ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಳಗಾವಿ ಅಧಿವೇಶನಕ್ಕೆ ಮರಳುತ್ತಿದ್ದ ಸಚಿವರು ಮತ್ತು ಶಾಸಕರು ಹವಾಮಾನ ವೈಪರೀತ್ಯದಿಂದ ವಿಳಂಬವಾಗಿ ಆಗಮಿಸಿದರು. ದಟ್ಟ ಮಂಜಿನಿಂದಾಗಿ ಇಂಡಿಗೋ ವಿಮಾನ ತಡವಾಗಿ ಟೇಕ್‌ಆಪ್ ಆದ ಕಾರಣ, ಸದನದಲ್ಲಿ ಪಾಲ್ಗೊಳ್ಳುವ ಹಾಗೂ ಮುಂದಿನ ಯೋಜನೆಗಳು ವ್ಯತ್ಯಯ
ಬೆಳಗಾವಿ (ಡಿ.16): ನವದೆಹಲಿಯಲ್ಲಿ ಹವಾಮಾನ ವೈಪ್ಯರೀತ್ಯದಿಂದ ದಟ್ಟ ಹೊಗೆ ಆವರಿಸಿ ವಿಮಾನಗಳ ಹಾರಾಟಕ್ಕೆ ಅವಕಾಶ ಸಿಗದ್ದರಿಂದ ಸೋಮವಾರ ಇಂಡಿಗೋ ವಿಮಾನದಲ್ಲಿ ಆಗಮಿಸಿ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಬೇಕಿದ್ದ ಕೆಲ ಸಚಿವರು, ಶಾಸಕರು ತಡವಾಗಿ ಬೆಳಗಾವಿ ಬಂದರು.
ದೆಹಲಿ ಪ್ರತಿಭಟನೆಯಲ್ಲಿ ಸಚಿವರು, ಶಾಸಕರು
ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರು ಸೋಮವಾರ ಬೆಳಗ್ಗೆ 5.30ಕ್ಕೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಹೊರಟು, 8.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು.
ವರ್ಕೌಟ್ ಆಗದ ಪ್ಲ್ಯಾನ್:
ದೆಹಲಿಯಿಂದ ನೇರವಾಗಿ ಬೆಳಗಾವಿಗೆ ವಿಮಾನ ಇರುವ ಕಾರಣ, ಅಧಿವೇಶನದ ಸಮಯಕ್ಕೂ ಮುಂಚೆ ಬಂದಿಳಿದು, ಸದನದಲ್ಲಿ ಪಾಲ್ಗೊಂಡು, ಬಳಿಕ ದಾವಣಗೆರೆಗೆ ಶಾಮನೂರರ ಅಂತಿಮ ದರ್ಶನಕ್ಕೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ, ವಿಮಾನ ತಡವಾಗಿ ಟೇಕ್‌ಆಪ್ ಆದ ಕಾರಣ, ಮಧ್ಯಾಹ್ನ 12.15ಕ್ಕೆ ಸಾಂಬ್ರಾ ನಿಲ್ದಾಣಕ್ಕೆ ಬಂದಿಳಿದರು.
ವಿಮಾನದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್, ಶರಣ ಪ್ರಕಾಶ ಪಾಟೀಲ, ಶಾಸಕರಾದ ಎನ್.ಎಚ್.ಕೋನರಡ್ಡಿ, ರಾಘವೇಂದ್ರ ಇಟ್ನಾಳ, ಪರಿಷತ್ ಸದಸ್ಯ ಸಲೀಂ ಅಹ್ಮದ್ ಸೇರಿದಂತೆ 20ಕ್ಕೂ ಹೆಚ್ಚು ಜನಪ್ರತಿನಿಧಿಗಳು, ಮಾಜಿ ಶಾಸಕರು, ಹಲವು ಮುಖಂಡರು ಇದ್ದರು.


