ನವಲಗುಂದ ತಾಲೂಕಿನಲ್ಲಿ ದೇಸಿ ತಳಿಯ ಹಸುವೊಂದು ಒಂದೇ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿದೆ. ಈ ಅಪರೂಪದ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಹಸುವಿನ ಮಾಲೀಕರು ಲಕ್ಷ್ಮೀದೇವಿಯ ಆಗಮನ ಎಂದು ಭಾವಿಸಿದ್ದಾರೆ. ಜಾನುವಾರು ಅಭಿವೃದ್ಧಿ ಅಧಿಕಾರಿಗಳು ಇದನ್ನು ವೈಜ್ಞಾನಿಕವಾಗಿ ಗಮನಾರ್ಹ ಘಟನೆ ಎಂದಿದ್ದಾರೆ.

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡ್ಡದಕೇರಿ ಓಣಿಯಲ್ಲಿ ಅಪರೂಪದ ಘಟನೆಯೊಂದು ಸಂಚಲನ ಮೂಡಿಸಿದೆ. ಸಯ್ಯದಭಾಷಾ ಹುಗ್ಗಿ ಎಂಬುವವರ ದೇಸಿ ತಳಿಯ ಹಸು ಒಂದು ಹೆಣ್ಣು ಮತ್ತು ಎರಡು ಗಂಡು ಕರುಗಳಿಗೆ ಜನ್ಮ ನೀಡಿದೆ. ಮೂರು ಕರುಗಳೂ ಆರೋಗ್ಯವಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಸಯ್ಯದಭಾಷಾ ಅವರು ತಮ್ಮ ಹಸುವಿಗೆ ಮತ್ತು ಕರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 'ಒಂದೇ ಬಾರಿಗೆ ಮೂರು ಕರುಗಳ ಜನನವು ಲಕ್ಷ್ಮೀ ದೇವಿಯ ಆಗಮನದಂತೆ ಭಾಸವಾಗುತ್ತಿದೆ' ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಈ ಹಸುವಿಗೆ ಜಾನುವಾರು ಅಭಿವೃದ್ಧಿ ಅಧಿಕಾರಿ ಹಸನಸಾಬ್ ಸವಣೂರ ಕೃತಕ ಗರ್ಭಧಾರಣೆ ನಡೆಸಿದ್ದರು. 'ದೇಸಿ ತಳಿಯ ಹಸುವಿನಲ್ಲಿ ಇಂತಹ ಘಟನೆಯು ಅತ್ಯಂತ ಅಪರೂಪ. ಇದು ವೈಜ್ಞಾನಿಕವಾಗಿಯೂ ಗಮನಾರ್ಹವಾದ ಸಂಗತಿಯಾಗಿದೆ ಎಂದು ಹಸನಸಾಬ್ ತಿಳಿಸಿದ್ದಾರೆ.

ಗುಡ್ಡದಕೇರಿ ಓಣಿಯಲ್ಲಿ ಈ ಘಟನೆಯಿಂದ ಸ್ಥಳೀಯ ರೈತರು ಮತ್ತು ಜನರು ಆಶ್ಚರ್ಯಗೊಂಡಿದ್ದಾರೆ. ಸಯ್ಯದಭಾಷಾ ಅವರ ಮನೆಗೆ ಭೇಟಿನೀಡಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ. 'ಇದು ದೇವರ ಕೃಪೆ'ಎನ್ನುತ್ತಿದ್ದಾರೆ ಸ್ಥಳೀಯರು. ಈ ಘಟನೆಯು ದೇಸಿ ತಳಿಯ ಜಾನುವಾರುಗಳ ಸಾಮರ್ಥ್ಯ ತೋರಿಸಿದೆ.