ಕೇರಳದ ವರ್ಕಲಾ ಬೀಚ್‌ನಲ್ಲಿ ಮೀನುಗಾರರ ಬಲೆಗೆ ಸಿಲುಕಿ ದಡಕ್ಕೆ ಬಂದಿದ್ದ ಬೃಹತ್ ಶಾರ್ಕ್ ಮೀನನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸೇರಿ ರಕ್ಷಿಸಿದ್ದಾರೆ. ಹಲವಾರು ಗಂಟೆಗಳ ಸತತ ಪ್ರಯತ್ನದ ನಂತರ, ಬೋಟ್‌ಗಳ ಸಹಾಯದಿಂದ ಮೀನನ್ನು ಯಶಸ್ವಿಯಾಗಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ.
ಮೀನುಗಾರನೋರ್ವನ ಬಲೆಗೆ ಸಿಲುಕಿ ಭಾರಿ ಗಾತ್ರದ ಶಾರ್ಕ್ ಮೀನೊಂದು ಕೇರಳ ಸಮುದ್ರ ತೀರಕ್ಕೆ ಬಂದಿದೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಹಾಗೂ ಪ್ರವಾಸಿಗರು ಈ ಬೃಹತ್ ಗಾತ್ರದ ಮೀನನ್ನು ಮತ್ತೆ ಸಮುದ್ರಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ದುರ್ಬಲ ಜೀವವೊಂದಕ್ಕೆ ಸಹಾಯ ಮಾಡಲು ಜನರು ಒಗ್ಗೂಡಿದಾಗ, ಅದು ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ. ಅದೇ ರೀತಿಯ ಘಟನೆಯೊಂದು ಕೇರಳದಲ್ಲಿ ನಡೆಯಿತು. ಕೇರಳದ ವರ್ಕಲಾ ಬೀಚ್‌ಗೆ ಭಾರಿ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಸಿಲುಕಿ ಬಂದಿದ್ದು, ನಂತರ ಅದನ್ನು ಮೀನುಗಾರರ ಸಹಾಯದಿಂದಲೇ ವಾಪಸ್ ಸಮುದ್ರಕ್ಕೆ ಕಳುಹಿಸಲಾಯಿತು. ಅಲ್ಲಿದ್ದ ಸ್ಥಳೀಯರು ಮತ್ತು ಪ್ರವಾಸಿಗರು ಒಟ್ಟಾಗಿ ಸಿಲುಕಿಕೊಂಡಿದ್ದ ತಿಮಿಂಗಿಲ ಶಾರ್ಕ್ ಅನ್ನು ರಕ್ಷಿಸಿ ಸಮುದ್ರಕ್ಕೆ ಬಿಡುವ ಪ್ರಯತ್ನ ಮಾಡಿದರು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಠಿಣ ರಕ್ಷಣಾ ಪ್ರಯತ್ನದ ನಂತರ ಡಜನ್‌ಗಟ್ಟಲೇ ಜನರು ಬೃಹತ್ ಆದರೆ ಸೌಮ್ಯವಾದ ಈ ಜೀವಿಯನ್ನು ಆಳವಾದ ನೀರಿನ ಕಡೆಗೆ ತಳ್ಳಿದರು.
ಈ ವೀಡಿಯೋವನ್ನು ಸರ್ಫರ್ @surferboy_varkala ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಗುಂಪೊಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಸಮುದ್ರದಲ್ಲಿ ಸರ್ಫಿಂಗ್‌ಗೆ ಹೋಗುತ್ತಿದ್ದಾಗ ಈ ಬೃಹತ್ ಗಾತ್ರದ ಶಾರ್ಕ್‌ನ್ನು ನೋಡಿದ್ದಾರೆ. ಆ ಸಮಯದಲ್ಲಿ, ಕೆಲವು ಸ್ಥಳೀಯರು ಮತ್ತು ಪ್ರವಾಸಿಗರು ಈಗಾಗಲೇ ಆ ಬೃಹತ್ ಜೀವಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು. ಅವರ ಪ್ರಕಾರ, ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿಕೊಂಡ ನಂತರ ಶಾರ್ಕ್ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದಿದೆ. ಇದನ್ನು ನೀರಿಗೆ ಬಿಡಲು ಜನರ ಗಂಟೆಗಳ ಪ್ರಯತ್ನದ ಹೊರತಾಗಿಯೂ ಅದು ಆರಂಭದಲ್ಲಿ ಈಜಲು ವಿಫಲವಾಗಿ ಕಡಲತೀರದಲ್ಲೇ ಇತ್ತು.
ಇದನ್ನೂ ಓದಿ: ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ
ನಂತರ ಇದು ಬರಿಗೈಲಿ ಸಾಧ್ಯವಿಲ್ಲ ಎಂದು ತಿಳಿದು ಎರಡು ಬೋಟ್‌ಗಳ ಸಹಾಯದಿಂದ ಮೀನುಗಾರರು ಶಾರ್ಕ್‌ನ ಬಾಲದ ಸುತ್ತ ಹಗ್ಗವನ್ನು ಕಟ್ಟಿ ಅದನ್ನು ನಿಧಾನವಾಗಿ ಆಳವಾದ ನೀರಿನತ್ತ ಎಳೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅಂತಿಮವಾಗಿ ಬೋಟು ಹಾಗೂ ಮೀನುಗಾರರ ಸಹಾಯದಿಂದ ಈ ರಕ್ಷಣಾ ಕಾರ್ಯಾಚರನೆ ಯಶಸ್ವಿಯಾಗಿದೆ. ಆದರೆ ಈ ಕಾರ್ಯಾಚರಣೆಯ ಸಮಯದಲ್ಲಿ ಶಾರ್ಕ್‌ನ ಒರಟಾದ ಮರಳಿನ ಕಾಗದದಂತಹ ಮೇಲೈಯಿಂದ ಅನೇಕರಿಗೆ ಗಾಯಗಳಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಅಪರಿಚಿತ ಪ್ರವಾಸಿಗರು ಹಾಗೂ ಸ್ಥಳೀಯರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಹಲವು ಬಾರಿ ಈ ಮೀನನ್ನು ಜನ ಸಮುದ್ರಕ್ಕೆ ತಳ್ಳಿದಾಗ ಬೀಸಿ ಬರುವ ಅಲೆಗಳು ಅಪ್ಪಳಿಸಿ ಅವು ಮತ್ತೆ ಸಮುದ್ರಕ್ಕೆ ಬರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಕೊನೆಗೆ ಮೀನು ಆಳ ಸಮುದ್ರಕ್ಕೆ ಸಾಗುತ್ತಿದ್ದಂತೆ ಅಲ್ಲಿ ಸೇರಿದ ವಿದೇಶಿ ಪ್ರವಾಸಿಗರು ಸೇರಿದಂತೆ ಅನೇಕರು ಖುಷಿಯಿಂದ ಕೇಕೆ ಹಾಕುವುದನ್ನು ಕಾಣಬಹುದು.
ಇದನ್ನೂ ಓದಿ: ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!


