ನಾವು ಸಾಮಾನ್ಯವಾಗಿ 'ಮಿನರಲ್ ವಾಟರ್' ಎಂದು ಕರೆಯುವ ಬಿಸ್ಲೇರಿ, ಕಿನ್ಲೆಯಂತಹ ಬ್ರಾಂಡ್‌ಗಳು ವಾಸ್ತವವಾಗಿ 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್' ಆಗಿವೆ. ನೈಸರ್ಗಿಕ ಮಿನರಲ್ ವಾಟರ್ ಅನ್ನು ಬುಗ್ಗೆಗಳಿಂದ ನೇರವಾಗಿ ಪಡೆಯಲಾಗುತ್ತದೆ ಮತ್ತು ಅದಕ್ಕೆ ಯಾವುದೇ ಸಂಸ್ಕರಣೆ ಇರುವುದಿಲ್ಲ.
ಬೆಂಗಳೂರು (ಡಿ.20): ನಾವು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ನೀರಿನ ಬಾಟಲಿಯನ್ನು ಸಾಮಾನ್ಯವಾಗಿ 'ಮಿನರಲ್ ವಾಟರ್' ಎಂದೇ ಕರೆಯುತ್ತೇವೆ. ಆದರೆ, ಹೆಸರಾಂತ ಫುಡ್ ಇನ್ಫ್ಲುಯೆನ್ಸರ್ ರೇವಂತ್ ಹಿಮತ್ಸಿಂಗ್ಕಾ (Food Pharmer) ಇತ್ತೀಚೆಗೆ ಹಂಚಿಕೊಂಡಿರುವ ಮಾಹಿತಿ ನಮ್ಮ ಈ ನಂಬಿಕೆಯನ್ನು ಸುಳ್ಳು ಮಾಡಿದೆ. ನಾವು ದಿನನಿತ್ಯ ಕುಡಿಯುವ ಬಿಸ್ಲೇರಿ, ಕಿನ್ಲೆ ಅಥವಾ ಅಕ್ವಾಫಿನಾ ನಿಜವಾದ ಮಿನರಲ್ ವಾಟರ್ ಅಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಂದರೇನು? (Packaged Drinking Water):
ನಾವು ಎಲ್ಲೇ ಹೋದರೂ ಸಾಮಾನ್ಯವಾಗಿ ಕುಡಿಯಲು ಬಳಸುವಂತಹ ಬಿಸ್ಲೇರಿ, ಕಿನ್ಲಿ, ಅಕ್ವಾಫಿನಾ, ಕ್ಲಿಯರ್ ಮತ್ತು ರೈಲ್ ನೀರ್ ಇವೆಲ್ಲವೂ 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್' ವರ್ಗಕ್ಕೆ ಸೇರುತ್ತವೆ. ಇವುಗಳ ಮೂಲ ಸಾಮಾನ್ಯವಾಗಿ ಬೋರ್‌ವೆಲ್, ಅಂತರ್ಜಲ ಅಥವಾ ಮುನ್ಸಿಪಲ್ ಪೂರೈಕೆಯ ನೀರಾಗಿರುತ್ತದೆ. ಈ ನೀರನ್ನು ಆರ್‌ಒ (RO), ಯುವಿ (UV) ಅಥವಾ ಓಜೋನೈಸೇಶನ್ ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಲಾಗುತ್ತದೆ. ಶುದ್ಧೀಕರಣದ ನಂತರ ಇದಕ್ಕೆ ಖನಿಜಗಳನ್ನು (Minerals) ಕೃತಕವಾಗಿ ಸೇರಿಸಲಾಗುತ್ತದೆ.
ನೈಸರ್ಗಿಕ ಮಿನರಲ್ ವಾಟರ್ ಅಂದರೇನು? (Natural Mineral Water):
ಇನ್ನು ಕೆಲವೆಡೆ ವಿಶೇಷವಾಗಿ ಬಳಸುವಂತಹ ವೇದಿಕಾ, ಎವಿಯನ್, ವೋಸ್, ಹಿಮಾಲಯನ್ ಮತ್ತು ಆವಾ (Aãva) ಇವು ನಿಜವಾದ ನೈಸರ್ಗಿಕ ಮಿನರಲ್ ವಾಟರ್ ಬ್ರಾಂಡ್‌ಗಳಾಗಿವೆ. ಈ ನೀರಿನ ಮೂಲ ನೈಸರ್ಗಿಕ ಬುಗ್ಗೆಗಳು ಅಥವಾ ಭೂಗತ ಜಲಚರಗಳಾಗಿರುತ್ತವೆ. ಮುಖ್ಯವಾದ ಸಂಗತಿಯೆಂದರೆ, ಈ ನೀರಿಗೆ ಯಾವುದೇ ರಾಸಾಯನಿಕ ಸಂಸ್ಕರಣೆ ಮಾಡಲಾಗುವುದಿಲ್ಲ. ಇದರಲ್ಲಿ ಖನಿಜಗಳು ನೈಸರ್ಗಿಕವಾಗಿಯೇ ಇರುತ್ತವೆ.
ಆರೋಗ್ಯಕ್ಕೆ ಯಾವುದು ಉತ್ತಮ?
ಆರೋಗ್ಯದ ದೃಷ್ಟಿಯಿಂದ ಈ ಎರಡೂ ರೀತಿಯ ನೀರುಗಳು ಕುಡಿಯಲು ಸುರಕ್ಷಿತವಾಗಿವೆ. ಆದರೆ, ನೈಸರ್ಗಿಕ ಖನಿಜಗಳಿರುವ ನೀರು ಹೆಚ್ಚು ಶುದ್ಧವೆಂದು ಪರಿಗಣಿಸಲಾಗುತ್ತದೆ. ರೇವಂತ್ ಹಿಮತ್ಸಿಂಗ್ಕಾ ಅವರ ಪ್ರಕಾರ, ಇಲ್ಲಿ ನೀರಿನ ಗುಣಮಟ್ಟಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಈ ಪ್ಲಾಸ್ಟಿಕ್ ಬಾಟಲಿಗಳಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯ. ಇನ್ನು ಪ್ಲಾಸ್ಟಿಕ್ ಬಾಟಲಿಗಳಲ್ಇ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಂಶವನ್ನು ತಿಳಿಸಿದ್ದಾರೆ.
ಈಗಾಗಲೇ 'ಲೇಬಲ್ ಪಢೇಗಾ ಇಂಡಿಯಾ' ಅಭಿಯಾನದ ಮೂಲಕ ಆಹಾರ ಪದಾರ್ಥಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅವರು, ಇನ್ಮುಂದೆ ನೀರಿನ ಬಾಟಲಿಯ ಮೇಲಿರುವ ಲೇಬಲ್ ಅನ್ನೂ ಓದಿ ಅರಿತುಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಮುಂದಿನ ಬಾರಿ ನೀರಿನ ಬಾಟಲಿ ಖರೀದಿಸುವಾಗ ಅದು 'ಮಿನರಲ್ ವಾಟರ್' ಅಥವಾ 'ಪ್ಯಾಕೇಜ್ಡ್ ವಾಟರ್' ಎಂಬುದನ್ನು ಒಮ್ಮೆ ಗಮನಿಸಿ.

