ದೇವರಿಗೆ ಕೈ ಮುಗಿದು ದೇವರನ್ನೇ ಕದ್ದ ಕಳ್ಳ: ವೀಡಿಯೋ ವೈರಲ್
ದೇವಸ್ಥಾನಕ್ಕೆ ಬಂದ ಕಳ್ಳನೋರ್ವ ಕಳ್ಳತನಕ್ಕೂ ಮೊದಲು ದೇವರಿಗೆ ಕೈ ಮುಗಿದ್ದು, ಬಳಿಕ ದೇಗುಲದ ಶಿವಲಿಂಗದ ಮೇಲಿದ್ದ ಹಾವಿನ ಪ್ರತಿಮೆಯನ್ನು ಎತ್ತಿಕೊಂಡು ಹೋದ ವಿಚಿತ್ರ ಘಟನೆ ನಡೆದಿದೆ.
ಬಿಹಾರ: ದೇವಸ್ಥಾನಕ್ಕೆ ಬಂದ ಕಳ್ಳನೋರ್ವ ಕಳ್ಳತನಕ್ಕೂ ಮೊದಲು ದೇವರಿಗೆ ಕೈ ಮುಗಿದ್ದು, ಬಳಿಕ ದೇಗುಲದ ಶಿವಲಿಂಗದ ಮೇಲಿದ್ದ ಹಾವಿನ ಪ್ರತಿಮೆಯನ್ನು ಎತ್ತಿಕೊಂಡು ಹೋದ ವಿಚಿತ್ರ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರ ಛಪ್ರಾ ಜಿಲ್ಲೆಯ ದೇಗುಲವೊಂದರಲ್ಲಿ ಈ ಘಟನೆ ನಡೆದಿದೆ. ವೀಡಿಯೋ ನೋಡಿದ ಜನ ಕಳ್ಳನ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳ್ಳನಾದರೇನು ದೇವರ ಮೇಲೆ ಭಕ್ತಿ ಇರಬಾರದು ಅಂತೇನು ಇಲ್ವಲ್ಲ? ಹಾಗಾಗಿ ಈ ಕಳ್ಳ ದೇವರ ಮೇಲಿನ ನಂಬಿಕೆಯ ಜೊತೆ ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದ ದೇಗುಲಕ್ಕೆ ಬಂದಿದ್ದಾನೆ. ಮೊದಲಿಗೆ ಶಿವಲಿಂಗದ ಮುಂದೆ ನಿಂತುಕೊಂಡು ಎರಡು ಕೈಗಳನ್ನು ಜೋಡಿಸಿ ಕೈ ಮುಗಿದಿದ್ದಾನೆ. ಬಳಿಕ ಯಾರಾದರೂ ಇದ್ದಾರೋ ಎಂದು ಅತ್ತಿತ್ತ ನೋಡಿದ ಆತನಿಗೆ ಬಹುಶಃ ದೇಗುಲದೊಳಗಿದ್ದ ಸಿಸಿಟಿವಿ ಬಗ್ಗೆ ಅರಿವಿಲ್ಲ.
ದೇಗುಲಕ್ಕೆ ಬಂದು ಕೈಗಳ ಜೋಡಿಸಿ ದೇವರಿಗೆ ಕೈ ಮುಗಿದ ಆತ ನಿಧಾನವಾಗಿ ಶಿವಲಿಂಗದ ಮೇಲಿದ್ದ ಹಾವಿನ ಕಂಚಿನ ಪ್ರತಿಮೆಯನ್ನು ತೆಗೆದಿದ್ದಾನೆ. ಅದಕ್ಕೂ ಮೊದಲು ಕೂಡ ಆತ ಮತ್ತೊಮ್ಮೆ ಕೈ ಮುಗಿದಿದ್ದು, ನಂತರ ನಿಧಾನವಾಗಿ ಶಿವಲಿಂಗದ ಮೇಲಿದ್ದ ಹಾವನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ವೀಡಿಯೋ ಈಗ ವೈರಲ್ ಆಗುತ್ತಿದೆ. ಛಪ್ರಾದ ಬಟೇಶ್ವರನಾಥ ದೇಗುಲದಲ್ಲಿ ಈ ಘಟನೆ ನಡೆದಿದೆ.
ಕಳ್ಳನ ವರ್ತನೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಛಪ್ರಾದ ಭಗವಾನ್ ಬಜಾರ್ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.