ಒಡಿಶಾದಲ್ಲಿ ಹಸುವೊಂದರ ಹೊಟ್ಟೆಯಿಂದ ಪಶುವೈದ್ಯರು 40 ಕೆಜಿ ಪ್ಲಾಸ್ಟಿಕ್ ತೆಗೆದಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸೇವನೆಯಿಂದ ಹಸುವಿನ ಆರೋಗ್ಯ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆ ಮೂಲಕ ಪ್ಲಾಸ್ಟಿಕ್ ತೆಗೆದು ಹಸುವಿನ ಪ್ರಾಣ ಉಳಿಸಲಾಗಿದೆ.
ಹಸುವಿನ ದೇಹ ಸೇರಿದ್ದ 40 ಕೇಜಿ ಪ್ಲಾಸ್ಟಿಕ್:
ಒಡಿಶಾ: ಇಲ್ಲೊಂದು ಕಡೆ ಹಸುವಿನ ಹೊಟ್ಟೆ ಸೇರಿದ ಬರೋಬ್ಬರಿ 40 ಕೇಜಿ ಪ್ಲಾಸ್ಟಿಕ್‌ನ್ನು ಪಶು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತೆಗೆದಂತಹ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಬೆಹ್ರಾಂಪುರದಲ್ಲಿ ಈ ಘಟನೆ ನಡೆದಿದೆ. ಬೆಹ್ರಾಂಪುರದ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯ, ಸತ್ಯನಾರಾಯಣ್ ಕರ್ ನೇತೃತ್ವದ ಪಶುವೈದ್ಯರ ತಂಡ ಶಸ್ತ್ರಚಿಕಿತ್ಸೆ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ದೇಹ ಸೇರಿದ್ದ ಸುಮಾರು 40 ಕೇಜಿ ಪ್ಲಾಸ್ಟಿಕನ್ನು ಹೊರಗೆ ತೆಗೆದಿದ್ದಾರೆ. ಈ ಹಸುವನ್ನು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಇಡಲಾಗುವುದು ಎಂದು ಜಿಲ್ಲಾ ಪಶುವೈದ್ಯಾಧಿಕಾರಿ ಅಂಜನ್‌ಕುಮಾರ್ ದಾಸ್ ಹೇಳಿದ್ದಾರೆ.
ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಹಸು:
ಎರಡು ದಿನಗಳಿಂದ ಸ್ಥಳದಲ್ಲೇ ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸದ ಕಾರಣ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಹಸುವನ್ನು ಭಾನುವಾರ ಹಿಲ್ಪಟ್ನದಿಂದ ಪ್ರಾಣಿಗಳಿಗಾಗಿ ಇರುವ ಆಂಬ್ಯುಲೆನ್ಸ್‌ನಲ್ಲಿ ಬೆಹ್ರಾಂಪುರಕ್ಕೆ ಕರೆತರಲಾಯ್ತು. ಹಸುವಿಗೆ ಮಲ ಮತ್ತು ಮೂತ್ರ ವಿಸರ್ಜನೆ ಸಮಸ್ಯೆ ಇತ್ತು ಮತ್ತು ಅದು ನೋವಿನಿಂದ ಹೊಟ್ಟೆ ಯತ್ತ ಒದೆಯುತ್ತಿತ್ತು. ನಂತ ಹಸುವಿನ ಕ್ಲಿನಿಕಲ್ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿರುವುದು ಕಂಡುಬಂದಿದೆ ಎಂದು ವೈದ್ಯ ಸತ್ಯನಾರಾಯಣ್ ಕರ್ ಹೇಳಿದರು. ಜನ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿದ ಅಳಿದುಳಿದ ಆಹಾರಗಳನ್ನು ಪ್ಲಾಸ್ಟಿಕ್ ಸಮೇತ ಬೀದಿ ದನಗಳು ತಿನ್ನುತ್ತವೆ ಇದರಿಂದ ಅಂತಿಮವಾಗಿ ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿರುತ್ತವೆ. ಹೊಟೆಯಲ್ಲಿ ಪ್ಲಾಸ್ಟಿಕ್‌ನ ಶೇಖರಣೆಯು ಪ್ರಾಣಿಗಳ ಕರುಳುಗಳು ಮುಚ್ಚಿಹೋಗುವುದಕ್ಕೆ ಕಾರಣವಾಗುತ್ತದೆ. ಜೊತೆಗೆ ಹೊಟ್ಟೆಯ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದನ್ನು ದೀರ್ಘಕಾಲದವರೆಗೆ ಗಮನಿಸದೆ ಬಿಟ್ಟರೆ, ಪ್ರಾಣಿ ಸಾಯುತ್ತದೆ ಎಂದು ಅವರು ಹೇಳಿದರು.
2023 ರಲ್ಲಿ ತಮ್ಮ ನೇತೃತ್ವದ ಪಶುವೈದ್ಯರ ತಂಡವು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಬೀಡಾಡಿ ದನವೊಂದರ ಹೊಟ್ಟೆಯಿಂದ ಸುಮಾರು 30 ಕೆಜಿ ಪ್ಲಾಸ್ಟಿಕ್‌ಗಳನ್ನು ಹೊರತೆಗೆದಿದ್ದೆವು ಎಂದು ಅವರು ಹೇಳಿದರು.
ನಾವು ಎಚ್ಚೆತ್ತುಕೊಳ್ಳುವುದು ಯಾವಾಗ?
ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ ವರ್ಷಗಳ ಕಾಲ ಈ ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರಿಕೊಂಡು ಮಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಬರೀ ಇಷ್ಟೇ ಅಲ್ಲ ಇತ್ತೀಚೆಗೆ ಸಂಭವಿಸಿದ ಕೆಲ ಪ್ರವಾಹಗಳು ಕೂಡ ಈ ಪ್ಲಾಸ್ಟಿಕ್‌ನ ರಾಕ್ಷಸೀಯ ಮುಖವನ್ನು ಪರಿಚಯಿಸಿತ್ತು, ಪ್ರವಾಹ ಪೀಡಿತ ಪ್ರದೇಶದಲ್ಲಿ ನದಿಯ ತುಂಬಾ ಪ್ಲಾಸ್ಟಿಕ್ ಬಾಟಲಿಗಳು ತೇಲಿ ಬಂದ ವೀಡಿಯೋವೊಂದು ಭಾರಿ ವೈರಲ್ ಆಗಿತ್ತು. ಪ್ಲಾಸ್ಟಿಕ್‌ನಿಂದ ಇಷ್ಟೊಂದು ಸಮಸ್ಯೆ ಆದರೂ ನಮ್ಮ ಜನ ಬಳಸಿದ ಪ್ಲಾಸ್ಟಿಕ್‌ನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಬಗ್ಗೆ ಯೋಚನೆಯೂ ಮಾಡುವುದಿಲ್ಲ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದಕ್ಕಾಗಿ, ನಗರಗಳನ್ನು ಸ್ವಚ್ಛವಾಗಿ ಇಡುವುದಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಜಸ್ಟ್ ಹಸಿಕಸ ಹಾಗೂ ಒಣಗಿದ ಕಸವನ್ನು ಪ್ರತ್ಯೇಕಗೊಳಿಸಿ ನೀಡಿ ಎಂದರೆ ಜನ ಮಾತ್ರ ನಾಯಿ ಬಾಲ ಡೊಂಕು ಎಂಬಂತೆ ಕಸವನ್ನು ಮಿಕ್ಸ್ ಮಾಡಿ ಕೊಟ್ಟು ಪೌರ ಕಾರ್ಮಿಕರಿಗೂ ತೊಂದರೆ ಮಾಡುತ್ತಾರೆ. ಇದರ ಪರಿಣಾಮವೇ ನಗರದ ಅಲ್ಲಲ್ಲಿ ರಾಶಿ ಬಿದ್ದಿರುವ ಕಸಗಳು, ಈ ಕಸ ನಗರದ ಪರಿಸರಕ್ಕೆ ಮಾತ್ರ ಹಾನಿ ಮಾಡ್ತಾ ಇಲ್ಲ, ಬೀದಿ ನಾಯಿ ಹಾಗೂ ಬೀದಿ ಹಸುಗಳ ಹೊಟ್ಟೆ ಸೇರಿ ಅವುಗಳನ್ನು ಅಸ್ವಸ್ಥಗೊಳಿಸುತ್ತಿದೆ. ಒಮ್ಮೆ ಪ್ಲಾಸ್ಟಿಕ್ ಹೊಟ್ಟೆ ಸೇರಿದರೆ ಅದು ಅಲ್ಲೇ ಶೇಖರಿಸಲ್ಪಟ್ಟು ಪ್ರಾಣಿಗಳು ಅನಾರೋಗ್ಯಕ್ಕೀಡಾಗುತ್ತವೆ.
ಒಟ್ಟಿನಲ್ಲಿ ಜನರ ಅನಾಗರಿಕ ವರ್ತನೆ ಭೂಮಿಯ ಸರ್ವನಾಶ ಮಾಡುತ್ತಿದೆ. ಜೊತೆಗೆ ಪ್ರಾಣಿಗಳ ಜೀವನಕ್ಕೂ ಸಂಚಾಕಾರ ತರುತ್ತಿದೆ. ಹೀಗಾಗಿ ಒಂದು ಸಣ್ಣ ಪ್ಲಾಸ್ಟಿಕ್‌ನ್ನು ಭೂಮಿಗೆಸೆಯುವ ಮೊದಲು ಮನುಷ್ಯರೆಲ್ಲರೂ ಯೋಚನೆ ಮಾಡಬೇಕಿದೆ. ಇರುವುದೊಂದೇ ಭೂಮಿ ಈ ಕಾರಣಕ್ಕೆ ಮುಂದಿನ ತಲೆಮಾರಿಗೆ ಈ ಭೂಮಿಯನ್ನು ಜೋಪಾನವಾಗಿಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...
