ದೇವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಲಾರಿಗೆ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಮಾಲೂರಿನ ಬಿಜೆಪಿ ನಾಯಕ ಹಾಗೂ ಉದ್ಯಮಿ ಶಿವಕುಮಾರ್ ಎಂ. ಮೃತಪಟ್ಟಿದ್ದಾರೆ.
ಬೆಂಗಳೂರು/ದೇವನಹಳ್ಳಿ (ಅ.14): ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-648 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರೇಂಜ್ ರೋವರ್ ಕಾರು ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಕೋಲಾರ ಜಿಲ್ಲೆ ಮಾಲೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ನಾಯಕ ಶಿವಕುಮಾರ್ ಎಂ. (36) ಅವರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ವಿನೋದ್ ಕುಮಾರ್, ಪ್ರದೀಪ್, ಚಂದನ್ ಹಾಗೂ ಚಾಲಕ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದಕರಿ ನಾಯಕ ಜಯಂತಿ ಕಾರ್ಯಕ್ರಮದಿಂದ ವಾಪಸಾಗುವಾಗ ದುರಂತ
ಮೃತ ಶಿವಕುಮಾರ್ ಎಂ. ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮದನಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಮಾಲೂರು ನಗರದಲ್ಲಿ 'ಐಶ್ವರ್ಯ ಡೆವಲಪರ್ಸ್' (Aishwarya Developers) ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಸಕ್ರಿಯ ಬಿಜೆಪಿ ನಾಯಕರಾಗಿದ್ದ ಶಿವಕುಮಾರ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ 'ಮೊಳಕಾಲ್ಮೂರು' ಕ್ಷೇತ್ರದಿಂದ ಸ್ಪರ್ಧಿಸಲು ಭಾರಿ ಸಿದ್ಧತೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ದೇವನಹಳ್ಳಿ ಬಳಿಯ ರಾಣಿ ಕ್ರಾಸ್ ಫ್ಲೈಓವರ್ (Rani Cross Flyover) ಬಳಿ ರಾತ್ರಿ 7.30 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಮೃತ ಶಿವಕುಮಾರ್ ಅವರು ತಮ್ಮ ನಾಲ್ವರು ಸ್ನೇಹಿತರು ಹಾಗೂ ಚಾಲಕನೊಂದಿಗೆ ಚಿತ್ರದುರ್ಗದಲ್ಲಿ ನಡೆದ ವೈಭವದ 'ವೀರ ಮದಕರಿ ನಾಯಕ ಜಯಂತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಲೂರಿಗೆ ಹಿಂತಿರುಗುತ್ತಿದ್ದರು.
ಸೂಚನೆ ನೀಡದೆ ನಿಲ್ಲಿಸಿದ್ದ ಸಿಲಿಂಡರ್ ಲಾರಿಗೆ ಡಿಕ್ಕಿ!
ಅಪಘಾತದಲ್ಲಿ ಗಾಯಗೊಂಡ ವಿನೋದ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಸಾಯಂಕಾಲ 4.30 ಕ್ಕೆ ಚಿತ್ರದುರ್ಗದಿಂದ ಹೊರಟು ಮಾಲೂರಿನತ್ತ ಪ್ರಯಾಣಿಸುತ್ತಿದ್ದರು. ದೇವನಹಳ್ಳಿ ತಲುಪುತ್ತಿದ್ದಂತೆ ರೇಂಜ್ ರೋವರ್ ಕಾರಿನ ಚಾಲಕ ಮುಂದಿನ ವಾಹನವನ್ನು ಓವರ್ಟೇಕ್ (Overtake) ಮಾಡಲು ಯತ್ನಿಸಿದಾಗ ಕಾರು ಆತನ ನಿಯಂತ್ರಣ ತಪ್ಪಿದೆ.
ಈ ವೇಳೆ ರಾಷ್ಟ್ರೀಯ ಹೆದ್ದಾರಿಯ ಮೂರನೇ ಪಥದಲ್ಲಿ (Third Lane) ಯಾವುದೇ ಮುನ್ನೆಚ್ಚರಿಕಾ ಪಾರ್ಕಿಂಗ್ ಸೂಚನೆಗಳು ಅಥವಾ ಬ್ಲಿಂಕರ್ ಲೈಟ್ಗಳನ್ನು ಹಾಕದೆ ಅಪಾಯಕಾರಿಯಾಗಿ ನಿಲ್ಲಿಸಲಾಗಿದ್ದ 'AP39WC2560' ನೋಂದಣಿ ಸಂಖ್ಯೆಯ ಎಲ್ಪಿಜಿ ಸಿಲಿಂಡರ್ ಲಾರಿಯ ಬಲ ಹಿಂಭಾಗಕ್ಕೆ ರೇಂಜ್ ರೋವರ್ ಕಾರು ಭೀಕರವಾಗಿ ಡಿಕ್ಕಿಯಾಗಿದೆ.
ಮುಂಭಾಗದ ಸೀಟಿನಲ್ಲಿದ್ದ ಶಿವಕುಮಾರ್
ಡಿಕ್ಕಿಯ ಭರಕ್ಕೆ ರೇಂಜ್ ರೋವರ್ ಕಾರು ಸಂಪೂರ್ಣವಾಗಿ ಲಾರಿಯ ಹಿಂಭಾಗಕ್ಕೆ ನುಜ್ಜುಗುಜ್ಜಾಗಿ ಸಿಲುಕಿಕೊಂಡಿದೆ. ಕಾರಿನ ಮುಂಭಾಗದ ಪ್ಯಾಸೆಂಜರ್ ಸೀಟಿನಲ್ಲಿ (Front Passenger Seat) ಕುಳಿತಿದ್ದ ಶಿವಕುಮಾರ್ ಅವರಿಗೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರಿಂದ ತಕ್ಷಣವೇ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಎಲ್ಪಿಜಿ ಸಿಲಿಂಡರ್ ಲಾರಿಯ ಚಾಲಕ ಸ್ಥಳದಲ್ಲೇ ಲಾರಿಯನ್ನು ಬಿಟ್ಟು ಕಾಲ್ಕಿತ್ತಿದ್ದಾನೆ. ಈ ಕುರಿತು ವಿನೋದ್ ಕುಮಾರ್ ನೀಡಿದ ದೂರಿನ ಅನ್ವಯ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ (Devanahalli Traffic Police) ಲಾರಿ ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


