ಆನ್‌ಲೈನ್‌ನಲ್ಲಿ ಆಂಡ್ರಾಯ್ಡ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದ ಗ್ರೇಟರ್ ನೋಯ್ಡಾದ ಯುವಕನಿಗೆ ಪಾರ್ಸೆಲ್‌ನಲ್ಲಿ ಸಗಣಿ ಬರುವ ಮೂಲಕ ವಂಚನೆಯಾಗಿದೆ. ಈ ಬಗ್ಗೆ ಸಂತ್ರಸ್ತ ಯುವಕ ಸೈಬರ್ ಸೆಲ್‌ಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗ್ರೇಟರ್ ನೋಯ್ಡಾ: ಆನ್‌ಲೈನ್ ಶಾಪಿಂಗ್ ಮಾಡುವವರು ಎಚ್ಚರ! ಇಲ್ಲೊಬ್ಬ ಯುವಕ ತನಗೆ ಬೇಕಾದ ಎಲೆಕ್ಟ್ರಾನಿಕ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದಕ್ಕೆ ಪ್ರತಿಯಾಗಿ ಬಂದ ಪಾರ್ಸೆಲ್‌ನಲ್ಲಿ ಸಗಣಿ ಕಂಡುಬಂದಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ವಂಚನೆ ಪ್ರಕರಣ ಈಗ ಸೈಬರ್ ಸೆಲ್ ಮೆಟ್ಟಿಲೇರಿದೆ.
ನಡೆದಿದ್ದೇನು?
ಗ್ರೇಟರ್ ನೋಯ್ಡಾದ ಸಮಸಪುರ ಗ್ರಾಮದ ನಿವಾಸಿ ಆಕಾಶ್ ನಾಗರ್ ಎಂಬುವವರು ಇತ್ತೀಚೆಗೆ ಒಂದು ವೆಬ್‌ಸೈಟ್ ಮೂಲಕ ಆಂಡ್ರಾಯ್ಡ್ ಸಾಧನ (Android Device) ಆರ್ಡರ್ ಮಾಡಿದ್ದರು. ಇದಕ್ಕಾಗಿ ಬೇಕಾದ ಸಂಪೂರ್ಣ ಹಣವನ್ನು ಅವರು ಬುಕಿಂಗ್ ಸಮಯದಲ್ಲಿಯೇ ಆನ್‌ಲೈನ್ ಮೂಲಕ ಪಾವತಿಸಿದ್ದರು.
ಸೋಮವಾರ ಸಂಜೆ 5 ಗಂಟೆಗೆ ಕೊರಿಯರ್ ಮೂಲಕ ಪಾರ್ಸೆಲ್ ಮನೆಗೆ ಬಂದಿದೆ. ಬಹಳ ಕುತೂಹಲದಿಂದ ಆಕಾಶ್ ಪ್ಯಾಕೆಟ್ ತೆರೆದಿದ್ದಾರೆ. ಒಳಗೆ ಇರಬೇಕಿದ್ದ ಆಂಡ್ರಾಯ್ಡ್ ಸಾಧನದ ಬದಲು ಆಕಳ ಸಗಣಿಯಿಂದ ತುಂಬಿದ ಪ್ಯಾಕೆಟ್ ಇತ್ತು. ಇದನ್ನು ಕಂಡು ಆಕಾಶ್ ಬೆಚ್ಚಿಬಿದ್ದಿದ್ದಾರೆ. ಕೆಲಸಕ್ಕೆಂದು ತರಿಸಿದ್ದ ಸಾಧನದ ಬದಲು ಸಗಣಿ ಬಂದಿರುವುದು ಅವರನ್ನು ಆತಂಕಕ್ಕೀಡು ಮಾಡಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಆಕಾಶ್, ದಂಕೌರ್ ಕೊತ್ವಾಲಿಯ ಸೈಬರ್ ಸೆಲ್‌ಗೆ ಹೋಗಿ ದೂರು ನೀಡಿದ್ದಾರೆ. ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ತನಗೆ ವಂಚನೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದೂರಿನ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ನಂಬಿ ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಹಣ ಪಾವತಿಸುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.


