು ಇಂಟರ್‌ನೆಟ್ ಬಳಕೆದಾರರು ಆರೋಪಿಸಿದ್ದಾರೆ. ಸಂಸ್ಕೃತಿಗಳನ್ನು ಬೆರೆಸುವುದು ಹಾಗೂ ಅಸಹ್ಯಗಳನ್ನು ರೂಢಿಯಾಗಿಸುವುದು ಇದಕ್ಕೆ ನಾವು ಚಪ್ಪಾಳೆ ತಟ್ಟಬೇಕೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಕೊರಿಯನ್ನರು 2025 ರ ವರ್ಷವನ್ನು ಕಪ್ಪು ಜನರ ವಿರುದ್ಧ ಜನಾಂಗೀಯ ನಿಂದನೆಯಿಂದ ಪ್ರಾರಂಭಿಸಿದರು. ಈಗ ಅದು ಮಧ್ಯಪ್ರಾಚ್ಯ ಮತ್ತು ಭಾರತೀಯರ ಕಡೆಗೆ ಜನಾಂಗೀಯತೆಯಿಂದ ಕೊನೆಗೊಳ್ಳುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಹಾಗೆಯೇ ಮಧ್ಯಪ್ರಾಚ್ಯದವರೊಬ್ಬರು ಕಾಮೆಂಟ್ ಮಾಡಿ, ನನಗೆ ನಿಜವಾಗಿಯೂ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ನೀವು ಮಧ್ಯಪ್ರಾಚ್ಯ/ಅರಬ್ ಮೂಲದ ಅಲ್ಲಾದೀನ್‌ನಿಂದ ಸ್ಫೂರ್ತಿ ಪಡೆದಂತೆ ತೋರುತ್ತಿದೆ, ಹಾಗಾದರೆ ಈ ವೀಡಿಯೊದಲ್ಲಿ ಬಿಂದಿಗಳು ಏಕೆ? ಭಾರತೀಯರನ್ನು ಅಣಕಿಸುವ ನೃತ್ಯಗಳು ಮತ್ತು ಹುಲಾ ನೃತ್ಯ ಏಕೆ ಇವೆ ಎಂದು ಹೇಳಿ? ಇದು 2025 ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಸೀರಿಸ್‌ಗೂ ಭಾರತೀಯ ಅಥವಾ ಮಧ್ಯಪ್ರಾಚ್ಯ ಸಂಸ್ಕೃತಿಗೂ ಯಾವುದೇ ಸಂಬಂಧವಿಲ್ಲ ಎಂದು ಕೆಲವರು ಹೇಳಿದಾಗ ಈ ಚರ್ಚೆ ಮತ್ತಷ್ಟು ಜೋರಾಯ್ತು.
ಕ್ಷಮೆ ಕೇಳಿದ ಎಂಬಿಸಿ
ವೀಕ್ಷಕರಿಂದ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆ ದಕ್ಷಿಣ ಕೊರಿಯಾದ ಬ್ರಾಡ್‌ಕಾಸ್ಟ್ ಸಂಸ್ಥೆMBC ಟೀಸರ್ ಅನ್ನು ಇಂಟರ್‌ನೆಟ್‌ನಿಂದ ತೆಗೆದುಹಾಕಿದೆ ಜೊತೆಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಪ್ರಸಾರಕರು ಈ ವೀಡಿಯೊವನ್ನು 1980 ಮತ್ತು 1990 ರ ದಶಕದ ಜನಪ್ರಿಯ ಜಾಹೀರಾತಿನ ವಿಡಂಬನೆಯಂತೆ ಬಳಸುವುದಕ್ಕೆ ಉದ್ದೇಶಿಸಿದ್ದರು. ಆದರೆ ಅದು ಸಾಂಸ್ಕೃತಿಕ ಸೂಕ್ಷ್ಮತೆಗಳ ಬಗ್ಗೆ ಗಮನ ನೀಡಲಿಲ್ಲಎಂದು ಒಪ್ಪಿಕೊಂಡರು. ಈ ಪ್ರಕ್ರಿಯೆಯಲ್ಲಿ ನಾವು ಇತರ ಸಂಸ್ಕೃತಿಗಳ ದೃಷ್ಟಿಕೋನಗಳನ್ನು ಪರಿಗಣಿಸಲು ವಿಫಲರಾಗಿದ್ದೇವೆ ಇದು ಉದ್ದೇಶಪೂರ್ವಕವಲ್ಲದಿದ್ದರೂ ವಿಷಾದನೀಯ ಎಂದು ಅದು ಹೇಳಿದೆ.
ಟು ದಿ ಮೂನ್' ಚಿತ್ರವು ಕೆಲಸದ ಸ್ಥಳದಲ್ಲಿನ ಒತ್ತಡ, ಅಸ್ಥಿರ ಉದ್ಯೋಗಗಳು ಹಾಗೂ ಹೆಚ್ಚುತ್ತಿರುವ ಸಾಲವನ್ನು ಎದುರಿಸುತ್ತಿರುವ ದಕ್ಷಿಣ ಕೊರಿಯನ್ನರ ಗುಂಪಿನ ಬಗ್ಗೆ, ಹಾಗೂ ಅವರು ತಮ್ಮ ಭವಿಷ್ಯವನ್ನು ಬದಲಾಯಿಸುವ ಭರವಸೆಯಿಂದ ಕ್ರಿಪ್ಟೋಕರೆನ್ಸಿ ಹೂಡಿಕೆಗಳತ್ತ ಆಕರ್ಷಿತರಾಗುವುದರ ಬಗ್ಗೆ ಈ ಟು ದಿ ಮೂನ್ ಕತೆ ಹೊಂದಿದೆ. ಈ ಕೆ ಡ್ರಾಮಾ ಸಿರೀಸ್ ಸೆಪ್ಟೆಂಬರ್ 19 ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ: 3 ದಶಕಗಳ ಹಿಂದೆ ಮಾಡಿದ ಕೇವಲ 7000 ರೂ ಹೂಡಿಕೆ: ಇಂದು ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ ನಾಯ್ಡು
ಇದನ್ನೂ ಓದಿ: ಸೂಚನೆ ನೀಡದೇ ಡೋರ್ ತೆಗೆದ ಕಾರು ಚಾಲಕನ ಎಡವಟ್ಟಿಗೆ ಉಸಿರು ಚೆಲ್ಲಿದ ಯುವ ಕ್ರಿಕೆಟಿಗ
