ಹೈದರಾಬಾದ್‌ನಲ್ಲಿ 10ನೇ ತರಗತಿ ಕೂಡ ಪೂರ್ಣಗೊಳಿಸದ ಉತ್ತರ ಪ್ರದೇಶದ ಮೂಲದ ವ್ಯಕ್ತಿಯೊಬ್ಬ ಬರೋಬ್ಬರಿ 20 ವರ್ಷಗಳ ಕಾಲ ನಕಲಿ ದಂತವೈದ್ಯನಾಗಿ ಕೆಲಸ ಮಾಡಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು,. ಆತನನ್ನು ಪೊಲೀಸರು ಬಂಧಿಸಿದ್ದಾರೆ.
10ನೇ ಕ್ಲಾಸ್ ಕೂಡ ಪೂರ್ಣಗೊಳಿಸದವ ದಂತವೈದ್ಯ
ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ಮರಳಿ ಮನೆಗೆ ಬರಲೇ ಇಲ್ಲ, ಹಲ್ಲು ಕೀಳುವ ವೇಳೆ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಅವರು ಹಲ್ಲು ಕಿತ್ತ ಕೆಲ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದರು. ಈ ಘಟನೆ ಮಾಸುವ ಮೊದಲೇ ಹೈದರಾಬಾದ್‌ನಲ್ಲೊಬ್ಬ ನಕಲಿ ದಂತವೈದ್ಯ ಸಿಕ್ಕಿಬಿದ್ದಿದ್ದು, 10ನೇ ಕ್ಲಾಸ್ ಕೂಡ ಪೂರ್ಣಗೊಳಿಸದ ಈತ ಬರೋಬ್ಬರಿ 20 ವರ್ಷಗಳ ಕಾಲ ದಂತವೈದ್ಯನಾಗಿ ಕೆಲಸ ಮಾಡಿದ್ದಾನೆ. ಉತ್ತರ ಪ್ರದೇಶ ಮೂಲದ ಈತ ಮುತ್ತಿನ ನಗರ ಹೈದರಾಬಾದ್‌ನಲ್ಲಿ ಕಳೆದ 20 ವರ್ಷಗಳಿಂದ ಯಾರಿಗೂ ಅನುಮಾನ ಬರದಂತೆ ದಂತವೈದ್ಯನಾಗಿ ಕೆಲಸ ಮಾಡಿದ್ದಾನೆ. ಹೀಗೆ ಸಿಕ್ಕಿಬಿದ್ದು ಬಂಧಿಸಲ್ಪಟ್ಟ ನಕಲಿ ವೈದ್ಯನನ್ನು ರಮೇಶ್ ಎಂದು ಗುರುತಿಸಲಾಗಿದೆ. ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಟಿ) ನಡೆಸಿದ ದಾಳಿಯ ನಂತರ ಈತನ ಅಕ್ರಮ ಕ್ಲಿನಿಕ್ ಪತ್ತೆಯಾಗಿದ್ದು, ಈತನನ್ನು ಸಿಕಂದರಬಾದ್‌ನ ನರೆಡ್ಮೆಟ್‌ನಲ್ಲಿ ಮಂಗಳವಾರ ಬಂಧಿಸಲಾಗಿದೆ.
ಫೇಕ್ ಪ್ರಮಾಣಪತ್ರಗಳೊಂದಿಗೆ 20 ವರ್ಷಗಳಿಂದ ಕೆಲಸ
10ನೇ ತರಗತಿಯನ್ನು ಕೂಡ ಪೂರ್ಣಗೊಳಿಸದ ಈತ ತನ್ನನ್ನು ತಾನು ನಕಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪ್ರಮಾಣಪತ್ರಗಳನ್ನು ಇಟ್ಟುಕೊಂಡು ಅರ್ಹ ದಂತವೈದ್ಯನಂತೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಮೇಶ್ ಮುಖ್ಯವಾಗಿ ತಡರಾತ್ರಿಯಿಂದ ಬೆಳಗಿನ ಜಾವದವರೆಗೆ ಕ್ಲಿನಿಕ್ ಅನ್ನು ನಡೆಸುತ್ತಿದ್ದನು ಎಂದು ವರದಿಯಾಗಿದೆ, ಈತನ ಈ ಸಾಮಾನ್ಯವಲ್ಲದ ಕೆಲಸದ ಸಮಯದ ಬಗ್ಗೆ ಕೊನೆಗೂ ಕೆಲ ಸ್ಥಳೀಯರಿಗೆ ಅನುಮಾನ ಬಂದಿತ್ತು.
ಈ ಹಿನ್ನೆಲೆ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಒಟಿ ಅಧಿಕಾರಿಗಳು, ರಮೇಶ್‌ಗೆ ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಇಲ್ಲ ಮತ್ತು ಸುಮಾರು 20 ವರ್ಷಗಳಿಂದ ಅಕ್ರಮವಾಗಿ ದಂತವೈದ್ಯನಾಗಿ ಈತ ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಧೃಡಪಡಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈತ ಯಾರಿಗೂ ಗೊತ್ತಾಗದಂತೆ ಇಷ್ಟು ವರ್ಷಗಳ ಕಾಲ ಈತ ಹೇಗೆ ಕೆಲಸ ಮಾಡಿದ ಹಾಗೂ ಎಷ್ಟು ರೋಗಿಗಳಿಗೆ ಈತ ಚಿಕಿತ್ಸೆ ನೀಡಿದ್ದಾನೆ ಎಂಬ ಬಗ್ಗೆ ಈಗ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: 2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು
ಸಾಮಾನ್ಯವಾಗಿ ಒಂದು ಸಣ್ಣ ಕ್ಲಿನಿಕ್ ತೆರೆಯಲು ಅಥವಾ ಯಾವುದೇ ಉದ್ಯಮ ಶುರು ಮಾಡಲು ಸ್ಥಳೀಯ ಆಡಳಿತದಿಂದ ಹಲವು ರೀತಿಯ ಅನುಮತಿ ಪತ್ರಗಳು ಬೇಕಾಗುತ್ತದೆ. ಯಾವುದೇ ಉದ್ಯಮ ಶುರು ಮಾಡಿದ ಮೇಲೆ ಅಲ್ಲಿಗೆ ಸರ್ಕಾರಿ ಅಧಿಕಾರಿಗಳು ವರ್ಷದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮಾಡಬೇಕು ಹೀಗಿದ್ದೂ ಈತ ಕಳೆದ 20 ವರ್ಷಗಳಿಂದ ದಂತವೈದ್ಯನಾಗಿ ಯಾರಿಗೂ ಅನುಮಾನ ಬರದಂತೆ ಕೆಲಸ ಮಾಡಿರುವುದು ಅಚ್ಚರಿ ಮೂಡಿಸಿದೆ.
ಕೆಲ ಸಮಯದ ಹಿಂದೆ ಕೇವಲ ಎಸ್‌ಎಸ್‌ಎಲ್‌ಸಿ ಓದಿದ್ದ ನಕಲಿ ವೈದ್ಯರಿಬ್ಬರು ಸ್ತ್ರೀ ರೋಗ ತಜ್ಞರಾಗಿ ಕೆಲಸ ಮಾಡಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವುದಕ್ಕೆ ಹೋದ ಪರಿಣಾಮ ಹೆರಿಗೆಯ ನಂತರ ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದರು. ಈ ನಕಲಿ ವೈದ್ಯರು ಕೂಡ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು ಬೇರೆ ಬೇರೆ ಆಸ್ಪತ್ರೆಗಳಿಗೆ ಇವರು ಸ್ಪೆಷಲಿಸ್ಟ್‌ಗಳಂತೆ ಹೋಗುತ್ತಿದ್ದರು.
ಇದನ್ನೂ ಓದಿ: ಭಾರತಕ್ಕೂ ಬಂತಾ ಝೋಂಬಿ ಡ್ರಗ್: ನಿಂತಲೇ ಗಂಟೆಗಳ ಕಾಲ ತೂಕಾಡಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್


