ತಮಿಳುನಾಡು ರಾಜಕೀಯದಲ್ಲಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ ಬಹುಮತದ ಕೊರತೆಯಿಂದಾಗಿ ಹಿನ್ನಡೆಯಾಗಿದೆ. ಅಗತ್ಯ ಸಂಖ್ಯಾಬಲ ಸಾಬೀತುಪಡಿಸಲು ವಿಫಲವಾದ ಕಾರಣ, ರಾಜ್ಯಪಾಲರು ವಿಜಯ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಚೆನ್ನೈ (ಮೇ.8): ತಮಿಳುನಾಡು ರಾಜಕೀಯದ 'ಥ್ರಿಲ್ಲರ್' ಕಥೆಯಲ್ಲಿ ಮತ್ತೊಂದು ಆಘಾತಕಾರಿ ಟ್ವಿಸ್ಟ್‌ ಸಿಕ್ಕಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದ 'ತಮಿಳಗ ವೆಟ್ರಿ ಕಳಗಂ' (TVK) ಅಧ್ಯಕ್ಷ ವಿಜಯ್ ಅವರಿಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣವಚನ ಸ್ವೀಕರಿಸಲು ಅನುಮತಿ ನಿರಾಕರಿಸಿದ್ದಾರೆ. ಶನಿವಾರ ಬೆಳಿಗ್ಗೆ ನಡೆಯಬೇಕಿದ್ದ ಪಟ್ಟಾಭಿಷೇಕದ ಆಸೆ ಈಗ ಕಮರಿಹೋಗಿದ್ದು, ಸಂಖ್ಯಾಬಲದ ಕೊರತೆಯೇ ವಿಜಯ್‌ಗೆ ಅತಿದೊಡ್ಡ ವಿಘ್ನವಾಗಿ ಪರಿಣಮಿಸಿದೆ.

Add Asianetnews Kannada as a Preferred SourcegooglePreferred

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ಆದರೆ, ವಿಜಯ್ ಅವರು ಕೇವಲ 116 ಶಾಸಕರ ಬೆಂಬಲವನ್ನು ಮಾತ್ರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಹುಮತಕ್ಕೆ ಇನ್ನೂ ಇಬ್ಬರು ಶಾಸಕರ ಕೊರತೆಯಿದ್ದು, ರಾಜ್ಯಪಾಲರು ಕೇಳಿದಂತೆ ಬೆಂಬಲದ ಅಧಿಕೃತ ಪತ್ರಗಳನ್ನು ಒದಗಿಸಲು ವಿಜಯ್ ವಿಫಲರಾಗಿದ್ದಾರೆ.

ಕೈಕೊಟ್ಟ ವಿಸಿಕೆ ಮತ್ತು ಐಯುಎಂಎಲ್

ವಿಜಯ್ ಅವರು ವಿಸಿಕೆ (VCK), ಎಎಮ್‌ಎಂಕೆಯ ಟಿಟಿವಿ ದಿನಕರನ್ ಮತ್ತು ಐಯುಎಂಎಲ್ (IUML) ಪಕ್ಷಗಳ ಜೊತೆ ತೀವ್ರ ಮಾತುಕತೆ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಐಯುಎಂಎಲ್ ತಾನು ಟಿವಿಕೆ ಮೈತ್ರಿಕೂಟದ ಭಾಗವಲ್ಲ ಎಂದು ಪತ್ರ ಬಿಡುಗಡೆ ಮಾಡಿದೆ. ಇತ್ತ ಟಿಟಿವಿ ದಿನಕರನ್ ಅವರು ಎಐಎಡಿಎಂಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇನ್ನು ವಿಸಿಕೆ ಕೂಡ ಅಧಿಕೃತ ಬೆಂಬಲದ ಪತ್ರ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.

ರಾಜ್ಯಪಾಲರ ಕಠಿಣ ನಿಲುವು

ಕಳೆದ ಮೂರು ದಿನಗಳಿಂದ ವಿಜಯ್ ಅವರು ಸತತವಾಗಿ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ. "ಕೇವಲ 113 ಶಾಸಕರನ್ನು ಇಟ್ಟುಕೊಂಡು 118ರ ಸಂಖ್ಯಾಬಲದ ಸದನವನ್ನು ನಡೆಸಲು ಸಾಧ್ಯವಿಲ್ಲ" ಎಂದು ರಾಜ್ಯಪಾಲರು ಗುರುವಾರವೇ ಸ್ಪಷ್ಟಪಡಿಸಿದ್ದರು. ಪ್ರತಿ ಶಾಸಕರ ಬೆಂಬಲದ ಪತ್ರವನ್ನೇ ಅವರು ಆಗ್ರಹಿಸಿದ್ದರು. ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿದ್ದ ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ನೀಡಿತ್ತು. ಆದರೂ ಬಹುಮತದ ಗಡಿ ತಲುಪಲು ವಿಜಯ್‌ಗೆ ಸಾಧ್ಯವಾಗಿಲ್ಲ.

ಪಕ್ಷಗಳ ನಡುವಿನ ಜೂಟಾಟ

ಬಿಜೆಪಿಯಂತಹ ಕೋಮುವಾದಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ವಿಜಯ್‌ಗೆ ಬೆಂಬಲ ನೀಡಿದೆ. ಈ ನಡುವೆ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ 7 ವರ್ಷಗಳ ದೋಸ್ತಿ ಕಡಿದುಬಿದ್ದಿದ್ದು, ಪರಸ್ಪರ 'ನಂಬಿಕೆ ದ್ರೋಹ'ದ ಆರೋಪಗಳು ಕೇಳಿಬರುತ್ತಿವೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ವಿಜಯ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿವೆ. ಇವರು ಸಂಪುಟ ಸೇರುವುದಿಲ್ಲ. ಜಯ್ ಅವರ ಏಳಿಗೆಯನ್ನು ತಡೆಯಲು ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುತ್ತಿವೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಂತಹ 'ಅಪವಿತ್ರ ಮೈತ್ರಿ' ಸಾಧ್ಯವಿಲ್ಲ ಎಂದು ಎರಡೂ ಪಕ್ಷಗಳ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸ್ಪಷ್ಟನೆ

ರಾಜ್ಯಪಾಲರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂಬ ಆರೋಪಗಳನ್ನು ಪಕ್ಷದ ವಕ್ತಾರ ನಾರಾಯಣ ತಿರುಪತಿ ತಳ್ಳಿಹಾಕಿದ್ದಾರೆ. "ಇದು ಅತಂತ್ರ ತೀರ್ಪು. ವಿಜಯ್ ಬಹುಮತ ಸಾಬೀತುಪಡಿಸಿದರೆ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಒಪ್ಪುತ್ತಾರೆ. ಇಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಅವರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ ಸಿಎಂ ಆಗುವ ಹಾದಿ ಮುಳ್ಳಿನ ಹಾದಿಯಂತಾಗಿದ್ದು, ನಾಳೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಸಾಧ್ಯವಿಲ್ಲ ಎಂದು ರಾಜ್ಯಪಾಲರ ಮೂಲಗಳು ಖಚಿತಪಡಿಸಿವೆ.