ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರು 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡವನ್ನು ಪ್ರಕಟಿಸಿದ್ದಾರೆ. 2029ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಚಿಸಲಾದ ಈ ತಂಡದಲ್ಲಿ 51 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ತೇಜಸ್ವಿ ಸೂರ್ಯ, ಅಮಿತ್ ಮಾಳವೀಯರಂತಹವರನ್ನು ಕೈಬಿಟ್ಟು ಸ್ಮೃತಿ ಇರಾನಿ, ರಾಮ್‌ಮಾಧವ್‌ಗೆ ಮಹತ್ವದ ಸ್ಥಾನ ನೀಡಲಾಗಿದೆ.

ನವದೆಹಲಿ: 2029ರ ಲೋಕಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಭಾರತೀಯ ಜನತಾ ಪಕ್ಷ, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರ ಹೊಸ ತಂಡವನ್ನು ಸೋಮವಾರ ಅನಾವರಣ ಮಾಡಿದೆ. ಯುವಕರು, ಮಹಿಳೆಯರಿಗೆ ಪ್ರಾಧಾನ್ಯ ನೀಡಿರುವ ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡವನ್ನು ನಿತಿನ್‌ ಪ್ರಕಟಿಸಿದ್ದಾರೆ.

ಹೊಸ ಪಟ್ಟಿಯಲ್ಲಿ ಒಟ್ಟು 65 ಪದಾಧಿಕಾರಿಗಳಿದ್ದು, ಅದರಲ್ಲಿ 51 ಮಂದಿ ಹೊಸಬರಾಗಿದ್ದಾರೆ. ಅನುಭವ ಮತ್ತು ಯುವ ನಾಯಕತ್ವದ ನಡುವೆ ಸಮತೋಲನ ಕಾಯ್ದುಕೊಳ್ಳಲಾಗಿದೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಸೇರಿದಂತೆ ಕೆಲ ಹಿರಿಯ ನಾಯಕರನ್ನು 13 ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಮಾಜಿ ಸಚಿವೆ ಸ್ಮೃತಿ ಇರಾನಿ, ಆರ್‌ಎಸ್‌ಎಸ್‌ ನಾಯಕ ರಾಮ್‌ಮಾಧವ್‌, ಮಾಜಿ ಸಿಎಂ ಬಿಪ್ಲಬ್‌ ಕುಮಾರ್‌ ದೇಬ್‌ ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ. ಐಟಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಅಮಿತ್‌ ಮಾಳವೀಯ, ಕರ್ನಾಟಕದ ಉಸ್ತುವಾರಿಯಾಗಿದ್ದ ರಾಧಾಮೋಹನ್‌ ದಾಸ್‌ ಅಗರ್ವಾಲ್‌ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಉಳಿದಂತೆ ತಂಡದಲ್ಲಿ 10 ಮಹಿಳೆಯರು, 6 ಅಲ್ಪಸಂಖ್ಯಾತರಿಗೆ ಸ್ಥಾನ ನೀಡಲಾಗಿದೆ.

ಕರ್ನಾಟಕದ ಬಿ.ಎಲ್‌.ಸಂತೋಷ್‌ ಮತ್ತು ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಹೊಸ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಕನ್ನಡಿಗರಾಗಿದ್ದಾರೆ.

ಸಂತೋಷ್‌ ಮುಂದುವರಿಕೆ:

ಪಕ್ಷದ ಅತ್ಯಂತ ಪ್ರಭಾವಿ ಹುದ್ದೆಯಾದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬಿ.ಎಲ್‌.ಸಂತೋಷ್‌ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಮುಂದುವರಿದಿದ್ದರೆ, ಸುನೀಲ್‌ ಬನ್ಸಲ್‌ ಹಾಗೂ ವಿನೋದ್‌ ತಾವ್ಡೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

8 ಪ್ರಧಾನ ಕಾರ್ಯದರ್ಶಿಗಳಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇವ್ ಸೇರಿದಂತೆ 6 ಮಂದಿಗೆ ಹೊಸದಾಗಿ ಸ್ಥಾನ ನೀಡಲಾಗಿದೆ.. ಸಂಸದ ತರುಣ್ ಚುಗ್ ಅವರನ್ನು ಪಕ್ಷದ ಕೇಂದ್ರ ಕಚೇರಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ಕರ್ನಾಟಕದ ನಾಗರಾಜ್‌ಗೆ ಸ್ಥಾನ:

ರಾಷ್ಟ್ರೀಯ ಉಪಾಧ್ಯಕ್ಷರ ಸಂಖ್ಯೆಯನ್ನು 11ರಿಂದ 13ಕ್ಕೆ ಹೆಚ್ಚಿಸಲಾಗಿದ್ದು, ಆರ್‌ಎಸ್‌ಎಸ್‌ ಮುಖಂಡ ರಾಮ್ ಮಾಧವ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹಾಗೂ ಡಿ. ಪುರಂದೇಶ್ವರಿ ಉಪಾಧ್ಯಕ್ಷರ ಹೊಸ ಪಟ್ಟಿಯಲ್ಲಿದ್ದಾರೆ. ಜತೆಗೆ ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಎಂ. ನಾಗರಾಜ್, ಪಂಜಾಬ್‌ನ ಮನ್‌ಪ್ರೀತ್ ಸಿಂಗ್ ಬಾದಲ್ ಮತ್ತು ಅಲೀಗಢ ಮುಸ್ಲಿಂ ವಿವಿಯ ಮಾಜಿ ಉಪಕುಲಪತಿ ಪ್ರೊ. ತಾರಿಕ್ ಮನ್ಸೂರ್ ಸೇರಿದಂತೆ 9 ಹೊಸ ಮುಖಗಳಿಗೆ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

ಮೋರ್ಚಾಗಳಿಗೆ ಹೊಸ ಅಧ್ಯಕ್ಷರು:

ಪಕ್ಷದ ವಿವಿಧ ಮೋರ್ಚಾಗಳಿಗೂ ಹೊಸ ಅಧ್ಯಕ್ಷರ ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಸ್ಥಾನಕ್ಕೆ ಗುಜರಾತ್‌ನ ಹೇಮಾಂಗ್ ಜೋಶಿ ಅವರನ್ನು ನೇಮಿಸಲಾಗಿದೆ. ಮಹಿಳಾ ಮೋರ್ಚಾಗೆ ರೂಪ್ ಕುಮಾರಿ ಚೌಧರಿ, ಒಬಿಸಿ ಮೋರ್ಚಾಗೆ ಅಮರ್‌ಪಾಲ್ ಮೌರ್ಯ, ಕಿಸಾನ್ ಮೋರ್ಚಾಗೆ ಬನ್ಸಿಲಾಲ್ ಗುರ್ಜರ್, ಎಸ್‌ಸಿ ಮೋರ್ಚಾಗೆ ಶಿವೇಶ್ ಕುಮಾರ್ ರಾಮ್ ಮತ್ತು ಎಸ್‌ಟಿ ಮೋರ್ಚಾಗೆ ಮನ್ನಾಲಾಲ್ ರಾವತ್ ಅಧ್ಯಕ್ಷರಾಗಿದ್ದಾರೆ.

ಖಜಾಂಚಿಯಾಗಿ ಗೋಯಲ್‌:

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದ್ದು, ಇಡೀ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಟಿ ಸೆಲ್‌ ನಾಯಕತ್ವ ಬದಲಾವಣೆ:

ಸುದೀರ್ಘ ಕಾಲ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯರನ್ನು ಬದಲಿಸಿ, ಛತ್ತೀಸ್‌ಗಢದ ದೀಪಕ್ ಮ್ಹಸ್ಕೆ ಅವರಿಗೆ ಐಟಿ ಹಾಗೂ ಸಾಮಾಜಿಕ ಮಾಧ್ಯಮದ ಹೊಣೆ ನೀಡಲಾಗಿದೆ. ಅನಿಲ್ ಬಲೂನಿ ರಾಷ್ಟ್ರೀಯ ಮಾಧ್ಯಮ ಸಂಚಾಲಕರಾಗಿ ಮುಂದುವರಿದಿದ್ದು, ಪ್ರದೀಪ್ ಭಂಡಾರಿ ಸೇರಿದಂತೆ ಮೂವರು ಹೊಸ ಸಹ-ಸಂಚಾಲಕರನ್ನು ನೇಮಿಸಲಾಗಿದೆ.

ಅಲ್ಪಸಂಖ್ಯಾತರು:

ನವೀನ್‌ ಟೀಂನಲ್ಲಿ ಒಬ್ಬ ಸಿಖ್‌, ಇಬ್ಬರು ಕ್ರೈಸ್ತ, ಮುಸ್ಲಿಂ, ಜೈನ್‌ ಮತ್ತು ಪಾರ್ಸಿ ಸಮುದಾಯದ ತಲಾ ಒಬ್ಬರಿಗೆ ಸ್ಥಾನ ನೀಡಲಾಗಿದೆ.

--

ಯಾರಿಗೆ ಎಷ್ಟು ಪ್ರಾತಿನಿಧ್ಯ?

65 ನಿತಿನ್‌ ನವೀನ್ ತಂಡದ ಒಟ್ಟು ಸದಸ್ಯರು

51 ಹೊಸ ತಂಡದಲ್ಲಿನ ಹೊಸ ಮುಖಗಳು

10 ನವೀನ ತಂಡದಲ್ಲಿ ಮಹಿಳೆಯರ ಸಂಖ್ಯೆ

06 ಬಿಜೆಪಿ ಹೊಸ ಟೀಂನಲ್ಲಿ ಅಲ್ಪಸಂಖ್ಯಾತರು

23 23 ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಾನ

6 ಜನರು 40 ವರ್ಷಕ್ಕಿಂತ ಕೆಳಗಿನವರು

15 ಜನರು 40-49ರ ವಯೋಮಾನದವರು

21 ಜನರು 50-59ರ ವಯೋಮಾನದವರು

ಪದಾಧಿಕಾರಿಗಳ ಜತೆ ಬಿಜೆಪಿ ಮೋರ್ಚಾಗಳಲ್ಲೂ ಬದಲಾವಣೆ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹುದ್ದೆಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ರಾಜ್ಯ ಉಸ್ತುವಾಗಿಯಾಗಿದ್ದ ರಾಧಾಮೋಹನ್‌ ಅಗರ್ವಾಲ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಐಟಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಅಮಿತ್‌ ಮಾಳವೀಯ ಅವರನ್ನು ಕೈಬಿಡಲಾಗಿದೆ. ಇವರ ಸ್ಥಾನಕ್ಕೆ ಹೊಸಬರನ್ನು ನೇಮಿಸಲಾಗಿದೆ.

ಇನ್ನು ಕೇಂದ್ರ ಸಂಪುಟ ವಿಸ್ತರಣೆ ಮೇಲೆ ಕಣ್ಣು

ನವದೆಹಲಿ: ಪಕ್ಷದಲ್ಲಿ ಸಂಘಟನೆಯಲ್ಲಿ ಬದಲಾವಣೆ ಮೇಲೆ ಇದೀಗ ಕೇಂದ್ರ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕೆಲ ದಿನಗಳ ಹಿಂದೆ ರಾಜ್ಯಸಭಾ ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇದೀಗ ಸಚಿವ ಪಿಯೂಷ್‌ ಗೋಯಲ್‌ಗೆ ಪಕ್ಷದ ಖಜಾಂಚಿ ಹುದ್ದೆ ನೀಡಲಾಗಿದೆ. ಇದು ಶೀಘ್ರವೇ ಮೋದಿ ಸಂಪುಟದಲ್ಲಿ ಬದಲಾವಣೆಯ ಸೂಚನೆ ಎಂದು ವಿಶ್ಲೇಷಿಸಲಾಗಿದೆ.

ಬಿಜೆಪಿ ನೂತನ ತಂಡಕ್ಕೆ ಬೊಮ್ಮಾಯಿ ಅಭಿನಂದನೆ

ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಅವರ ಸಮರ್ಥ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ರಾಷ್ಟ್ರೀಯ ತಂಡಕ್ಕೆ ನೂತನವಾಗಿ ನೇಮಕಗೊಂಡಿರುವ ಎಲ್ಲಾ ಪದಾಧಿಕಾರಿಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.

ಈ ನೂತನ ತಂಡ ಸಮೃದ್ಧ ಸಾಂಸ್ಥಿಕ ಅನುಭವ, ಯುವ ಶಕ್ತಿ, ಸಮರ್ಪಣಾ ಭಾವ ಮತ್ತು ಸಾರ್ವಜನಿಕ ಸೇವೆಗೆ ಬಲವಾದ ಬದ್ಧತೆ ಒಟ್ಟುಗೂಡಿಸುತ್ತದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ತಂಡ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಿದೆ, ದೇಶಾದ್ಯಂತ ಜನರೊಂದಿಗೆ ಸಂಪರ್ಕವನ್ನು ಆಳವಾಗಿಸಲಿದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪಕ್ಷದ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್’ ಎಂಬ ಭಾವನೆಯೊಂದಿಗೆ ಬಿಜೆಪಿ ಬಲವಾದ, ಸಮೃದ್ಧ ಮತ್ತು ಆತ್ಮನಿರ್ಭರ ಭಾರತದ ಪರಿಕಲ್ಪನೆಗಾಗಿ ಶ್ರಮಿಸುವುದನ್ನು ಮುಂದುವರಿಸಲಿ. 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ತನ್ನ ಕೊಡುಗೆಯನ್ನು ನೀಡಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.