ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಪರಿಷ್ಕರಿಸಿದೆ. ಈ ನಿರ್ಧಾರದಿಂದ ಡೀಸೆಲ್ ಮತ್ತು ಎಟಿಎಫ್ ಮೇಲಿನ ರಫ್ತು ಸುಂಕ ಹೆಚ್ಚಾಗಿದ್ದು, ಪೆಟ್ರೋಲ್ ಮೇಲಿನ ಸುಂಕ ಕಡಿಮೆಯಾಗಿದೆ. ದೇಶೀಯ ಲಭ್ಯತೆ ಖಚಿತಪಡಿಸಲು ಡೀಸೆಲ್ ಖರೀದಿಗೆ ದಿನಕ್ಕೆ 200 ಲೀಟರ್ ಮಿತಿ ವಿಧಿಸಲಾಗಿದೆ.

ನವದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳ ಏರಿಳಿತವನ್ನು ಗಮನದಲ್ಲಿಟ್ಟುಕೊಂಡು ವಿಂಡ್‌ಫಾಲ್ ತೆರಿಗೆಯನ್ನು (Windfall Tax) ಪರಿಷ್ಕರಿಸಲಾಗಿದೆ. ಈ ಹೊಸ ನಿಯಮಗಳು ಜುಲೈ 16 ರಿಂದಲೇ ಜಾರಿಗೆ ಬಂದಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸದ್ಯಕ್ಕೆ ಪೆಟ್ರೋಲ್/ಡೀಸೆಲ್ ಬೆಲೆಯಲ್ಲಿ ನೇರ ಬದಲಾವಣೆ ಕಾಣದಿದ್ದರೂ, ಸಾರಿಗೆ ವೆಚ್ಚ ಮತ್ತು ವಿಮಾನ ಪ್ರಯಾಣದ ದರಗಳ ಮೂಲಕ ಸಾಮಾನ್ಯ ಜನರ ಜೀವನದ ಮೇಲೆ ಇದು ಪರೋಕ್ಷವಾಗಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಪರಿಶೀಲಿಸುತ್ತದೆ. ಇತ್ತೀಚಿನ ಪರಾಮರ್ಶೆಯಲ್ಲಿ ಡೀಸೆಲ್ ಮತ್ತು ವಿಮಾನ ಇಂಧನದ ಮೇಲಿನ ರಫ್ತು ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಪೆಟ್ರೋಲ್ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.

ಯಾವುದರ ಮೇಲೆ ಎಷ್ಟು ತೆರಿಗೆ?

ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 4 ರೂಪಾಯಿಯಿಂದ 2.5 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಡೀಸೆಲ್: ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 7.5 ರೂಪಾಯಿಯಿಂದ 15.5 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು ದುಪ್ಪಟ್ಟು ಏರಿಕೆ ಮಾಡಲಾಗಿದೆ. ಎಟಿಎಫ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 7.5 ರೂಪಾಯಿಯಿಂದ 14.5 ರೂಪಾಯಿಗೆ ಏರಿಸಲಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಗಲ್ಫ್ ದೇಶಗಳಲ್ಲಿನ ಯುದ್ಧದ ಭೀತಿಯು ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್ ಮೇಲೆ ಅಮೆರಿಕ ನೌಕಾ ದಿಗ್ಬಂಧನ ವಿಧಿಸಿರುವುದರಿಂದ ಹೋರ್ಮುಜ್ ಜಲಸಂಧಿಯ ಮೂಲಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲದ ಬೆಲೆ ಶೇ. 2ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 84.73 ಡಾಲರ್‌ಗೆ ತಲುಪಿದೆ.

ಡೀಸೆಲ್ ಖರೀದಿಗೆ ಮಿತಿ

ದೇಶೀಯ ಮಾರುಕಟ್ಟೆಯಲ್ಲಿ ತೈಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರಿಟೇಲ್ ಔಟ್‌ಲೆಟ್‌ಗಳಲ್ಲಿ ಪ್ರತಿ ಗ್ರಾಹಕ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ನಿರ್ಬಂಧವು ಮುಂದಿನ 90 ದಿನಗಳವರೆಗೆ ಜಾರಿಯಲ್ಲಿರುತ್ತದೆ ಮತ್ತು ಅಗತ್ಯ ಬಿದ್ದರೆ ಸರ್ಕಾರ ಇದನ್ನು ವಿಸ್ತರಿಸುವ ಸಾಧ್ಯತೆಯಿದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಉಂಟಾಗುವ ಹೆಚ್ಚಿನ ವೆಚ್ಚದ ಹೊರೆಯಿಂದ ಗ್ರಾಹಕರನ್ನು ರಕ್ಷಿಸಲು ಸರ್ಕಾರಿ ತೈಲ ಕಂಪನಿಗಳು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ದೇಶೀಯವಾಗಿ ಇಂಧನ ಬೆಲೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.