ಉತ್ತರ ಪ್ರದೇಶದ ಲಖನೌದಲ್ಲಿ, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಉಚಿತವಾಗಿ ಟೀ ಕುಡಿದು, ನಂತರ ಅಲ್ಲಿದ್ದ ಪೇದೆಗೆ ಸೆಲ್ಯೂಟ್ ಮಾಡಲು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೇದೆಗಳು ಆತನನ್ನು ವಿಚಾರಿಸಿದಾಗ, ಆತ ನಕಲಿ ಅಧಿಕಾರಿ ಎಂದು ತಿಳಿದುಬಂದಿದ್ದು, ಬಂಧಿಸಲಾಗಿದೆ.

ಕೆಲವು ಪೊಲೀಸರು ಬೀದಿಬದಿಗಳಲ್ಲಿ ಇರುವ ವ್ಯಾಪಾರಿಗಳಿಂದ ಫ್ರೀ ಆಗಿ ಕುಡಿಯುವುದು, ತಿನ್ನುವುದು ಹೊಸ ವಿಷಯವೇನಲ್ಲ. ಬೀದಿಗಳಲ್ಲಿ ವ್ಯಾಪಾರಿಗಳು ನೆಮ್ಮದಿಯಾಗಿ ಬದುಕಬೇಕು ಎಂದರೆ ಅಲ್ಲಿಗೆ ಬರುವ ಪೊಲೀಸರಿಗೆ ಒಂದಿಷ್ಟು 'ಮಾಮೂಲಿ' ನೀಡಲೇಬೇಕು. ಇದರ ಬಗ್ಗೆ ಇಂಥ ವ್ಯಾಪಾರಿಗಳನ್ನು ಮಾತನಾಡಿಸಿದಾಗ ಬರುವ ಮಾತುಗಳು ಕೇಳಿದ್ರೆ ಪರಿಸ್ಥಿತಿ ಯಾವ ಮಟ್ಟಿಗೆ ಇದೆ ಎನ್ನುವುದು ತಿಳಿಯುತ್ತದೆ. ಆದ್ದರಿಂದ ಬರುವವರು ನಕಲಿಯೋ, ಅಸಲಿಯೋ ತಿಳಿಯುವುದು ಕೂಡ ಭಯವಾಗಿ 10-20 ರೂಪಾಯಿ ಕೊಟ್ಟಾದರೂ ಸಮಾಧಾನ ಪಡಿಸುವ ಪರಿಸ್ಥಿತಿ ನಮ್ಮ ಈ ಸಮಾಜದಲ್ಲಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಟ್ಟಿ ತಿಂದು ಹೋದ

ಅದೇ ರೀತಿ ಉತ್ತರ ಪ್ರದೇಶದ ಲಖನೌದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಅಲ್ಲೊಂದು ತಾನು ಐಪಿಎಸ್ ಅಧಿಕಾರಿ ಎಂದು ಬಂದು ಫ್ರೀ ಟೀ ಕುಡಿದ, ಫ್ರೀ ಬನ್​ ಕೇಳಿದ. ಪೊಲೀಸರ ಈ ನಡವಳಿಕೆ ಬಗ್ಗೆ ಅರಿವಿದ್ದ ಅಂಗಡಿಯವ ಪಾಪ ಕಮ್​ ಕಿಮ್​ ಎನ್ನದೇ ಕೊಟ್ಟುಬಿಟ್ಟ. ಆದರೆ ಕೊನೆಗೆ ಆಗಿದ್ದೇ ಬೇರೆ. ಹೀಗೆ ಉಚಿತವಾಗಿ ಏನೋ ತಿಂದುಂಡು ಹೋದವ ಸುಮ್ಮನೇ ಹೋಗಿದ್ದರೆ ಇದು ಪೊಲೀಸರ ದಿನನಿತ್ಯದ ಕಾರ್ಯ ಎಂದು ಎಲ್ಲರೂ ಸುಮ್ಮನಾಗುತ್ತಿದ್ದರು. ಬಿಟ್ಟಿಯಾಗಿ ತಿಂದು ಹೋಗುವ ಬದಲು ಈ ಪೊಲೀಸಪ್ಪ, ಅಂತೂ ಬಿಟ್ಟಿ ತಿಂದು ಸಕ್ಸಸ್​ ಆದೆ ಎಂದುಕೊಂಡು ಬೀಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ ಎಂದು ಅಲ್ಲಿ ಇದ್ದ ಪೊಲೀಸ್​ ಪೇದೆ ಸೆಲ್ಯೂಟ್ ಮಾಡಲಿಲ್ಲ ಎಂದು ಕೋಪಗೊಂಡು ಸೆಲ್ಯೂಟ್​ ಹೊಡೆಯುವಂತೆ ಹೇಳಿದ್ದಾನೆ. ಪದೇ ಪದೇ ಎಲ್ಲರೂ ಸೆಲ್ಯೂಟ್​ ಹೊಡೆಯುವಂತೆ ಕೇಳಿದ್ದಾನೆ.

ಕಾನ್​ಸ್ಟೆಬಲ್​ರಿಂದ ವಿಚಾರಣೆ

ಸ್ಟಾಲ್ ಮಾಲೀಕರಿಗೆ ಯಾಕೋ ಇದು ಸ್ವಲ್ಪ ಅತಿಯಾಯ್ತು ಎನ್ನಿಸಿದೆ. ಮಾಮೂಲಾಗಿ ಬರುವ ಪೊಲೀಸರು ಬಿಟ್ಟಿ ತಿಂದುಂಡು ಹೋಗುವುದನ್ನು ದಿನನಿತ್ಯವೂ ನೋಡಿದ್ದ ಆತನಿಗೆ ಇದ್ಯಾಕೆ ವಿಚಿತ್ರ ಎನ್ನಿಸಿದೆ. ಆತ ಅಲ್ಲಿಯೇ ಇದ್ದ ಪೊಲೀಸರಿಗೆ ಈ ಬಗ್ಗೆ ಪ್ರಶ್ನಿಸಿದ್ದಾನೆ. ಕೊನೆಗೆ ಕಾನ್​ಸ್ಟೆಬಲ್​ಗಳಿಗೂ ಡೌಟ್​ ಬರಲು ಶುರುವಾಗಿದೆ. ಏಕೆಂದರೆ, ಯೂನಿಫಾರ್ಮ್​ನಲ್ಲಿ ಇಲ್ಲದಾಗ ಸೆಲ್ಯೂಟ್​ ನೀಡಲಾಗುವುದಿಲ್ಲ. ಆದ್ದರಿಂದ ಈತ ನಕಲಿ ಎನ್ನುವುದು ತಿಳಿದಿದೆ. ನಿಜವಾಗಿಯೂ ಪೊಲೀಸ್ ಅಧಿಕಾರಿಯಾಗಿದ್ದರೆ, ಮೊದಲು ತಮ್ಮ ಸಮವಸ್ತ್ರವನ್ನು ಧರಿಸಿ ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಹೇಳಿದರು.

"ಸರಿಯಾದ ಪೊಲೀಸ್ ಉಡುಪಿನಲ್ಲಿ ಬನ್ನಿ, ನಿಮ್ಮ ಗುರುತಿನ ಚೀಟಿಯನ್ನು ನನಗೆ ತೋರಿಸಿ, ನಂತರ ನಾನು ನಿಮಗೆ ಸೆಲ್ಯೂಟ್ ಮಾಡುತ್ತೇನೆ. ಅದಕ್ಕಿಂತ ಮೊದಲು ಅಲ್ಲ," ಕಾನ್‌ಸ್ಟೆಬಲ್ ಹೇಳಿದಾಗ, ಆತ ತಾನು ನಿಯೋಜನೆಗೊಂಡಿರುವ ಐಪಿಎಸ್​ ಅಧಿಕಾರಿ ಎಂದಿದ್ದಾನೆ. ಐಡಿ ಕಾರ್ಡ್​ ಯಾಕೆ ತೋರಿಸಬೇಕು ಎಂದು ದರ್ಪ ಮಾಡಿದಾಗ, ಕಾನ್​ಸ್ಟೆಬಲ್​ಗಳು ಈ ಬಗ್ಗೆ ಉನ್ನತ ಅಧಿಕಾರಿಗಳಲ್ಲಿ ದೂರಿದ್ದಾರೆ. ಅವರು ಅಲ್ಲಿಗೆ ಬಂದು ನಕಲಿ ಐಪಿಎಸ್​ ಅಧಿಕಾರಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.