42 ವರ್ಷಗಳ ಸೇವೆಯ ನಂತರ ಹೆಚ್‌ಎಎಲ್ ಉದ್ಯೋಗಿಯೊಬ್ಬರು ಕಂಪನಿಗೆ ಭಾವುಕ ನಮನ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿವೃತ್ತಿ ಎಂಬುದು ಅನೇಕರಿಗೆ ಬಹಳ ಭಾವುಕವಾದ ಕ್ಷಣ. ಹಲವು ದಶಕಗಳ ಕಾಲ ಕೆಲಸ ಮಾಡಿದ ನಂತರ ನಾಳೆ ಈ ಕಚೇರಿಗೆ ನಾನು ಬರುವುದಿಲ್ಲ ಬಂದರೂ ಉದ್ಯೋಗಿಯಾಗಿ ಅಲ್ಲ ಎಂಬ ವಿಚಾರವೇ ಅನೇಕರಿಗೆ ಬೇಸರ ತರಿಸುತ್ತದೆ. ಕೆಲವರು ತಮಗಿಷ್ಟು ವರ್ಷ ಜೀವನ ನೀಡಿದ ಸಂಸ್ಥೆಯನ್ನು ದೇವರಂತೆ ಕಾಣುತ್ತಾರೆ. ಸಂಸ್ಥೆಯ ಮೇಲೆ ಅಪಾರ ಗೌರವ ಅವರಿಗಿರುತ್ತದೆ. ನಿವೃತ್ತಿ ಸಮಯ ಬರುತ್ತಿದ್ದಂತೆ ಕೈ ಮುಗಿದು ಭಾವುಕರಾಗಿ ಮುಂದೆ ಸಾಗುತ್ತಾರೆ. ಅದೇ ರೀತಿ ಈಗ ನಿವೃತ್ತಿಯಾದ ವ್ಯಕ್ತಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಚ್‌ಎಎಲ್ ಉದ್ಯೋಗಿಯ ಭಾವುಕ ನಮನ:

ಶ್ರೀಶಾ ಭಾರದ್ವಾಜ್‌ ಎಂಬುವವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಹೆಚ್‌ಎಎಲ್ ಕಾರ್ಖಾನೆ ಮುಂದೆ ಒಂದು ಭಾವುಕ ಕ್ಷಣಕ್ಕೆ ನಾನು ಸಾಕ್ಷಿಯಾದೆ. ಒಬ್ಬ ವೃದ್ಧ ಸಂಭಾವಿತ ವ್ಯಕ್ತಿ ತನ್ನ ಪಾದರಕ್ಷೆಗಳನ್ನು ಪಕ್ಕಕ್ಕೆ ಇರಿಸಿ, ಕಂಪನಿಯ ದ್ವಾರಗಳಿಗೆ ಕೃತಜ್ಞತೆಯಿಂದ ನಮಸ್ಕರಿಸಿದರು. ಈ ಬಗ್ಗೆ ಅವರನ್ನು ಕೇಳಿದಾಗ, ಅವರು ಈ ಸಂಸ್ಥೆಗೆ 42 ವರ್ಷಗಳ ಸಮರ್ಪಿತ ಸೇವೆಯ ನಂತರ ಇದು ತಮ್ಮ ಕೊನೆಯ ದಿನ ಎಂದು ಅವರು ಹೇಳಿದರು.ಒಂದೇ ವರ್ಷದಲ್ಲಿ ಅನೇಕರು 4 ಉದ್ಯೋಗಗಳನ್ನು ಬದಲಾಯಿಸುವ ಸಮಯದಲ್ಲಿ, ಅವರ ಬದ್ಧತೆ, ಪರಿಶ್ರಮ ಮತ್ತು ನಿಷ್ಠೆಯು ಒಂದು ಉಜ್ವಲ ಉದಾಹರಣೆ ಇದಾಗಿದೆ. ಹೆಚ್‌ಎಎಲ್‌ನಂತಹ ಸಂಸ್ಥೆಗಳು ಇಂದಿಗೂ ವಿಶ್ವಾಸಾರ್ಹ ಮತ್ತು ಗೌರವಾನ್ವಿತವಾಗಿ ಉಳಿದಿರುವುದು ಇಂತಹ ಕಣ್ಣಿಗೆ ಕಾಣದ ಹೀರೋಗಳಿಂದಲೇ, ಈ ಸಂಭಾವಿತ ವ್ಯಕ್ತಿಗೆ ಮತ್ತು ಇದೇ ರೀತಿ ಕಠಿಣ ಪರಿಶ್ರಮದಿಂದ ಒಂದು ಪರಂಪರೆಯನ್ನು ನಿರ್ಮಿಸಿದ ಅಸಂಖ್ಯಾತ ಇತರರಿಗೆ ಹ್ಯಾಟ್ಸ್ ಆಫ್ ಆಫ್ ಎಂದು ಅವರು ಬರೆದುಕೊಂಡಿದ್ದಾರೆ.

ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಫೋಟೋದಲ್ಲಿ ವ್ಯಕ್ತಿಯೊಬ್ಬರು ಹೆಚ್‌ಎಎಲ್‌ ಕಂಪನಿ ಮುಂದೆ ತಮ್ಮ ಚಪ್ಪಲಿಯನ್ನು ಪಕ್ಕಕ್ಕೆ ಇರಿಸಿ ಕೈ ಮುಗಿಯುತ್ತಿರುವ ದೃಶ್ಯವಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಪೋಸ್ಟ್ ನೋಡಿದ ಒಬ್ಬರು ಸರ್ಕಾರಿ ಕೆಲಸ ಸಿಕ್ಕ ಮೇಲೆ ಯಾರೂ ಕೆಲಸ ಬದಲಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಿನಂತೆ ಈಗ ಎಲ್ಲೂ ಕೆಲಸದ ಭದ್ರತೆ ಈಗ ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಂದೇ ಸಂಸ್ಥೆಗೆ ಅಂಟಿಕೊಂಡು ಇರುವ ಕಾಲ ಕಳೆದೋಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ, ಆರ್ಥಿಕ ಸೌಲಭ್ಯಗಳನ್ನು ನೀಡಿದರೆಷ್ಟೇ ಬದ್ಧತೆ, ಸಮರ್ಪಣೆ ಬರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಮಗೆ, ಬಿಇಎಲ್ ಕಾರ್ಖಾನೆ ಅಂತಹ ಭಾವನೆಗಳನ್ನು ಹುಟ್ಟುಹಾಕುತ್ತದೆ ಇಂದಿಗೂ, ನಾವು ಆ ದ್ವಾರಗಳ ಮೂಲಕ ಹಾದು ಹೋದಾಗ, ಕೃತಜ್ಞತೆಯ ಭಾವನೆ ಸ್ವಾಭಾವಿಕವಾಗಿಯೇ ಉಕ್ಕಿ ಹರಿಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ನಿವೃತ್ತಿ ಎಂಬುದು ಮೊದಲು ಕೆಲಸಕ್ಕೆ ಖುಷಿ ಎನಿಸಿದರೆ ಕೆಲ ದಿನ ಕಳೆಯುತ್ತಿದ್ದಂತೆ ಕೆಲಸಕ್ಕೆ ಹೋಗುವುದಕ್ಕೆ ಇಲ್ಲ ಎಂಬ ವಿಚಾರವೇ ನಂತರ ಬೇಸರ ಉಂಟು ಮಾಡುತ್ತದೆ. ಮುಂಜಾನೆಯ ಚಟುವಟಿಕೆಗಳು ಆ ಉತ್ಸಾಹ ನಿಧಾನವಾಗಿ ಕ್ಷೀಣಿಸುತ್ತದೆ. ಅನೇಕರು ನಿವೃತ್ತಿ ನಂತರ ಸಮಯ ಕಳೆಯುವುದಕ್ಕೆ ಹಲವು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ನಿವೃತ್ತಿಯ ನಂತರ ಜೀವನ ನಡೆಸಲು ಸಾಕಷ್ಟು ಹಣಕಾಸು ಯೋಜನೆ ಮತ್ತು ಹೂಡಿಕೆ ಮಾಡುವುದು ಬಹಳ ಮುಖ್ಯ. ಭಾರತದಲ್ಲಿ ಆರಾಮದಾಯಕ ನಿವೃತ್ತಿ ಜೀವನಕ್ಕಾಗಿ ಒಬ್ಬರಿಗೆ ₹3.5 ಕೋಟಿಗಳಷ್ಟು ದೊಡ್ಡ ಮೊತ್ತ ಬೇಕಾಗಬಹುದು ಎಂದು ವರದಿಗಳು ಹೇಳುತ್ತವೆ. ಈ ಮೊತ್ತ ಜೀವನಶೈಲಿ, ಆರೋಗ್ಯ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಎಗ್‌ಪ್ರೀಜ್‌ಗೆಂದು ಡಾಕ್ಟರ್ ಬಳಿ ಹೋದ ನಟಿಗೆ ಶಾಕ್‌: ಎಗ್‌ಪ್ರೀಜ್ ಮಾಡಲು ಬಯಸಿದ್ರೆ ಯಾವ ಏಜ್ ಬೆಸ್ಟ್?

ಇದನ್ನೂ ಓದಿ: ಹಾರ್ಟ್ ಡಾಕ್ಟರೇ ಹಾರ್ಟ್ ಅಟ್ಯಾಕ್‌ಗೆ ಬಲಿ: ಡ್ಯೂಟಿ ರೌಂಡ್ಸ್ ವೇಳೆಯೇ ದುರಂತ