ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಜನರ ಕೂದಲು ಉದುರುವಿಕೆಗೆ ಗೋಧಿಯಲ್ಲಿನ ವಿಷಕಾರಿ ಅಂಶ ಕಾರಣವೆಂದು ತಜ್ಞರು ಶಂಕಿಸಿದ್ದಾರೆ. ರೇಷನ್ ಅಂಗಡಿಯಲ್ಲಿ ವಿತರಿಸಲಾದ ಗೋಧಿಯಲ್ಲಿ ಹೆಚ್ಚಿನ ಸೆಲೆನಿಯಮ್ ಮತ್ತು ಕಡಿಮೆ ಸತುವಿನ ಅಂಶವಿರುವುದು ಪತ್ತೆಯಾಗಿದೆ.
ಮುಂಬೈ (ಫೆ.25): ಜನವರಿ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಬುಲ್ದಾನಾ ಜಿಲ್ಲೆಯಲ್ಲಿ ತೀರಾ ಅಪರೂಪದ ಸಮಸ್ಯೆ ಕಾಣಿಸಿಕೊಂಡಿತು. ಇಲ್ಲಿನ ನಿವಾಸಿಗಳ ಕೂದಲು ಹಠಾತ್ ಆಗಿ ಉದುರಲು ಪ್ರಾರಂಭವಾಗಿತ್ಉತ. ಸುಮ್ಮನೆ ಕೂದಲನ್ನು ಕೈಯಲ್ಲಿ ಹಿಡಿದರೆ ಸಾಕು ಅದು ಕಿತ್ತು ಬರುತ್ತಿತ್ತು. ಆರಂಭದಲ್ಲಿ ಸಮಸ್ಯೆ ಬಗ್ಗೆ ಅಷ್ಟಾಗಿ ಸ್ಥಳೀಯ ಆಡಳಿತ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಬಹುತೇಕ ಗ್ರಾಮಸ್ಥರಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲಿಯೇ ತಜ್ಞರು ಹಾಗೂ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದರು. ಪದ್ಮಶ್ರೀ ಡಾ. ಹಿಮ್ಮತ್‌ರಾವ್ ಬವಾಸ್ಕರ್ ಅವರ ತಂಡ ನಡೆಸಿದ ಅಧ್ಯಯನದ ಪ್ರಕಾರ, ಅವರು ಸೇವಿಸುತ್ತಿದ್ದ ಗೋಧಿಯಲ್ಲಿನ ವಿಷಕಾರಿ ಅಂಶಗಳಿಂದಲೇ ಈ ಸಮಸ್ಯೆ ಉಂಟಾಗಿರಬಹುದು ಎಂದಿದ್ದಾರೆ. ಡಾ. ಬವಾಸ್ಕರ್ ಅವರು ಒಂದು ತಿಂಗಳ ಕಾಲ ಈ ಬಗ್ಗೆ ಅಧ್ಯಯನ ಮಾಡಿದ್ದಾರೆ. ರೇಷನ್ ಶಾಪ್‌ನಲ್ಲಿ ವಿತರಿಸಲಾದ ಗೋಧಿಯಲ್ಲಿ ಹೆಚ್ಚಿನ ಮಟ್ಟದ ಸಲೆನಿಯಮ್ ಅಂಶ ಕಂಡುಬಂದಿದ್ದರೆ, ಸತುವಿನ ಅಂಶ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ.
"ಸಮಸ್ಯ ಭಾದಿತ ಪ್ರದೇಶದ ಗೋಧಿಯನ್ನು ವಿಶ್ಲೇಷಣೆ ಮಾಡಲಾಗಿದೆ. ಸ್ಥಳೀಯವಾಗಿ ಬೆಳೆಯುವ ವಿಧಕ್ಕಿಂತ 600 ಪಟ್ಟು ಹೆಚ್ಚು ಸೆಲೆನಿಯಮ್ ಅನ್ನು ಇದು ಹೊಂದಿದೆ. ಈ ಹೆಚ್ಚಿನ ಸೆಲೆನಿಯಮ್ ಸೇವನೆಯು ಅಲೋಪೆಸಿಯಾ ಪ್ರಕರಣಗಳಿಗೆ ಕಾರಣವೆಂದು ನಂಬಲಾಗಿದೆ. ಈ ಸ್ಥಿತಿಯು ವೇಗವಾಗಿ ಬೆಳೆದಿದೆ. ಈ ಹಳ್ಳಿಗಳಲ್ಲಿ ರೋಗಲಕ್ಷಣಗಳು ಪ್ರಾರಂಭವಾದ ಮೂರರಿಂದ ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಕೂದಲು ಉದುರಿ ಬೋಳುತಲೆಯಾಗುತ್ತದೆ' ಎಂದು ಡಾ. ಬವಾಸ್ಕರ್ ಹೇಳಿದ್ದಾರೆ.
ಗೋಧಿ ಮಾದರಿಗಳನ್ನು ಥಾಣೆಯ ವರ್ನಿ ವಿಶ್ಲೇಷಣಾತ್ಮಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಸೆಲೆನಿಯಮ್ ಮಟ್ಟವು 14.52 ಮಿಗ್ರಾಂ/ಕೆಜಿ ಇರುವುದು ಪತ್ತೆಯಾಗಿದೆ - ಇದು ಸಾಮಾನ್ಯ 1.9 ಮಿಗ್ರಾಂ/ಕೆಜಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಈ ಎಲ್ಲಾ ಗೋಧಿ ಸರಕುಗಳು ಪಂಜಾಬ್‌ನಿಂದ ಬಂದವು ಎಂದು ಡಾ. ಬವಾಸ್ಕರ್ ಹೇಳಿದ್ದಾರೆ. "ರಕ್ತ, ಮೂತ್ರ ಮತ್ತು ಕೂದಲಿನ ಮಾದರಿಗಳನ್ನು ಪರೀಕ್ಷಿಸಿದಾಗ ಸೆಲೆನಿಯಮ್ ಅಂಶವು ಕ್ರಮವಾಗಿ 35 ಪಟ್ಟು, 60 ಪಟ್ಟು ಮತ್ತು 150 ಪಟ್ಟು ಹೆಚ್ಚಾಗಿದೆ. ಇದು ಅತಿಯಾದ ಸೆಲೆನಿಯಮ್ ಸೇವನೆಯು ಏಕಾಏಕಿ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ. ಪೀಡಿತ ವ್ಯಕ್ತಿಗಳಲ್ಲಿ ಸತುವಿನ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ನಮ್ಮ ಅಧ್ಯಯನ ತಿಳಿಸಿದೆ. ಇದು ಹೆಚ್ಚುವರಿ ಸೆಲೆನಿಯಮ್‌ನಿಂದ ಉಂಟಾಗುವ ಸಂಭಾವ್ಯ ಅಸಮತೋಲನವನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.
ಡಿಸೆಂಬರ್ 2024 ರಿಂದ ಈ ವರ್ಷದ ಜನವರಿ ವರೆಗೆ 18 ಹಳ್ಳಿಗಳ ಸುಮಾರು 300 ವ್ಯಕ್ತಿಗಳು, ಅವರಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರು, ತೀವ್ರ ಕೂದಲು ಉದುರುವಿಕೆ ಸಮಸ್ಯೆಯನ್ನು ಅನುಭವಿಸಿದ್ದರು. ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಬೋಳಾಗಿದ್ದರು. "8 ವರ್ಷದಿಂದ 72 ವರ್ಷ ವಯಸ್ಸಿನವರೆಗಿನ ಜನರು ಬೋಳು ತಲೆ ಸಮಸ್ಯೆ ಎದುರಿಸುತ್ತಿದ್ದಾರೆ.ಮಕ್ಕಳು ಶಾಲೆ ಮತ್ತು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ, ನಿಗದಿಯಾಗಿದ್ದ ವಿವಾಹಗಳು ನಿಂತು ಹೋಗಿದೆ. ಸಾಮಾಜಿಕ ಸಂಬಂಧವಾಗಿ ತನಿಖೆಗಾಗಿ ನಾನು ಅಲ್ಲಿಗೆ ಹೋಗಿದ್ದೆ" ಎಂದು ಡಾ. ಬವಾಸ್ಕರ್ ತಿಳಿಸಿದ್ದಾರೆ.
ಒಂದೇ ವಾರದಲ್ಲಿ ಬೋಳು ತಲೆ; 3 ಗ್ರಾಮದ ಜನರಲ್ಲಿ ಶುರುವಾಯ್ತು ಆತಂಕ, ತನಿಖೆ ಆರಂಭ!
ಹಾಗಿದ್ದರೂ,ಅವರು ಇನ್ನೂ ಅಧ್ಯಯನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ವಿಜ್ಞಾನಿಗಳು ಪರೀಕ್ಷೆಗಾಗಿ ಆ ಪ್ರದೇಶದಿಂದ ನೀರು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದರು, ಇದು ಕೂದಲು ಉದುರುವಿಕೆಯನ್ನು ಅನುಭವಿಸಿದವರ ರಕ್ತದಲ್ಲಿ ಹೆಚ್ಚಿನ ಸೆಲೆನಿಯಮ್ ಮಟ್ಟವನ್ನು ದೃಢಪಡಿಸಿತು. ICMR ತನ್ನ ತನಿಖಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ, ಆದರೆ ಅದರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
Viral: ಕೇರಳ ಉತ್ಸವದ ಭಯಾನಕ ವಿಡಿಯೋ; ವ್ಯಕ್ತಿಯನ್ನ ಸೊಂಡಿಲಿನಲ್ಲಿ ಎತ್ತಿ ಗರಗರನೆ ತಿರುಗಿಸಿ ಎಸೆದ ಆನೆ!
