ಮೂವರು ಮಕ್ಕಳು ಹಾಗೂ ಪೋಷಕರು ರಾತ್ರಿ ನೂಡಲ್ಸ್ ತಿಂದಿದ್ದಾರೆ. ಚಹಾ ಕುಡಿದಿದ್ದಾರೆ. ಬಳಿಕ ಎಲ್ಲರೂ ಮಲಗಿದ್ದಾರೆ. ಆದರೆ ಬೆಳಗ್ಗೆ ಯಾರೂ ಎದ್ದಿಲ್ಲ. ಐವರು ದುರಂತ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.

ನವದೆಹಲಿ (ಅ.17) ದೇಶ ನವರಾತ್ರಿ ಹಬ್ಬದ ಸಂಭ್ರಮದಲ್ಲಿದೆ. ಶಾಲಾ ಮಕ್ಕಳಿಗೆ ದಸರಾ ರಜೆ. ಹೀಗಾಗಿ ಪೋಷಕರು, ಮಕ್ಕಳು ಸೇರಿ ಕುಟುಂಬ ಜೊತೆ ಕಾಲ ಕಳೆಯುತ್ತಿರುವ ಘಟನೆಗಳೇ ಹೆಚ್ಚು. ಹೀಗೆ ಗ್ರೇಟರ್ ನೋಯ್ಡಾದ ಕುಟುಂಬವೊಂದು ರಾತ್ರಿ ನೂಡಲ್ಸ್ ತಿಂದಿದ್ದಾರೆ. ಬಳಿಕ ಚಹಾ ಕುಡಿಯುತ್ತಾ ಒಂದಷ್ಟು ಹೊತ್ತು ಹರಟೆ ಹೊಡೆದು ಮಲಗಿದ್ದಾರೆ. ಆದರೆ ಇಂದು (ಅ.17) ಬೆಳಗ್ಗೆ ಮೂವರು ಮಕ್ಕಳು ಹಾಗೂ ಪೋಷಕರು ಎದ್ದಿಲ್ಲ. ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಫುಡ್ ಪಾಯ್ಸ್ ಸಾಧ್ಯತೆ ಇದೆ ಎಂದಿದ್ದಾರೆ.

ಸುಂದರ ಕುಟುಂಬಕ್ಕೆ ಶಾಪವಾಯ್ತಾ ನೂಡಲ್ಸ್?

ಕುಟುಂಬದ ಐವರು ಸದಸ್ಯರು ರಾತ್ರಿ ನೂಡಲ್ಸ್ ತಿಂದಿದ್ದಾರೆ. ಇದೇ ನೋಡಲ್ಸ್ ಫುಡ್ ಪಾಯ್ಸನ್ ಮೂಲಕ ಕುಟುಂಬಕ್ಕೆ ಸಮಸ್ಯೆ ತಂದಿಟ್ಟಿತಾ? ಪ್ರಾಥಮಿಕ ಮಾಹಿತಿಗಳ ಪ್ರಕಾರ ಫುಡ್ ಪಾಯ್ಸ್ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ. ಮೃತರನ್ನು 37 ವರ್ಷದ ಮಹೇಶ್, 35 ವರ್ಷದ ಪತ್ನಿ ಲಲಿತಾ, ಮಕ್ಕಳಾದ 11 ವರ್ಷದ ಮಗ ಲದ್ದು, 7 ವರ್ಷದ ಮಗಳು ಮಿಶ್ತಿ, 3 ವರ್ಷದ ಕಂದ ಎಂದು ಗುರುತಿಸಲಾಗಿದೆ.

ಮಹೇಶ್ ತಾಯಿ ಹಾಗೂ ನೆರೆ ಮನೆಯವರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಮಹೇಶ್ ಹಾಗೂ ಕುಟುಂಬ ನೋಡಲ್ಸ್ ತಿಂದಿರುವುದಾಗಿ ತಾಯಿ ಬಳಿ ಫೋನ್ ಮೂಲಕ ಹೇಳಿಕೊಂಡಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ತನಿಖೆಂ ತೀವ್ರಗೊಳಿಸಿದ್ದಾರೆ. ಫುಡ್ ಸೇಫ್ಟಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಫೊರೆನ್ಸಿಕ್ ತಂಡ ಆಹಾರ ಮಾದರಿ ಸೇರಿದಂತೆ ಇತರ ಮಾದರಿಗಳನ್ನು ಕಲೆ ಹಾಕಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇಂದು ಬೆಳಗ್ಗೆ ನೆರೆ ಮನೆಯವರಿಗೆ ಅನುಮಾನ ಕಾಡಿದೆ. ಪ್ರತಿ ದಿನ ಬೆಳಗ್ಗೆ ಇಡೀ ಕುಟುಂಬ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಆದರೆ ಇಂದು ಯಾರ ಸುಳಿವು ಇರಲಿಲ್ಲ. ಎಲ್ಲೋ ಹೋಗುವಾಗಲು ನೆರೆಮನೆಯವರಿಗೆ ಮಾಹಿತಿ ನೀಡುತ್ತಿದ್ದರು. ಈ ಕುರಿತು ಯಾವ ಸುಳಿವು ಇರಲಿಲ್ಲ. ನಿನ್ನೆ ರಾತ್ರಿ ಮಹೇಶ್ ಹಾಗೂ ಕುಟುಂಬಸ್ಥರನ್ನು ನೋಡಿದ್ದಾರೆ. ಹೀಗಾಗಿ ನೆರೆ ಮನೆಯವರ ಅನುಮಾನ ಹೆಚ್ಚಾಗಿದೆ. ಕರೆ ಮಾಡಿದಾಗ ಮನೆಯೊಳಗೆ ಫೋನ್ ರಿಂಗ್ ಆಗುತ್ತಿದೆ. ಆದರೆ ಯಾರು ರಿಸೀವ್ ಮಾಡುತ್ತಿಲ್ಲ. ಹೀಗಾಗಿ ಸ್ಥಳೀಯರು ಬಾಗಿಲು ಒಡೆದು ಮನೆ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಐವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯಾರ ದೇಹದಲ್ಲೂ ಉಸಿರು ಇರಲಿಲ್ಲ, ಎದೆಬಡಿತವೂ ಇರಲಿಲ್ಲ. ಹೀಗಾಗಿ ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.

ಮಹೇಶ್ ಹಾಗುೂ ಕುಟುಂಬ ಶುಕ್ರವಾರ ರಾತ್ರಿ ನೂಡಲ್ಸ್ ತಿಂದಿದ್ದಾರೆ. ಮಲಗುವ ಮುನ್ನ ಚಹಾ ಕುಡಿದಿದ್ದಾರೆ. ಫುಡ್ ಪಾಯ್ಸನ್‌ನಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಆದರೆ ಫುಡ್ ಪಾಯ್ಸನ್ ಅಥವಾ ವಿಷಕಾರಿ ಅಂಶ ದೇಹ ಸೇರಿದ್ದು ಹೇಗೆ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.