- Home
- News
- India News
- ರೇಷನ್ ಕಳ್ಳರಿಗೆ ಬಿಗ್ ಶಾಕ್: ಅನರ್ಹ ಫಲಾನುಭವಿಗಳು, ಅಕ್ರಮ ದಾಸ್ತಾನುದಾರರ ಆಟ ಇನ್ಮುಂದೆ ನಡೆಯಲ್ಲ
ರೇಷನ್ ಕಳ್ಳರಿಗೆ ಬಿಗ್ ಶಾಕ್: ಅನರ್ಹ ಫಲಾನುಭವಿಗಳು, ಅಕ್ರಮ ದಾಸ್ತಾನುದಾರರ ಆಟ ಇನ್ಮುಂದೆ ನಡೆಯಲ್ಲ
ಬಡವರಿಗಾಗಿ ಇರುವ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಶ್ರೀಮಂತರು ಮತ್ತು ಅಕ್ರಮ ದಾಸ್ತಾನುದಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 'ಸಾರ್ಥಕ್ ಸಾರ್ವಜನಿಕ ವಿತರಣಾ ವ್ಯವಸ್ಥೆ' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಬಯೋಮೆಟ್ರಿಕ್ ದೃಢೀಕರಣ ಮತ್ತು ಡಿಜಿಟಲೀಕರಣವನ್ನು ಒಳಗೊಂಡಿದೆ.
ಶ್ರೀಮಂತರಿಂದ ಅಕ್ರಮ
ಬಡವರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಡಿತರ ವ್ಯವಸ್ಥೆಯನ್ನು ಅದೆಷ್ಟೋ ಶ್ರೀಮಂತರು ಪಡೆಯುತ್ತಿದ್ದಾರೆ. ಮಹಾನಗರಗಳಲ್ಲಿಯೂ 2-3 ಮನೆ ಬಾಡಿಗೆಗೆ ಕೊಟ್ಟು ಲಕ್ಷ ಲಕ್ಷ ಹಣ ಗಳಿಸುತ್ತಿರುವವರೂ ರೇಷನ್ ಅಂಗಡಿಗಳ ಮುಂದೆ ಕಾರು ನಿಲ್ಲಿಸಿ ಬಡವರಿಗಾಗಿ ಇರುವ ರೇಷನ್ ಸೌಲಭ್ಯ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ. ಇಂಥವರಿಗೆ ಇನ್ನು ಮುಂದೆ ಸಿಗಲ್ಲ ರೇಷನ್. ಅರ್ಹರಿಗೆ ಮಾತ್ರ ಇರುವ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ರೀತಿಯಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅದೇ ರೀತಿ ರೇಷನ್ ಅನ್ನು ಅಕ್ರಮವಾಗಿ ದಾಸ್ತಾನು ಮಾಡುವವರಿಗೂ ಕೇಂದ್ರ ಶಾಕ್ ನೀಡಿದೆ. ಅದೇ ಸಾರ್ಥಕ್ ಸಾರ್ವಜನಿಕ ವಿತರಣಾ ವ್ಯವಸ್ಥೆ ಯೋಜನೆ (What Is Sarthak PDS Yojna)
ಏನಿದು ಯೋಜನೆ?
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ಹೊಸ ಯೋಜನೆ ಜಾರಿಗೆ ಸಮ್ಮತಿ ಸೂಚಿಸಿದೆ. ರೇಷನ್ ವ್ಯವಸ್ಥೆ ಅರ್ಥಾತ್ ಪಡಿತರ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವುದಕ್ಕಾಗಿ ಕೇಂದ್ರವು ಈ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಅಕ್ರಮಕ್ಕೆ ಕಡಿವಾಣ
ದಾಸ್ತಾನಿನಿಂದ ಹೊರಟ ಅಕ್ಕಿಧ್ಯಾನ್ಯಗಳು ಎಷ್ಟು, ಪಡಿತರ ಅಂಗಡಿಗೆ ತಲುಪಿದ್ದು ಎಷ್ಟು, ಅದರಲ್ಲಿ ಜನರಿಗೆ ತಲುಪಿದ್ದೆಷ್ಟು ಎನ್ನುವ ಸಂಪೂರ್ಣ ಮಾಹಿತಿ ಇದರಿಂದ ಸಿಗಲಿದೆ. ಪಡಿತರ ಧಾನ್ಯಗಳ ದಾಸ್ತಾನು ಮತ್ತು ವಿತರಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯುವುದು. ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅರ್ಹ ಫಲಾನುಭವಿಗಳಿಗೆ ಮಾತ್ರ ಪಡಿತರ ಸಿಗುವಂತೆ ಮಾಡಲು, ಆಧಾರ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಲಿಂಕ್ ಮಾಡುವುದು, ಇದರಡಿಯಲ್ಲಿ ಬರಲಿದೆ.
ನಿಖರ ಆಹಾರ ಧಾನ್ಯದ ಮಾಹಿತಿ
ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗುವ ಧಾನ್ಯಗಳ ನಿಖರವಾದ ಮಾಹಿತಿಯನ್ನು ಟ್ರ್ಯಾಕ್ ಮಾಡುವುದು. ಡಿಜಿಟಲೀಕರಣ ಪಡಿತರ ಚೀಟಿ ನಿರ್ವಹಣೆ, ಹೊಸ ಕಾರ್ಡ್’ಗಳಿಗೆ ಅರ್ಜಿ ಸಲ್ಲಿಕೆ, ತಿದ್ದುಪಡಿ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು ಕೂಡ ಸೇರಿವೆ. ಕೇಂದ್ರ ಸರ್ಕಾರ, ದೇಶದ ಜನರಿಗೆ ಸಾಮಾಜಿಕ ಮತ್ತು ಕಾನೂನು ಬದ್ಧತೆ ಜತೆಗೆ ಅಗತ್ಯ, ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯನ್ನೂ ಖಚಿತಪಡಿಸಿದೆ. ಅದರಂತೆ NFSA ಅಡಿಯಲ್ಲಿ 81.35 ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಸುವ ನಿಟ್ಟಿನಲ್ಲಿ "ಸಾರ್ಥಕ್ ಪಿಡಿಎಸ್" ಯೋಜನೆ ಪರಿಣಾಮಕಾರಿಯಾಗಲಿದೆ.
25,530 ಕೋಟಿ ಅನುದಾನ
16ನೇ ಹಣಕಾಸು ಆಯೋಗದ ಅವಧಿಯಲ್ಲಿ "ಸಾರ್ಥಕ್ ಪಿಡಿಎಸ್" ಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ 25,530 ಕೋಟಿ ರೂಪಾಯಿ ಅನುದಾನ ಒದಗಿಸಿ ಅನುಮೋದನೆ ನೀಡಿದೆ. ದೇಶದ ಪಡಿತರ ವ್ಯವಸ್ಥೆಯಲ್ಲಿ ಇದೊಂದು ಸುಧಾರಿತ ತಂತ್ರಜ್ಞಾನದ ಯೋಜನೆಯಾಗಿ 31.03.2031ರವರೆಗೆ 5 ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸಚಿವರ ಮಾಹಿತಿ
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪಡಿತರ ಸಾಗಣೆ, ಆಹಾರ ಧಾನ್ಯಗಳ ನಿರ್ವಹಣೆ, FPS ವಿತರಕರ ಮಾರ್ಜಿನ್‌ಗಾಗಿ ಮಾಡುವ ವೆಚ್ಚವನ್ನು ಪೂರೈಸಲು 'ಸಾರ್ಥಕ್ ಪಿಡಿಎಸ್ ' ಒಂದು ಸಾರ್ಥಕ ಯೋಜನೆಯಾಗಿದ್ದು, ಇದರ ಮೂಲಕ ಕೇಂದ್ರ ನೆರವಿನ ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

