ಸ್ಥಳೀಯ ಸಂಸ್ಥಗಳ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ. ಇನ್ನು ಮತದಾನ ಮುಗಿದಿಲ್ಲ, ಫಲಿತಾಂಶ ದಿನಾಂಕವೂ ಬಂದಿಲ್ಲ, ಅಷ್ಟರಲ್ಲೇ ಬಿಜೆಪಿ 77 ಸ್ಥಾನ ಗೆದ್ದುಕೊಂಡಿದೆ.
ಅಗರ್ತಲಾ(ನ.27) ತ್ರಿಪುರಾದ ನಗರ ಸ್ಥಳೀಯ ಸಂಸ್ಥೆ, ಅಗರ್ತಲಾ ಮನ್ಸಿಪಲ್ ಕಾರ್ಪೋರೇಶನ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಭಾರಿ ಭಿಗಿಭದ್ರತೆಯಲ್ಲಿ ಮತದಾನ ಪಕ್ರಿಯೆ ಆರಂಭಗೊಂಡಿದೆ. ಮತದಾನ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಬಿಜೆಪಿಯ 77 ಅಭ್ಯರ್ಥಿಗಳು ಗೆಲುವಿನ ಸಂಭ್ರಮ ಆಚರಿಸಿದ್ದಾರೆ.ಮತದಾನ ಪಕ್ರಿಯೆ ಮುಗಿದಿಲ್ಲ, ಮತ ಎಣಿಕೆ ದಿನಾಂಕ ಇನ್ನು ಬಂದಿಲ್ಲ, ಅಷ್ಟರಲ್ಲೇ 77 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ವಿಶೇಷ ಅಂದರೆ ಬಿಜೆಪಿಯ ಈ 77 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
733 ಅಭ್ಯರ್ಥಿಗಳ ಪೈಕಿ 77 ಮಂದಿ ಪಾಸ್
ತ್ರಿಪುರಾದ 16 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಇಂದು ಬೆಳಗ್ಗೆ ತ್ರಿಪುರಾ ಪೊಲೀಸ್, ಅರೆಸೇನಾ ಪಡೆ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಒಟ್ಟು 5.56 ಲಕ್ಷ ಮತದಾರರರು ಮತದಾನಕ್ಕೆ ಅರ್ಹರಾಗಿದ್ದಾರೆ. 258 ಸ್ಥಾನಗಳಿಗೆ 733 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ 77 ಸ್ಥಾನಗಳಿಗೆ ಬಿಜೆಪಿ ಹೊರತುಪಡಿಸಿದರೆ ಇನ್ಯಾರು ಸ್ಪರ್ಧಿಸಿಲ್ಲ. ಹೀಗಾಗಿ ಬಿಜೆಪಿಯ 77 ಅಭ್ಯರ್ಥಿಗಳು ಯಾವುದೇ ಸ್ಪರ್ಧೆ ಇಲ್ಲದೆ ಗೆಲುವು ಕಂಡಿದ್ದಾರೆ. ತ್ರಿಪುರಾದ ಐದು ಪುರಸಭೆಗಳ 65 ಸ್ಥಾನ ಸೇರಿದಂತೆ ಒಟ್ಟು 77 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದೆ.
ಬಿಜೆಪಿ ಗೆದ್ದ ಪುರಸಭೆ ವಿವರ
- ಧಲೈ ಜಿಲ್ಲೆಯ ಕಮಲ್ಪುರ
- ದಕ್ಷಿಣ ತ್ರಿಪುರಾ ಜಿಲ್ಲೆಯ ಶಾಂತಿರ್ ಬಜಾರ್
- ಪಶ್ಚಿಮ ತ್ರಿಪುರಾ ಜಿಲ್ಲೆಯ ರಾಣಿರ್ ಬಜಾರ್, ಜಿರಾನಿಯಾ,ಸ ಮೋಹನ್ಪುರ್
ಪ್ರಮು ಮೂರು ಪುರಸಭೆಗಳ ಜೊತೆೆಗೆ ಬಿಜೆಪಿ ಹೆಚ್ಚುವರಿಯಾಗಿ 12 ಸ್ಥಾನಗಳನ್ನೂ ಗೆದ್ದುಕೊಂಡಿದೆ. ಅಂಬಾಸ, ತೆಲಿಯಾಮುರ, ಬಿಶಾಲಗಢದಲ್ಲೂ ಅವಿರೋಧ ಗೆಲುವು ಕಂಡಿದೆ. ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆ ದಿನವೇ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಸೂಚನೆ ನೀಡಿದೆ. ತ್ರಿಪುರಾದ 16 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಿಜೆಪಿ ಅತೀ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 342 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇನ್ನು ಸಿಪಿಐ(ಎಂ) 218, ಕಾಂಗ್ರೆಸ್ 201, ತಿಪ್ರಾ ಮೋಥಾ ಪಕ್ಷ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಭಾರಿ ಭದ್ರತೆ, ಕೇಂದ್ರ ಸಶಸ್ತ್ರ ಪಡೆಯೂ ನಿಯೋಜನೆ
ಭಾರಿ ಭದ್ರತೆ ನಡುವೆ ತ್ರಿಪುರಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಯಾವುದೇ ರೀತಿ ಅಕ್ರಮಗಳಿಗೆ ಅವಕಾಶ ನೀಡದಿರಲು 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 4,600 ಚುನಾವಣಾ ಸಿಬ್ಬಂದಿ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪಡೆಗಳು ನಿಯೋಜನೆಗೊಂಡಿದೆ.














