ಶಾಸಕನ ಭಾಷಣಕ್ಕೆ ಅಡ್ಡಿಪಿಡಿಸಿ ಹಲ್ಲೆ ನಡೆಸಿದ ಘಟನೆ ಸಂಬಂಧ ಕೇರಳ ಬಿಜೆಪಿ ರಾಜಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಸತ್ಯ ಹೇಳಿದ ಶಾಸಕನ ಮೇಲೆ ಸಿಪಿಐ(ಎಂ) ಈ ರೀತಿ ವರ್ತಿಸಿದೆ. ಸಹಕಾರಿ ಬ್ಯಾಂಕ್ನಲ್ಲಿ ಬರೋಬ್ಬರಿ 1582 ಕೋಟಿ ಅಕ್ರಮ ನಡೆದಿದೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
ತಿರುವನಂತಪುರಂ (ನ.23) ಭ್ರಷ್ಟ ರಾಜಕಾರಣಿಗಳಿಂದ ಸಹಕಾರಿ ಬ್ಯಾಂಕ್ಗಳಲ್ಲಿ ನಡೆಯುತ್ತಿರುವ ಅಕ್ರಮ ಕುರಿತು ಮಾತನಾಡಿದ ಕೇರಳದ ಶಾಸಕ ವಿ.ಕುಂಞಿಕೃಷ್ಣನ್ ಭಾಷಣಕೆ ಅಡ್ಡಿಪಡಿಸಿದ್ದು ಮಾತ್ರವಲ್ಲ ಅವರ ಆಪ್ತ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಘಟನೆ ಖಂಡಿಸಿದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಿಪಿಐ(ಎಂ) ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ವಿರುದ್ದ ಮಾತನಾಡುವವರ ವಿರುದ್ದ ಬೆದರಿಸಲಾಗುತ್ತಿದೆ. ಬೆದರಿಕೆಗೆ ಜಗ್ಗದಿದ್ದರೆ ನೇರವಾಗಿ ಹಲ್ಲೆ ನಡೆಸಲಾಗುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಾಜೀವ್ ಚಂದ್ರಶೇಖರ್, ಕೇರಳ ರಾಜಕಾರಣದಲ್ಲಿ ಹೆಚ್ಚುತಿರುವ ಅಪರಾಧಿಕರಣ ಘಟನೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸೇವೆಗಾಗಿ ಇರುವ ಸಹಕಾರಿ ಬ್ಯಾಂಕ್ಗಳು, ಲೋಕಸೇವಾ ಆಯೋಗ (PSC), ದೇವಸ್ವಂ ಮಂಡಳಿ (ಮುಜರಾಯಿ ಇಲಾಖೆ) ಮತ್ತು ಪೊಲೀಸ್ ಇಲಾಖೆಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಸಿಪಿಎಂ ತನ್ನ ಹಿಡಿತಕ್ಕೆ ತೆಗೆದುಕೊಂಡು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಬರೋಬ್ಬರಿ 1582 ಕೋಟಿ ರೂಪಾಯಿ ಅಕ್ರಮ
ಕೇರಳ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾತಾರ ಕುರಿತು ರಾಜೀವ್ ಚಂದ್ರಶೇಖರ್ ಅಂಕಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ 10 ವರ್ಷದಲ್ಲಿ ಕೇರಳ ಸಹಕಾರಿ ಬ್ಯಾಂಕ್ಕಗಳಲ್ಲಿ ಬರೋಬ್ಬರಿ 1,582 ಕೋಟಿ ರೂಪಾಯಿ ಅಕ್ರಮ ನಡೆದಿದೆ. 252 ಸಂಘಗಳಲ್ಲಿ ಅಕ್ರಮ ಪತ್ತೆಯಾಗಿದೆ 450 ಸಹಕಾರಿ ಸಂಘಟನೆಗಳು ಅಕ್ರಮದಿಂದ ಠೇವಣಿದಾರರ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ. ಮಾರು 550 ಕೋಟಿ ರೂಪಾಯಿ ಮೊತ್ತದ 27 ಸಹಕಾರಿ ಬ್ಯಾಂಕ್ ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ನಡೆಸುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಕರುವನ್ನೂರು (Karuvannur) ಸಹಕಾರಿ ಬ್ಯಾಂಕ್ ಹಗರಣದಲ್ಲಿ ಇ.ಡಿ ಸುಮಾರು ₹128 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ನೇಮಂನಲ್ಲಿ (Nemom) 1,200ಕ್ಕೂ ಹೆಚ್ಚು ಠೇವಣಿದಾರರು ತಮ್ಮ ₹108 ಕೋಟಿ ಹಣ ವಾಪಸ್ ಪಡೆಯಲು ಕಾಯುತ್ತಿದ್ದಾರೆ. ರಾಜಕಾರಾಣಿಗಳ ಭ್ರಷ್ಟಾಚಾರದಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸಂತ್ರಸ್ತ ಠೇವಣಿದಾರರಿಗೆ 'ರಿಸ್ಕ್ ಫಂಡ್' (Risk Fund) ಯೋಜನೆಯಡಿ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದ ಉಳಿದ ಭಾಗಗಳಲ್ಲಿ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಅವು ಭ್ರಷ್ಟ ರಾಜಕಾರಣಿಗಳು ಮತ್ತು ಅವರ ಆಪ್ತರ ಎಟಿಎಂ (ATMs) ಆಗಿ ಬದಲಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಎನ್ಡಿಎ (NDA) ತನ್ನ 'ವಿಕಸಿತ ಕೇರಳಂ ಪ್ರಣಾಳಿಕೆಯಲ್ಲಿ ಸಹಕಾರಿ ಸಂಸ್ಥೆಗಳನ್ನು ಶುದ್ಧೀಕರಿಸುವ ಭರವಸೆ ನೀಡಿದೆ ಎಂದರು.
















