ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಕೆದಾಟು ಯೋಜನೆ ಕುರಿತ ಹೇಳಿಕೆಯು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳು, ಕರ್ನಾಟಕದ ವಿರುದ್ಧ ಕಾನೂನು ಹೋರಾಟವನ್ನು ತೀವ್ರಗೊಳಿಸಲು ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಈ ಬೆಳವಣಿಗೆಯು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರಿದೆ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸುವ ಯಾವುದೇ ಕಾನೂನಾತ್ಮಕ ಹಕ್ಕು ತಮಿಳುನಾಡಿಗಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ನೆರೆರಾಜ್ಯದಲ್ಲಿ ರಾಜಕೀಯ ಜ್ವಾಲೆಗೆ ಕಾರಣವಾಗಿದೆ. 

Add Asianetnews Kannada as a Preferred SourcegooglePreferred

ಡಿ.ಕೆ.ಶಿ ಅವರ ಈ ಹೇಳಿಕೆಯನ್ನು "ದುರಹಂಕಾರದ ಪರಮಾವಧಿ" ಎಂದು ಕರೆದಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಮತ್ತು ಪ್ರತಿಪಕ್ಷಗಳಾದ ಎಐಎಡಿಎಂಕೆ (AIADMK), ಪಿಎಂಕೆ ಹಾಗೂ ಎಎಂಎಂಕೆ ಪಕ್ಷಗಳು ಕರ್ನಾಟಕ ಸರ್ಕಾರದ ವಿರುದ್ಧ ಜಂಟಿಯಾಗಿ ಮುಗಿಬಿದ್ದಿವೆ. ಜೊತೆಗೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರ ನೇತೃತ್ವದ ಟಿವಿಕೆ (TVK) ಸರ್ಕಾರವು ಈ ನಿಟ್ಟಿನಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಸಿಎಂ ವಿಜಯ್ ಕೂಡ ಸರ್ಕಾರದ ಅಧಿಕಾರಿಗಳಿಗೆ ಕಾನೂನು ಹೋರಾಟ ಮುಂದುವರೆಸುವಂತೆ ಆದೇಶ ನೀಡಿದ್ದಾರೆ.

ಡಿಕೆಶಿ ಹೇಳಿಕೆ ಅವರ ದುರಹಂಕಾರದ ಮನಸ್ಥಿತಿ ತೋರಿಸುತ್ತದೆ : ಕೆ.ಎನ್. ನೆಹರು ಕಿಡಿ

ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ಹಿರಿಯ ನಾಯಕ ಹಾಗೂ ಸಚಿವ ಕೆ.ಎನ್. ನೆಹರು, ಕರ್ನಾಟಕದ ನಡೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. "ಕಾವೇರಿ ನದಿಪಾತ್ರದ ಕೆಳಗಿನ ರಾಜ್ಯಗಳ (Lower Riparian States) ಒಪ್ಪಿಗೆಯಿಲ್ಲದೆ ಮೇಕೆದಾಟುವಿನಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದೂ ಶಿವಕುಮಾರ್ ಇಂತಹ ಹೇಳಿಕೆ ನೀಡಿರುವುದು ಕಾವೇರಿ ಜಲಾನಯನ ಪ್ರದೇಶದ ತಮಿಳುನಾಡು ಜಿಲ್ಲೆಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ದುರ್ಬಲ ಸರ್ಕಾರವಿದೆ ಮತ್ತು ಕಾಂಗ್ರೆಸ್ ಪಕ್ಷವು ಇಲ್ಲಿನ ಮೈತ್ರಿಕೂಟದ ಭಾಗವಾಗಿರುವುದರಿಂದ ಯಾರೂ ವಿರೋಧಿಸುವುದಿಲ್ಲ ಎಂಬ ತಪ್ಪು ಕಲ್ಪನೆಯಿಂದ ಅವರು ಈ ರೀತಿ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ನಮ್ಮ ನಾಯಕ ಎಂ.ಕೆ. ಸ್ಟಾಲಿನ್ ಅವರು ಕಾವೇರಿ ವಿಚಾರದಲ್ಲಿ ತಮಿಳುನಾಡು ಜನರ ಮತ್ತು ರೈತರ ಹಕ್ಕುಗಳನ್ನು ರಕ್ಷಿಸಲು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂದರು.

ಹೊಸ ಮುಖ್ಯಮಂತ್ರಿ ವಿಜಯ್‌ಗೆ ವಿರೋಧ ಪಕ್ಷಗಳ ಕಠಿಣ ಒತ್ತಾಯ

ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿಯ ನಿಲುವನ್ನು ಮುಖ್ಯಮಂತ್ರಿ ವಿಜಯ್ ಅವರು ತಕ್ಷಣವೇ ಖಂಡಿಸಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಆರಂಭಿಕ ಹಂತದಲ್ಲೇ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನಗಳನ್ನು ತಮಿಳುನಾಡು ಸರ್ಕಾರ ವಿಫಲಗೊಳಿಸಬೇಕು ಎಂದು ಆಗ್ರಹಿಸಿದೆ.

ಮತ್ತೊಂದೆಡೆ, ಪ್ರತಿಪಕ್ಷ ನಾಯಕ ಹಾಗೂ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ಡಿ.ಕೆ.ಶಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಯೋಜನೆಯನ್ನು ವಿರೋಧಿಸುವ ಎಲ್ಲಾ ಕಾನೂನಾತ್ಮಕ ಮತ್ತು ನೈತಿಕ ಅಧಿಕಾರ ತಮಿಳುನಾಡಿಗಿದೆ ಎಂದು ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ತಮಿಳುನಾಡಿನ ಹಕ್ಕುಗಳನ್ನು ವ್ಯವಸ್ಥಿತವಾಗಿ ದಮನ ಮಾಡಲಾಗುತ್ತಿದೆ. ಆದರೂ ತಮಿಳುನಾಡು ಸರ್ಕಾರಗಳು ಮೌನವಾಗಿ ಕುಳಿತಿರುವುದು ಖೇದಕರ. ಈಗಲಾದರೂ ಹೊಸ ಸರ್ಕಾರ ತನ್ನ ನಿಲುವನ್ನು ಕಠಿಣಗೊಳಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಹಿತರಕ್ಷಣೆ: ಡಿಪಿಆರ್ ತಿರಸ್ಕರಿಸಲು ಆಗ್ರಹ

ರೈತರಿಗೆ ಕಂಟಕ: 

ಎಎಂಎಂಕೆ (AMMK) ಪಕ್ಷದ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಅವರು ಮಾತನಾಡಿ, ಮೇಕೆದಾಟು ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಲಕ್ಷಾಂತರ ರೈತರ ಬದುಕು ಬೀದಿಗೆ ಬರಲಿದೆ. ಕರ್ನಾಟಕ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಬಿಡಬೇಕು ಎಂದಿದ್ದಾರೆ.

ಕೇಂದ್ರದ ಮೇಲೆ ಒತ್ತಡ:

ಪಿಎಂಕೆ (PMK) ನಾಯಕ ಅನ್ಬುಮಣಿ ರಾಮದಾಸ್ ಅವರು, ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಮತ್ತು ಅದನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಮುಖ್ಯಮಂತ್ರಿ ವಿಜಯ್ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ, ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಚುರುಕು ನೀಡುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಯೋಜನೆಯನ್ನು ವಿರೋಧಿಸಲು ಸಜ್ಜಾಗುತ್ತಿರುವುದರಿಂದ ಕಾವೇರಿ ಗಡಿಭಾಗದಲ್ಲಿ ಮತ್ತೆ ರಾಜಕೀಯ ಹಗ್ಗಜಗ್ಗಾಟ ತೀವ್ರಗೊಂಡಿದೆ. ಕರ್ನಾಟಕದಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಈ ಬಗ್ಗೆ ಒಂದಾಗಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ಕನ್ನಡಿಗರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ.

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಯೋಜನೆಯು ಕಾವೇರಿ ನದಿಗೆ ಸಂಬಂಧಿಸಿದೆ. ಇದು ಕರ್ನಾಟಕದ ರಾಮನಗರ ಜಿಲ್ಲೆಯ ಮೇಕೆದಾಟು ಎಂಬಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಯೋಜನೆಯಾಗಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದು ಈ ಪ್ರಮುಖ ಉದ್ದೇಶ.