ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವರ್ಷದ ಅಂತ್ಯದ ವೇಳೆಗೆ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ವರದಿಗಳು ಸೂಚಿಸುತ್ತಿವೆ. ಜಾಗತಿಕ ಉದ್ವಿಗ್ನತೆ ಮತ್ತು ಹಣದುಬ್ಬರ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಬಹುದಾಗಿದ್ದು, ಇದು ಗೃಹ, ವಾಹನ ಸಾಲಗಳ ಇಎಂಐ ಮೇಲೆ ನೇರ ಪರಿಣಾಮ ಬೀರಲಿದೆ.

ಬೆಂಗಳೂರು: ನೀವು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದೀರಾ? ಪ್ರತಿ ತಿಂಗಳು ಕಟ್ಟುವ ನಿಮ್ಮ ಇಎಂಐ (EMI) ಕಂತು ಹೆಚ್ಚಾಗುವ ಆತಂಕ ನಿಮಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ಸಾಲಗಾರರಿಗೆ ಶಾಕ್ ನೀಡುವ ಸಾಧ್ಯತೆಯಿದೆ ಎನ್ನುತ್ತಿವೆ ಆರ್ಥಿಕ ವರದಿಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯಕ್ಕೆ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಈ ವರ್ಷದ ಅಂತ್ಯದ ವೇಳೆಗೆ ಆರ್‌ಬಿಐ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂದು ಆರ್ಥಿಕ ತಜ್ಞರು ಮತ್ತು ಜಾಗತಿಕ ಸಂಸ್ಥೆಗಳು ಅಂದಾಜಿಸಿವೆ. ಒಂದು ವೇಳೆ ಬಡ್ಡಿ ದರ ಏರಿಕೆಯಾದರೆ ಸಾಮಾನ್ಯರ ಮೇಲೆ ಇಎಂಐ ಹೊರೆ ಇನ್ನಷ್ಟು ಹೆಚ್ಚಾಗಲಿದೆ.

ಪ್ರಮುಖ ಬ್ರೋಕರೇಜ್ ಸಂಸ್ಥೆ BofA Securities ಪ್ರಕಾರ, ಡಿಸೆಂಬರ್ ವೇಳೆಗೆ ಆರ್‌ಬಿಐ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿನ ಯುದ್ಧಗಳು ಮತ್ತು ಜಾಗತಿಕ ಉದ್ವಿಗ್ನತೆಯಿಂದಾಗಿ ಹಣದುಬ್ಬರ (Inflation) ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಆರ್‌ಬಿಐ ಸುಮಾರು 50 ಬೇಸಿಸ್ ಪಾಯಿಂಟ್‌ಗಳಷ್ಟು (0.50%) ಬಡ್ಡಿ ದರವನ್ನು ಏರಿಸಬಹುದು ಎಂದು ವರದಿ ತಿಳಿಸಿದೆ.

ಬಡ್ಡಿ ದರ ಏರಿಕೆಗೆ ಕಾರಣ

ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿವೆ. ದೇಶದಲ್ಲಿ ಈ ಬಾರಿ ದಾಖಲಾದ ಮಳೆಯ ಕೊರತೆ ಮತ್ತು 'ಎಲ್-ನಿನೋ' (El Niño) ಪ್ರಭಾವದಿಂದಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿ ಹಣದುಬ್ಬರ ಉಲ್ಬಣಿಸುವ ಭೀತಿ ಇದೆ. ಬರಗಾಲದಂತಹ ಪರಿಸ್ಥಿತಿ ಎದುರಾದರೆ ಗ್ರಾಮೀಣ ಭಾಗದ ಆರ್ಥಿಕತೆ ಕುಸಿಯಬಹುದು, ಇದು ಒಟ್ಟಾರೆ ದೇಶದ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತದೆ.

ಏನು ಪರಿಣಾಮ?

ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದರೆ, ಬ್ಯಾಂಕುಗಳು ಕೂಡ ತಾವು ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಇದರಿಂದ. ಗೃಹ ಸಾಲ (Home Loan), ವಾಹನ ಸಾಲ (Car Loan) ಮತ್ತು ವೈಯಕ್ತಿಕ ಸಾಲಗಳ (Personal Loan) ಇಎಂಐ ದುಬಾರಿಯಾಗಲಿದೆ. ಹೊಸದಾಗಿ ಸಾಲ ಪಡೆಯುವವರಿಗೆ ಹೆಚ್ಚಿನ ಬಡ್ಡಿ ಹೊರೆ ಬೀಳಲಿದೆ. ಮಧ್ಯಮ ವರ್ಗದ ಜನರ ಮಾಸಿಕ ಬಜೆಟ್ ಮೇಲೆ ಇದು ನೇರ ಪರಿಣಾಮ ಬೀರಲಿದೆ.

ಇದೇ ವೇಳೆ ಬೋಫಾ ಸೆಕ್ಯುರಿಟೀಸ್ ಸಮಾಧಾನಕರ ಸುದ್ದಿಯನ್ನೂ ನೀಡಿದೆ. 2026-27ರ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ (GDP) ಬೆಳವಣಿಗೆಯ ಅಂದಾಜನ್ನು ಶೇಕಡಾ 6.5 ರಿಂದ 6.9 ಕ್ಕೆ ಏರಿಸಿದೆ. ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿರುವುದು ಭಾರತದ ಆರ್ಥಿಕತೆಗೆ ವರವಾಗಲಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ದೇಶದ ಆರ್ಥಿಕತೆ ಸುಧಾರಿಸುತ್ತಿದ್ದರೂ, ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಾಲಗಾರರು ಮುಂಬರುವ ದಿನಗಳಲ್ಲಿ ಇಎಂಐ ಏರಿಕೆಗೆ ಮಾನಸಿಕವಾಗಿ ಸಿದ್ಧರಾಗಬೇಕಿದೆ.