Bisleri Water : ಬಾಟಲ್‌ ನೀರು ಎಂದಾಗ ಮೊದಲು ನೆನಪಾಗೋದು ಬಿಸ್ಲರಿ. ಆದ್ರೆ ಈಗ ಅದ್ರ ಮೇಲೆಯೇ ಗಂಭೀರ ಆರೋಪ ಬಂದಿದೆ. ಕಂಪನಿ ನೀಡ್ತಿರುವ ನೀರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡಿದೆ.

ಜನಪ್ರಿಯ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೇರಿ (Bisleri) ಇದೀಗ ವಿವಾದಕ್ಕೆ ಸಿಲುಕಿದೆ. ಬಿಸ್ಲೇರಿ ಇಂಟರ್ನ್ಯಾಷನಲ್ ಕಂಪನಿಯ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮ ಆರಂಭಿಸಿದೆ. ಕಂಪನಿಯ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅದು ಸುರಕ್ಷಿತವಲ್ಲ ಎಂಬ ವರದಿ ಬಂದಿರುವುದೇ ಇದಕ್ಕೆ ಕಾರಣ. ಆದರೆ, ಈ ಆರೋಪದ ಬೆನ್ನಲ್ಲೇ ಬಿಸ್ಲೇರಿ ಕಂಪನಿ ಪ್ರತಿಕ್ರಿಯೆ ನೀಡಿದ್ದು, ತನ್ನ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.

ಏನಿದು ಬಿಸ್ಲೇರಿ ಕಂಪನಿಯ ವಿರುದ್ಧದ ಆರೋಪ?

ಈ ಪ್ರಕರಣ ಸುಮಾರು 14 ತಿಂಗಳ ಹಳೆಯದ್ದು. ಅಂದರೆ, 2025ರ ಸೆಪ್ಟೆಂಬರ್ನಲ್ಲಿ ಗೋವಾದಲ್ಲಿರುವ ಬಿಸ್ಲೇರಿ ಉತ್ಪಾದನಾ ಘಟಕದಲ್ಲಿ ತಯಾರಾದ ನೀರಿನ ಒಂದು ಬ್ಯಾಚ್ಗೆ ಸಂಬಂಧಿಸಿದೆ. ಕಂಪನಿ ದೇಶಾದ್ಯಂತ 143 ಉತ್ಪಾದನಾ ಘಟಕಗಳನ್ನು ಹೊಂದಿದೆ. ಅದ್ರಲ್ಲಿ ಗೋವಾ ಕೂಡ ಸೇರಿದೆ. 2025ರ ಸೆಪ್ಟೆಂಬರ್ 30ರಂದು FSSAI ಅಧಿಕಾರಿಗಳು ಗೋವಾ ಘಟಕದಿಂದ ಒಟ್ಟು ಆರು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಆರಂಭಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು. ಆದರೆ, ಆರನೇ ಮಾದರಿಯಲ್ಲಿ ಬಯಸಿದ ಪ್ರಮಾಣಕ್ಕಿಂತ ಹೆಚ್ಚಿನ ಬ್ರೋಮೇಟ್ (Bromate) ಪತ್ತೆಯಾಗಿತ್ತು.

ನೀರಿನಲ್ಲಿ ಪ್ರತಿ ಲೀಟರ್ಗೆ ಗರಿಷ್ಠ 10 ಮೈಕ್ರೋಗ್ರಾಂ ಬ್ರೋಮೇಟ್ ಇರಲು ಅನುಮತಿ ಇದೆ. ಆದರೆ, ಬಿಸ್ಲೇರಿಯ ಮಾದರಿಯಲ್ಲಿ 12 ಮೈಕ್ರೋಗ್ರಾಂ ಬ್ರೋಮೇಟ್ ಪತ್ತೆಯಾಗಿತ್ತು. ಹೀಗಾಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಈ ಮಾದರಿಯನ್ನು ಸುರಕ್ಷಿತವಲ್ಲ ಎಂದು ಘೋಷಿಸಲಾಗಿತ್ತು.

ಮರುಪರೀಕ್ಷೆಯ ವರದಿ

ಆರಂಭಿಕ ಪರೀಕ್ಷೆಯ ವರದಿಯನ್ನು ಪ್ರಶ್ನಿಸಿ ಬಿಸ್ಲೇರಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ FSSAI ಅದೇ ಮಾದರಿಯನ್ನು ಮತ್ತೊಂದು ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಪ್ರಯೋಗಾಲಯದ ವರದಿಯಲ್ಲಿ ಪಾಲಿನ್ಯೂಕ್ಲಿಯರ್ ಅರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHs) ಪತ್ತೆಯಾಗಿರುವುದಾಗಿ ತಿಳಿಸಲಾಗಿತ್ತು. ಈ ಕಾರಣದಿಂದ ಮಾದರಿಯನ್ನು ಮತ್ತೊಮ್ಮೆ ಸುರಕ್ಷಿತವಲ್ಲ ಎಂದು ಘೋಷಿಸಲಾಗಿತ್ತು. ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿದ FSSAI, ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ ನೀಡಿದೆ.

ಬಿಸ್ಲೇರಿ ಕಂಪನಿ ಹೇಳಿದ್ದೇನು?

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಬಿಸ್ಲೇರಿ ಕಂಪನಿ, ಪ್ರಕರಣ 2025ರ ಸೆಪ್ಟೆಂಬರ್ನಲ್ಲಿ ತಯಾರಾದ ಒಂದು ಬ್ಯಾಚ್ಗೆ ಮಾತ್ರ ಸಂಬಂಧಿಸಿದೆ ಎಂದು ಹೇಳಿದೆ. 2025ರ ನವೆಂಬರ್ 22ರಂದು ಮೇಲ್ಮನವಿ ಸಲ್ಲಿಸಿದ ಬಳಿಕ FSSAI ಮಾದರಿಯನ್ನು ಮರುಪರೀಕ್ಷೆಗೆ ಕಳುಹಿಸಿತ್ತು. ಈ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇರುವುದು ಪತ್ತೆಯಾಗಿತ್ತು. ಆದರೆ, ಅದೇ ಮಾದರಿಯಲ್ಲಿ PAHs ಇರುವುದಾಗಿ ವರದಿ ನೀಡಲಾಗಿತ್ತು. ಎರಡು ಪರೀಕ್ಷೆಗಳ ವರದಿಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕಂಪನಿ ಮತ್ತೊಮ್ಮೆ FSSAI ಅನುಮೋದಿತ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿತ್ತು. ಅಲ್ಲಿಯೂ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇರುವುದು ದೃಢಪಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದಲ್ಲದೆ, ಮರುಪರೀಕ್ಷೆಯ ಬಳಿಕ FSSAIಯಿಂದ ಯಾವುದೇ ಹೆಚ್ಚಿನ ಮಾಹಿತಿ ಬಂದಿರಲಿಲ್ಲ. ಹೀಗಾಗಿ ಪ್ರಕರಣ ಮುಕ್ತಾಯವಾಗಿದೆ ಎಂದು ಭಾವಿಸಿದ್ದೆವು. ಈವರೆಗೂ ನಮಗೆ ಇ-ಮೇಲ್ ಅಥವಾ ಹಾರ್ಡ್ ಕಾಪಿ ಮೂಲಕ ಯಾವುದೇ ನೋಟಿಸ್ ಬಂದಿಲ್ಲ. FSSAI ವೆಬ್ಸೈಟ್ನಲ್ಲಿಯೂ ಅಂತಹ ನೋಟಿಸ್ ಕಂಡುಬಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ನೀರಿನ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. 10 ಹಂತಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪ್ರಕರಣವನ್ನು ನಿಯಮಾನುಸಾರ ಪರಿಹರಿಸಲು FSSAI ಜೊತೆ ಸಹಕರಿಸುವುದಾಗಿ ಬಿಸ್ಲೇರಿ ತಿಳಿಸಿದೆ.