ದೇಶದ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೇರಿ ಇದೀಗ ಆಹಾರ ಸುರಕ್ಷತಾ ನಿಯಂತ್ರಕ ಸಂಸ್ಥೆಯ ಕ್ರಮದಿಂದ ಸುದ್ದಿಯಾಗಿದೆ. ಇಂದು ಭಾರತದ ಮನೆಮನೆಗಳಲ್ಲಿ ಪರಿಚಿತವಾಗಿರುವ ಬಿಸ್ಲೇರಿ ಬ್ರ್ಯಾಂಡ್ 1965ರಲ್ಲಿ ಭಾರತಕ್ಕೆ ಪ್ರವೇಶಿಸಿತು. ಬಿಸ್ಲೇರಿ ಹುಟ್ಟಿದ ಕಥೆ ಇಲ್ಲಿದೆ.

ಭಾರತದಲ್ಲಿ ಇಂದು "ಕುಡಿಯುವ ನೀರಿನ ಬಾಟಲಿ" ಎಂದಾಕ್ಷಣ ಪ್ರತಿಯೊಬ್ಬರ ಬಾಯಲ್ಲೂ ಮೊದಲು ಬರುವ ಹೆಸರು 'ಬಿಸ್ಲೇರಿ'. ಒಂದು ಕಾಲದಲ್ಲಿ ನೀರನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡುವುದು ಹುಚ್ಚುತನ ಎಂದು ಟೀಕಿಸಲ್ಪಟ್ಟಿದ್ದ ಕಲ್ಪನೆಯನ್ನೇ ಬಂಡವಾಳವಾಗಿಸಿಕೊಂಡು, ಇಂದು ಭಾರತದ ಸಂಘಟಿತ ಬಾಟಲಿ ನೀರಿನ ಮಾರುಕಟ್ಟೆಯಲ್ಲಿ ಸುಮಾರು ಶೇ. 60ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ಬಿಸ್ಲೇರಿಯ ಪ್ರಯಾಣ ನಿಜಕ್ಕೂ ರೋಚಕ.

ಇಟಲಿಯಲ್ಲಿ ಜನನ ಮತ್ತು ಭಾರತಕ್ಕೆ ಆಗಮನ (1965)

ಬಿಸ್ಲೇರಿ ಮೂಲತಃ ಭಾರತೀಯ ಬ್ರ್ಯಾಂಡ್ ಅಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ. 19ನೇ ಶತಮಾನದಲ್ಲಿ ಇಟಲಿಯ ಉದ್ಯಮಿ ಫೆಲಿಸ್ ಬಿಸ್ಲೇರಿ (Felice Bisleri) ಅವರು ರಾಸಾಯನಿಕ ಪ್ರಯೋಗಾಲಯವೊಂದನ್ನು ಸ್ಥಾಪಿಸಿ, ಇಟಲಿಯ ನೊಸೆರಾ ಉಂಬ್ರಾದ 'ಆಂಜೆಲಿಕಾ ಬುಗ್ಗೆ'ಯಿಂದ ಖನಿಜಯುಕ್ತ ನೀರನ್ನು ಪತ್ತೆಹಚ್ಚಿದರು. ಜೊತೆಗೆ 'ಫೆರೋ-ಚೀನಾ ಬಿಸ್ಲೇರಿ' ಎಂಬ ಗಿಡಮೂಲಿಕೆ ಆರೋಗ್ಯ ಟಾನಿಕ್ ಅನ್ನೂ ಪರಿಚಯಿಸಿದರು.

1965ರಲ್ಲಿ ಇಟಾಲಿಯನ್ ವೈದ್ಯ ಸಿಸೇರ್ ರೊಸ್ಸಿ ಮತ್ತು ಭಾರತೀಯ ಉದ್ಯಮಿ ಖುಶ್ರೂ ಸಂಟೂಕ್ ಅವರು ಮುಂಬೈ ಸಮೀಪದ ಥಾಣೆಯಲ್ಲಿ ಬಾಟಲಿ ಘಟಕವನ್ನು ಸ್ಥಾಪಿಸುವ ಮೂಲಕ ಬಿಸ್ಲೇರಿಯನ್ನು ಭಾರತಕ್ಕೆ ತಂದರು. ಆರಂಭದಲ್ಲಿ ಮುಂಬೈನ ಐಷಾರಾಮಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಗಾಜಿನ ಬಾಟಲಿಗಳಲ್ಲಿ 'ಬಬ್ಲಿ' ಮತ್ತು 'ಸ್ಟಿಲ್' ನೀರನ್ನು ಮಾರಾಟ ಮಾಡಲಾಗುತ್ತಿತ್ತು.

₹4 ಲಕ್ಷಕ್ಕೆ ಪಾರ್ಲೆ ಗ್ರೂಪ್ ತೆಕ್ಕೆಗೆ ಬಿದ್ದ ತಿರುವು (1969)

ಭಾರತೀಯ ಗ್ರಾಹಕರಿಗೆ ನೀರನ್ನು ಹಣ ಕೊಟ್ಟು ಖರೀದಿಸುವ ಅಭ್ಯಾಸವಿಲ್ಲದ ಕಾರಣ, 1969ರ ಹೊತ್ತಿಗೆ ಬಿಸ್ಲೇರಿ ತೀವ್ರ ನಷ್ಟ ಅನುಭವಿಸಿ ಭಾರತದಿಂದ ನಿರ್ಗಮಿಸಲು ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ಪಾರ್ಲೆ ಗ್ರೂಪ್‌ನ ಸಂಸ್ಥಾಪಕ ಜಯಂತಿಲಾಲ್ ಚೌಹಾಣ್ ಅವರು ಕೇವಲ ₹4 ಲಕ್ಷಕ್ಕೆ ಬಿಸ್ಲೇರಿ ಬ್ರ್ಯಾಂಡ್ ಅನ್ನು ಖರೀದಿಸಿದರು. ನಂತರ ಸಂಸ್ಥೆಯ ಚುಕ್ಕಾಣಿಯನ್ನು ಅವರ ಪುತ್ರ ರಮೇಶ್ ಚೌಹಾಣ್ ವಹಿಸಿಕೊಂಡರು.

ರಮೇಶ್ ಚೌಹಾಣ್ ಅವರ ದೂರದೃಷ್ಟಿಯಿಂದ ಬಿಸ್ಲೇರಿಯ ಸ್ವರೂಪವೇ ಬದಲಾಯಿತು. ದುಬಾರಿ ಗಾಜಿನ ಬಾಟಲಿಗಳ ಬದಲಿಗೆ ಹಗುರವಾದ ಮತ್ತು ಅಗ್ಗದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಪರಿಚಯಿಸಲಾಯಿತು. 500 ಮಿ.ಲೀ., 1 ಲೀಟರ್‌ನಿಂದ ಹಿಡಿದು ಮನೆ ಮತ್ತು ಕಚೇರಿಗಳಿಗೆ ಬೇಕಾದ 20 ಲೀಟರ್ ಜಾಡಿಗಳವರೆಗೆ ವಿವಿಧ ಗಾತ್ರಗಳಲ್ಲಿ ನೀರನ್ನು ಮಾರುಕಟ್ಟೆಗೆ ಬಿಡಲಾಯಿತು.

ಬಿಸ್ಲೇರಿಯ ಯಶಸ್ಸಿನ ಸೂತ್ರ

ಬಿಸ್ಲೇರಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ನಾಲ್ಕು ಪ್ರಮುಖ ತಂತ್ರಗಳನ್ನು ಅಳವಡಿಸಿಕೊಂಡಿದೆ.

ಉತ್ಪನ್ನ ವೈವಿಧ್ಯೀಕರಣ : ಕೇವಲ ಕುಡಿಯುವ ನೀರಿಗೆ ಸೀಮಿತವಾಗದೆ, 'ವೇದಿಕಾ' ಎಂಬ ಪ್ರೀಮಿಯಂ ಹಿಮಾಲಯನ್ ಸ್ಪ್ರಿಂಗ್ ವಾಟರ್, ಸೋಡಾ, ಕಾರ್ಬೊನೇಟೆಡ್ ಮತ್ತು ಕಾರ್ಬೊನೇಟೆಡ್ ಅಲ್ಲದ ತಂಪು ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಹಾಗೂ ಫೇಶಿಯಲ್ ವೈಪ್ಸ್‌ಗಳನ್ನು ಪರಿಚಯಿಸಿದೆ.

ಚಾಣಾಕ್ಷ ಬೆಲೆ ನಿಗದಿ : 1 ಲೀಟರ್ ಬಾಟಲಿಗೆ ₹20 ನಿಗದಿಪಡಿಸಿದರೆ, 2 ಲೀಟರ್ ಬಾಟಲಿಗೆ ₹30 ನಿಗದಿಪಡಿಸುವ ಮೂಲಕ ಗ್ರಾಹಕರು ದೊಡ್ಡ ಪ್ಯಾಕ್ ಖರೀದಿಸುವಂತೆ ಪ್ರೇರೇಪಿಸಿತು. ಜೊತೆಗೆ ಸಾಮಾನ್ಯ ಅಂಗಡಿಗಳಿಗಿಂತ ಮಾಲ್‌ಗಳು, ಥಿಯೇಟರ್ ಮತ್ತು ರೆಸ್ಟೋರೆಂಟ್‌ಗಳಿಗೆ ಪ್ರತ್ಯೇಕ ಬೆಲೆ ನೀತಿಯನ್ನು ಅಳವಡಿಸಿಕೊಂಡಿತು.

ಬೃಹತ್ ವಿತರಣಾ ಜಾಲ : ಇಂದು ಬಿಸ್ಲೇರಿ 122 ಕಾರ್ಯಾಚರಣಾ ಘಟಕಗಳು, 4,500ಕ್ಕೂ ಹೆಚ್ಚು ವಿತರಕರು ಹಾಗೂ 5,000 ವಿತರಣಾ ಟ್ರಕ್‌ಗಳ ಬಲವಾದ ಜಾಲವನ್ನು ಹೊಂದಿದ್ದು, ದೇಶದ ಮೂಲೆಮೂಲೆಯ ಹಳ್ಳಿಗಳಿಗೂ ತಲುಪಿದೆ.

ಮನಮುಟ್ಟುವ ಜಾಹೀರಾತುಗಳು : "ಬಿಸ್ಲೇರಿ ಈಸ್ ವೆರಿ ವೆರಿ ಎಕ್ಸ್‌ಟ್ರಾರ್ಡಿನರಿ", "ಹರ್ ಪಾನಿ ಕಿ ಬಾಟಲ್ ಬಿಸ್ಲೇರಿ ನಹಿ" "ಒಂದು ರಾಷ್ಟ್ರ, ಒಂದು ನೀರು" ಹಾಗೂ "ಸಮಜ್‌ದಾರ್ ಬಿಸ್ಲೇರಿ ಪೀತೇ ಹೈ" ಎಂಬ ಅಭಿಯಾನಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

ಬಿಸ್ಲೇರಿ ಎದುರಿಸುತ್ತಿರುವ ಪ್ರಮುಖ ಸವಾಲುಗಳು

ಯಶಸ್ಸಿನ ಜೊತೆಗೆ ಬಿಸ್ಲೇರಿ ಹಲವು ಗಂಭೀರ ಸವಾಲುಗಳನ್ನೂ ಎದುರಿಸುತ್ತಿದೆ.

ಬಿಸ್ಲೇರಿಯ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ಮಾರುಕಟ್ಟೆಯಲ್ಲಿ 'ಬೆಲ್ಸ್ರಿ' (Belsri), 'ಬಿಲ್ಸೇರಿ' (Bilseri), 'ಬ್ರಿಸ್ಲೇಯಿ', 'ಬಿಸ್ಲಾರ್' ನಂತಹ ನಕಲಿ ಹೆಸರಿನ ಬಾಟಲಿಗಳು ತಲೆಎತ್ತಿವೆ. ಕೆಲವು ಕಿಡಿಗೇಡಿಗಳು ಖಾಲಿ ಬಿಸ್ಲೇರಿ ಬಾಟಲಿಗಳನ್ನು ಸಂಗ್ರಹಿಸಿ, ಅದಕ್ಕೆ ಅಶುದ್ಧ ನೀರನ್ನು ತುಂಬಿ ಮಾರಾಟ ಮಾಡುವುದು ಕಂಪನಿಯ ಬ್ರ್ಯಾಂಡ್ ಮೌಲ್ಯ ಮತ್ತು ಗ್ರಾಹಕರ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ.

ಟಾಟಾ, ನೆಸ್ಲೆ, ಎಚ್‌ಯುಎಲ್ ನಂತಹ ದೈತ್ಯ ಕಂಪನಿಗಳು ಹಾಗೂ ಸ್ಥಳೀಯ ಉತ್ಪಾದಕರಿಂದ ತೀವ್ರ ಪೈಪೋಟಿಯಿದೆ. ಇದರೊಂದಿಗೆ ಮನೆಗಳಲ್ಲಿ ಆರ್‌ಒ ವಾಟರ್ ಪ್ಯೂರಿಫೈಯರ್‌ಗಳ ಬಳಕೆ ಹೆಚ್ಚಾಗಿರುವುದೂ ವ್ಯವಹಾರದ ಮೇಲೆ ಪ್ರಭಾವ ಬೀರಿದೆ.

ಆರ್ಥಿಕ ಬೆಳವಣಿಗೆ, ಪರಿಸರ ಕಾಳಜಿ ಮತ್ತು ಎಫ್‌ಎಸ್‌ಎಸ್‌ಎಐ ಎಚ್ಚರಿಕೆ

2023ನೇ ಹಣಕಾಸು ವರ್ಷದಲ್ಲಿ ಬಿಸ್ಲೇರಿಯ ವಹಿವಾಟು ಸುಮಾರು ₹2,500 ಕೋಟಿ ತಲುಪಿದ್ದು, ₹220 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಈ ಹಂತದಲ್ಲಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಸಂಸ್ಥೆಯು ಬಿಸ್ಲೇರಿಯನ್ನು ಸುಮಾರು ₹7,000 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದವು. ಸದ್ಯ ಇದರ ನಿವ್ವಳ ಮೌಲ್ಯ 10 ಸಾವಿರ ಕೋಟಿಗೆ ಹತ್ತಿರದಲ್ಲಿದೆ ಎಂದು ವರದಿ ತಿಳಿಸಿದೆ.

ಮತ್ತೊಂದೆಡೆ, ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಬಿಸ್ಲೇರಿ 'ಬದಲಾವಣೆಗಾಗಿ ಬಾಟಲಿಗಳು' ಎಂಬ ಸುಸ್ಥಿರ ಯೋಜನೆಯನ್ನು ಆರಂಭಿಸಿದೆ. ಇದರ ಭಾಗವಾಗಿ ಗಾಜಿಯಾಬಾದ್ ನಗರ ನಿಗಮ ಮತ್ತು ಐಪಿಸಿಎ ಸಹಯೋಗದಲ್ಲಿ ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಲಾದ ವಿನೂತನ 'ಗಜಾಬ್ ಸ್ಟ್ರೀಟ್' ಅನ್ನು ನಿರ್ಮಿಸಿ ಮಾದರಿಯಾಗಿದೆ.

ಗುಣಮಟ್ಟದ ಸವಾಲು ಮತ್ತು ಎಫ್‌ಎಸ್‌ಎಸ್‌ಎಐ ಕ್ರಮ:

ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಬಿಸ್ಲೇರಿ ಇಂಟರ್‌ನ್ಯಾಷನಲ್‌ನ ಕೆಲವು ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಹಾಗೂ ಪ್ರಯೋಗಾಲಯದ ಮರುಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ, ಕಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆ ಮಾದರಿಗಳನ್ನು 'ಅಸುರಕ್ಷಿತ' ಎಂದು ಘೋಷಿಸಿ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ಇದು ಪ್ಯಾಕೇಜ್ಡ್ ನೀರಿನ ಉದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ಎಷ್ಟು ನಿರ್ಣಾಯಕ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.