ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಖುಷಿ ತಂದಿದ್ದರೆ, ಗೋಲ್ಡ್ ಲೋನ್ ಪಡೆದವರಲ್ಲಿ ಆತಂಕ ಮೂಡಿಸಿದೆ. ಹೂಡಿಕೆ ತಜ್ಞ ರುದ್ರಮೂರ್ತಿ ಅವರ ಪ್ರಕಾರ, ಡಿಸೆಂಬರ್ ಬದಲಿಗೆ ಈಗಿನಿಂದಲೇ ಹಂತ ಹಂತವಾಗಿ ಚಿನ್ನ ಖರೀದಿಸುವುದು ಉತ್ತಮ. ಲೋನ್ ಪಡೆದವರು ಎಲ್ ಟಿ ವಿ ರೇಶಿಯೋ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದೇಕೆ? ಸ್ಟೋರಿ ಓದಿ..

ಬೆಂಗಳೂರು: ಬಂಗಾರದ ರೇಟು ಸತತವಾಗಿ ಇಳಿಯುತ್ತಿದೆ. ಇದು ಆಭರಣ ಪ್ರಿಯರಿಗೆ ಖುಷಿ ತಂದಿದ್ದರೆ, ಮತ್ತೊಂದೆಡೆ ಚಿನ್ನ ಅಡವಿಟ್ಟು ಸಾಲ ಪಡೆದವರಲ್ಲಿ ಆತಂಕ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಚಿನ್ನ ಖರೀದಿಸಲು ಇದು ಸಕಾಲವೇ? ಅಥವಾ ಇನ್ನಷ್ಟು ದಿನ ಕಾಯಬೇಕೇ? ಗೋಲ್ಡ್ ಲೋನ್ ಪಡೆದವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಲ್ಲಾ ಪ್ರಶ್ನೆಗಳಿಗೂ ಹೂಡಿಕೆ ತಜ್ಞ ರುದ್ರಮೂರ್ತಿ ಉತ್ತರ ನೀಡಿದ್ದಾರೆ.

ರುದ್ರಮೂರ್ತಿ ಸಲಹೆ ಏನು?

ಭಾರತದಲ್ಲಿ ಹೇಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದೆಯೋ, ಅದೇ ರೀತಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ 'ಫೆಡರಲ್ ರಿಸರ್ವ್' ಇದೆ. ಇದರ ಗವರ್ನರ್ ಕ್ರಿಸ್ಟೋಫರ್ ವಾಲರ್‍‌ ಡಿಸೆಂಬರ್ ತಿಂಗಳಲ್ಲಿ ಬಡ್ಡಿ ದರ ಏರಿಕೆ ಮಾಡುವುದಾಗಿ ಸುಳಿವು ನೀಡಿದ್ದಾರೆ. ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಇಳಿಕೆ ಆಗ್ತಿದೆ. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಡ್ಡಿ ದರ ಏರಿಕೆಯಾಗುತ್ತಿರುವುದು ಹಾಗೂ ಎರಡನೆಯದಾಗಿ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಕಚ್ಚಾತೈಲದ ಬೆಲೆ ಹೆಚ್ಚಾಗಿರುವುದು ಚಿನ್ನದ ರೇಟ್ ಕುಸಿತಕ್ಕೆ ಕಾರಣವಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಚಿನ್ನ ಖರೀದಿಗೆ ಇದು ಸಕಾಲನಾ?

ಚಿನ್ನ ಖರೀದಿಸಲು ಡಿಸೆಂಬರ್‌ವರೆಗೂ ಕಾಯಬೇಡಿ, ಈಗಿನಿಂದಲೇ ಖರೀದಿ ಪ್ರಾರಂಭಿಸಿ ಎಂದು ಹೂಡಿಕೆ ತಜ್ಞ ರುದ್ರಮೂರ್ತಿ ಸಲಹೆ ನೀಡಿದ್ದಾರೆ. ಈ ಬೆಲೆಗಳು ಮತ್ತೆ ಸಿಗದೇ ಇರಬಹುದು. ಬೆಳ್ಳಿ ದರ ಒಂದೂವರೆ ಲಕ್ಷ ರೂಪಾಯಿ ಆಸುಪಾಸಿಗೆ ಬಂದಿದ್ದು, 22 ಕ್ಯಾರೆಟ್ ಚಿನ್ನದ ದರವೂ ಇಳಿಕೆ ಆಗುವುದರಿಂದ ಖರೀದಿ ಮಾಡಲು ಇದು ಉತ್ತಮ ಸಮಯ. ನೀವು ಒಂದೇ ಬಾರಿಗೆ ದೊಡ್ಡ ಮೊತ್ತದ ಚಿನ್ನ ಖರೀದಿಸುವ ಬದಲು 'ಹಂತ ಹಂತವಾಗಿ ಖರೀದಿಸುವುದು ಜಾಣತನ. ಉದಾಹರಣೆಗೆ ನಿಮಗೆ 50 ಗ್ರಾಂ ಚಿನ್ನ ಬೇಕಾಗಿದ್ದರೆ ಈಗಲೇ 10 ಗ್ರಾಂ ಖರೀದಿಸಿ. ಬೆಲೆ ಮತ್ತಷ್ಟು ಇಳಿಕೆ ಆದರೆ ಇನ್ನಷ್ಟು ಖರೀದಿಸಿ. ಈ ರೀತಿ ವಿಂಗಡಿಸಿ ಖರೀದಿ ಮಾಡಿಕೊಂಡು ಬರುವುದು ಉತ್ತಮ ತಂತ್ರ ಎಂಬ ಸಲಹೆ ನೀಡಿದ್ದಾರೆ.

ಗೋಲ್ಡ್ ಲೋನ್ ಪಡೆದವರಿಗೆ ಸಂಕಷ್ಟ ಯಾಕೆ?

ಚಿನ್ನದ ಬೆಲೆ ದಿಢೀರ್ ಕುಸಿದಿರುವುದರಿಂದ ಗೋಲ್ಡ್ ಲೋನ್ ಪಡೆದವರಿಗೆ 'ಲೋನ್ ಟು ವ್ಯಾಲ್ಯೂ (LTV) ರೇಶಿಯೋ' ಸಮಸ್ಯೆ ಆಗುವ ಸಾಧ್ಯತೆ ಇದೆ. ನೀವು ಎಸ್‌ಬಿಐ, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಂತಹ ಬ್ಯಾಂಕ್‌ಗಳು ಅಥವಾ ಮುತ್ತೂಟ್, ಮಣಪ್ಪುರಂನಂತಹ ಎನ್‌ಬಿಎಫ್‌ಸಿ ಕಂಪನಿಗಳಿಗೆ ಚಿನ್ನ ಅಡವಿಡಲು ಹೋದಾಗ.. ಮೊದಲು ಚಿನ್ನದಲ್ಲಿರುವ ಕಲ್ಲು ಮತ್ತು ಇತರ ವಸ್ತುಗಳನ್ನು ತೆಗೆದು ನಿವ್ವಳ ತೂಕ ಲೆಕ್ಕ ಹಾಕುತ್ತಾರೆ. ಅಂದಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಚಿನ್ನದ ಮೌಲ್ಯ ನಿರ್ಧರಿಸಿ ಆರ್‌ಬಿಐ (RBI) ನಿಯಮಗಳ ಪ್ರಕಾರ ಸಾಲ ನೀಡುತ್ತಾರೆ.

  • 2.5 ಲಕ್ಷ ರೂ. ಒಳಗಿನ ಸಾಲಕ್ಕೆ ಚಿನ್ನದ ಮೌಲ್ಯದ ಗರಿಷ್ಠ 85% ವರೆಗೆ ಸಾಲ.
  • 2.5 ಲಕ್ಷದಿಂದ 5 ಲಕ್ಷ ರೂ. ವರೆಗಿನ ಸಾಲಕ್ಕೆ: ಗರಿಷ್ಠ 80% ವರೆಗೆ ಸಾಲ
  • 5 ಲಕ್ಷ ರೂ. ಗಿಂತ ಹೆಚ್ಚಿನ ಸಾಲಕ್ಕೆ ಗರಿಷ್ಠ 75% ವರೆಗೆ ಸಾಲ ನೀಡಲು ಮಿತಿ ಇರುತ್ತದೆ.

ಬೆಲೆ ಇಳಿಕೆ ಆದಾಗ ಏನಾಗುತ್ತದೆ?

ನೀವು ಅಡವಿಟ್ಟ ಚಿನ್ನದ ಮೌಲ್ಯ 1 ಲಕ್ಷ ರೂಪಾಯಿ ಎಂದುಕೊಳ್ಳಿ. ಆರ್‌ಬಿಐ ನಿಯಮದಂತೆ ನಿಮಗೆ 85% ಮಿತಿಯಲ್ಲಿ ಗರಿಷ್ಠ 85,000 ರೂಪಾಯಿ ಸಾಲ ಸಿಕ್ಕಿರುತ್ತದೆ. ಈಗ ಚಿನ್ನದ ದರ ದಿಢೀರನೆ 15% ರಷ್ಟು ಕುಸಿಯಿತು ಎಂದಿಟ್ಟುಕೊಳ್ಳಿ. ಆಗ ನೀವು ಅಡವಿಟ್ಟ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬೆಲೆ 85,000 ರೂಪಾಯಿಗೆ ಇಳಿಯುತ್ತದೆ. ನೀವು ಪಡೆದ ಸಾಲವೂ 85,000 ರೂಪಾಯಿ, ಚಿನ್ನದ ಮೌಲ್ಯವೂ 85,000 ರೂಪಾಯಿ ಆದಾಗ ನಿಮ್ಮ LTV ರೇಶಿಯೋ 100% ಆಗಿಬಿಡುತ್ತದೆ! ಇದಕ್ಕೆ ಬಾಕಿ ಇರುವ ಬಡ್ಡಿಯೂ ಸೇರಿದರೆ ಅದು 100% ದಾಟುತ್ತದೆ. ಇದರಿಂದ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ನಷ್ಟವಾಗುತ್ತದೆ.

ಪರಿಹಾರ ಏನು?

  • ಒಂದಷ್ಟು ಸಾಲದ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ LTV ರೇಶಿಯೋವನ್ನು ಮತ್ತೆ ನಿಗದಿತ ಮಿತಿಯೊಳಗೆ ತರುವುದು.
  • ಈಗಾಗಲೇ ಅಡವಿಟ್ಟಿರುವ ಚಿನ್ನದ ಜೊತೆಗೆ ಹೆಚ್ಚುವರಿಯಾಗಿ ಉಂಗುರ ಅಥವಾ ಮತ್ತೊಂದು ಆಭರಣವನ್ನು ಭದ್ರತೆಯಾಗಿ ನೀಡಿ LTV ರೇಶಿಯೋ ಕಡಿಮೆ ಮಾಡಿಕೊಳ್ಳುವುದು.

ಚಿನ್ನದ ಬೆಲೆ ಕುಸಿದ ತಕ್ಷಣ ಬ್ಯಾಂಕ್‌ಗಳು ನಮ್ಮ ಚಿನ್ನವನ್ನು ಮಾರಾಟ ಮಾಡಿಬಿಡುತ್ತವೆ ಎಂದು ಸಾಲಗಾರರು ಗಾಬರಿಯಾಗುವ ಅಗತ್ಯವಿಲ್ಲ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿ ಅಷ್ಟು ಸುಲಭವಾಗಿ ಚಿನ್ನವನ್ನು ಹರಾಜು ಹಾಕುವಂತಿಲ್ಲ.

ಮೊದಲಿಗೆ ಅವರು ಗ್ರಾಹಕರಿಗೆ ಎಸ್‌ಎಂಎಸ್ (SMS), ವಾಟ್ಸಾಪ್ (WhatsApp), ಇಮೇಲ್ ಅಥವಾ ಪತ್ರದ ಮೂಲಕ ನೋಟಿಸ್ ನೀಡಲೇಬೇಕು. ಹೆಚ್ಚುವರಿ ಚಿನ್ನ ನೀಡಿ ಅಥವಾ ಸಾಲ ಮರುಪಾವತಿ ಮಾಡಿ ಎಂದು ಸೂಚನೆ ನೀಡಿದ ನಂತರ ಗ್ರಾಹಕರು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಾತ್ರ ಮುಂದಿನ ಹಂತದಲ್ಲಿ ಚಿನ್ನವನ್ನು ಹರಾಜು ಹಾಕುವ ಸಾಧ್ಯತೆಗಳಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.