ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮದ್ಯದಂಗಡಿಗಳ ಹೊರಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಿ, ಮದ್ಯ ಖರೀದಿಸಲು ಬರುವವರ ಆರೋಗ್ಯ ತಪಾಸಣೆ ಮತ್ತು ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಸಾಗರ್ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವನೆಯಿಂದಾದ ಸಾವುಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸಾಗರ್​: ಸರ್ಕಾರಕ್ಕೆ ಭಾರಿ ಆದಾಯ ಬರುವುದೇ ಅಬಕಾರಿ ಇಲಾಖೆಯಿಂದ. ಇನ್ನು ಮದ್ಯದ ಅಂಗಡಿಗಳಂತೂ ಅಣಬೆಗಳಂತೆ ತಲೆ ಎತ್ತುತ್ತಲೇ ಇವೆ. ಅದಕ್ಕೆ ಡಿಮಾಂಡ್​ ಅಷ್ಟಿರುವ ಕಾರಣದಿಂದ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಬೇರೆ ಪದಾರ್ಥಗಳು, ಸಾಮಗ್ರಿಗಳ ಬೆಲೆ ಏರಿಸಿದರೆ ಅವುಗಳ ಖರೀದಿ ಕಡಿಮೆ ಆಗಬಹುದೇನೋ, ಆದರೆ ಮದ್ಯದ ಬೆಲೆ ಏರಿಸಿದರೂ ಅದಕ್ಕೆ ಯಾವತ್ತಿಗೂ ಡಿಮಾಂಡ್​ ಇದ್ದದ್ದೇ. ಆದರೆ ಇದೀಗ ಹೊಸ ರೂಲ್ಸ್​ ಒಂದನ್ನು ಜಾರಿಗೊಳಿಸಲಾಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನೋದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ಅದನ್ನು ಕುಡುಕರು ಕಿವಿ ಮೇಲೆ ಹಾಕಿಕೊಳ್ಳಲ್ಲ ಎನ್ನೋದೂ ಅಷ್ಟೇ ದಿಟ. ಆದ್ದರಿಂದ ಇನ್ಮುಂದೆ ಮದ್ಯದಂಗಡಿಗಳ ಹೊರಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುವುದು. ಈ ತಂಡಗಳು ಮದ್ಯ ಖರೀದಿಸಲು ಬರುವ ಜನರ ಆರೋಗ್ಯವನ್ನು ಪರಿಶೀಲಿಸಿ, ರಕ್ತದ ಮಾದರಿಗಳನ್ನು ತೆಗೆದುಕೊಳ್ಳುತ್ತಿವೆ ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡುತ್ತಿವೆ. ರಕ್ತದಲ್ಲಿ ಮದ್ಯದ ಪ್ರಮಾಣ ಹೆಚ್ಚಿದ್ದು, ಇನ್ನಷ್ಟು ಕುಡಿದರೆ, ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ಕೌನ್ಸೆಲಿಂಗ್​ ಮಾಡಿ ಅವರಿಗೆ ಸಲಹೆ ನೀಡುತ್ತವೆ.

ಹಾಗೆಂದು ಕರ್ನಾಟಕದ ಮದ್ಯಪ್ರಿಯರು ಸದ್ಯ ಅಂತೂ ತಲೆ ಕೆಡಿಸಿಕೊಳ್ಳೋ ಅಗತ್ಯವಿಲ್ಲ ಬಿಡಿ. ಏಕೆಂದರೆ, ಇದು ಜಾರಿಯಾಗಿರುವುದು ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ. ಇಲ್ಲಿ ಮದ್ಯದ ಅಂಗಡಿ ಎದುರು ವೈದ್ಯರ ತಂಡ ಬೀಡು ಬಿಟ್ಟಿದ್ದು, ಮದ್ಯ ಸೇವನೆ ಮಾಡಲು ಬರುವವರಿಗೆ ಕೌನ್ಸಿಲಿಂಗ್​ ಮಾಡುತ್ತಿದೆ. ಇನ್ನು ಅಲ್ಲಿಯ ಸಾಗರ್​ ಜಿಲ್ಲಾಡಳಿತವು ಇನ್ನೂ ಮುಂದೆ ಹೋಗಿ ಮದ್ಯದಂಗಡಿ ಮಾಲೀಕರಿಗೆ ಅಂಗಡಿ ತೆರೆಯುವ ಮೊದಲು ಬರುವವರು ಸೇರಿದಂತೆ ತಮ್ಮ ಅತ್ಯಂತ ನಿಯಮಿತ ಗ್ರಾಹಕರ ಪಟ್ಟಿಗಳನ್ನು ಸಂಗ್ರಹಿಸಲು ಕೇಳಿದೆ. ಈ ಪಟ್ಟಿಗಳು ವೈದ್ಯರಿಗೆ ದೀರ್ಘಕಾಲದ ಮತ್ತು ಆಗಾಗ್ಗೆ ಕುಡಿಯುವವರನ್ನು ಗುರುತಿಸಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸೆಪ್ಟೆಂಬರ್‌ನಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 20 ಜನರ ಜೀವವನ್ನು ಬಲಿ ಪಡೆದ ಶಂಕಿತ ಸಾವುಗಳು ಸೇರಿದಂತೆ ಜಿಲ್ಲೆಯಲ್ಲಿ ಸರಣಿ ಸಾವುಗಳ ನಂತರ ಆಡಳಿತವು ಈ ಕ್ರಮವನ್ನು ತೆಗೆದುಕೊಂಡಿದೆ.

ಜಿಲ್ಲಾಧಿಕಾರಿ ಏನಂದ್ರು?

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸಾಗರ್ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್, ದೀರ್ಘಕಾಲದ ಮತ್ತು ಅತಿಯಾದ ಮದ್ಯ ಸೇವನೆಯಿಂದ ಆರೋಗ್ಯಕ್ಕೆ ಅಪಾಯದಲ್ಲಿರುವ ಜನರನ್ನು ಗುರುತಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದಿದ್ದಾರೆ. ಇವುಗಳಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಇರುವವರು ಅಥವಾ ಸರಿಯಾಗಿ ತಿನ್ನದವರು ಸೇರಿದ್ದಾರೆ. "ಅತಿಯಾಗಿ ಮದ್ಯಪಾನ ಮಾಡುವ ಜನರ ಬಗ್ಗೆ, ವಿಶೇಷವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮದ್ಯಪಾನ ಮಾಡುವವರ ಬಗ್ಗೆ ನಮ್ಮ ಕಾಳಜಿ ಇದೆ. ಕೆಲವರಿಗೆ ಇತರ ವೈದ್ಯಕೀಯ ಸ್ಥಿತಿಗಳೂ ಇರುತ್ತವೆ. ಈ ಎಲ್ಲಾ ಅಂಶಗಳು ಅವರ ಆರೋಗ್ಯವನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತವೆ. ಜಾಗೃತಿ ಮೂಡಿಸುವ ಪ್ರಯತ್ನವಾಗಿ ನೀವು ಇದನ್ನು ನೋಡಬಹುದು" ಎಂದು ಅವರು ಹೇಳಿದರು.

ಮದ್ಯದಂಗಡಿ ನಿರ್ವಾಹಕರು ನಿಯಮಿತವಾಗಿ ಭೇಟಿ ನೀಡುವ ಗ್ರಾಹಕರ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಹೊಂದಿರುವುದರಿಂದ ಆಡಳಿತವು ನಿರ್ದಿಷ್ಟವಾಗಿ ಅವರಿಂದ ಸಹಾಯವನ್ನು ಕೋರಿದೆ ಎಂದು ಯಾದವ್ ವಿವರಿಸಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಕದ್ದುಮುಚ್ಚಿ ಮದ್ಯ ಸೇವನೆ ಮಾಡಲು ಹೋಗುವ ಗ್ರಾಹಕರಿಗೆ ಈ ಜಿಲ್ಲೆಗಳ ಆಡಳಿತ ಶಾಕ್​ ಕೊಟ್ಟಿದೆ. ಮದ್ಯ ಬೇಕು ಎಂದರೆ ಪರೀಕ್ಷೆ, ರಕ್ತ ಪರೀಕ್ಷೆ ಎಲ್ಲವೂ ಕಡ್ಡಾಯವಾಗಿದೆ!