ಚೆನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ವೈದ್ಯಕೀಯ ಸಿಬ್ಬಂದಿಯಲ್ಲಿ ಆಘಾತ ಮೂಡಿಸಿದೆ. 39 ವರ್ಷದ ವೈದ್ಯ ಗ್ರಾಡ್ಲಿನ್ ರಾಯ್ ರೋಗಿಗಳ ತಪಾಸಣೆ ವೇಳೆyE ಹೃದಯಾಘಾತಕ್ಕೊಳಗಾಗಿದ್ದಾರೆ.

ಚೆನ್ನೈ: ಹೃದಯ ಶಸ್ತ್ರಚಿಕಿತ್ಸಕರೇ ಹೃದಯಘಾತಕ್ಕೆ ಬಲಿಯಾದ ದುರಂತ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದ್ದು, ಯುವ ವೈದ್ಯನ ಸಾವು ವೈದ್ಯಕೀಯ ಸಿಬ್ಬಂದಿಯಲ್ಲಿ ತೀವ್ರ ಆಘಾತವನ್ನು ಉಂಟು ಮಾಡಿದೆ. ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಯ ರೌಂಡ್ಸ್ ವೇಳೆಯೇ 39ರ ಹರೆಯವ ವೈದ್ಯ ಗ್ರಾಡ್ಲಿನ್ ರಾಯ್ ಅವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಯಲ್ಲೇ ಈ ಘಟನೆ ನಡೆದಿದ್ದು, ಅವರನ್ನು ಉಳಿಸಿಕೊಳ್ಳುವುದಕ್ಕೆ ಅವರ ಸಹೋದ್ಯೋಗಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ವೈದ್ಯ ಗ್ರಾಡ್ಲಿನ್ ರಾಯ್ ಅವರು ಚೆನ್ನೈನ ಸವೀತಾ ಮೆಡಿಕಲ್ ಕಾಲೇಜಿನಲ್ಲಿ ಕನ್ಸಲ್ಟೆಂಟ್ ಕಾರ್ಡಿಕ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದರು.

ತುರ್ತಾಗಿ ಎಲ್ಲಾ ಮಾಡಿದರೂ ಬದುಕುಳಿಯದ ವೈದ್ಯ:

ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ನ್ಯೂರೋಲಾಜಿಸ್ಟ್ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಡಾ. ರಾಯ್ ಅವರ ಸಹೋದ್ಯೋಗಿಗಳು ಅವರನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರು ಆದರೆ ಸಾಧ್ಯವಾಗಲಿಲ್ಲ. ಡಾಕ್ಟರ್ ರಾಯ್ ಅವರ ಸಹೋದ್ಯೋಗಿಗಳು ಅವರನ್ನು ಉಳಿಸಲು ಧೃಡನಿಶ್ಚಯದಿಂದ ಶ್ರಮಿಸಿದರು. ಘಟನೆ ನಡೆದ ಕೂಡಲೇ ಅವರಿಗೆ ಸಿಪಿಆರ್, ಸ್ಟೆಂಟಿಂಗ್‌ನೊಂದಿಗೆ ತುರ್ತು ಆಂಜಿಯೋಪ್ಲ್ಯಾಸ್ಟಿ, ಇಂಟ್ರಾ-ಮಹಾಪಧಮನಿಯ ಬಲೂನ್ ಪಂಪ್( intra-aortic balloon pump) ಇಸಿಎಂಒ ಕೂಡ ಮಾಡಿದರು. ಆದರೆ ಅವರ ಎಡ ಮುಖ್ಯ ಅಪಧಮನಿಯ ಅಡಚಣೆಯಿಂದಾಗಿ ಭಾರಿ ಹೃದಯ ಸ್ತಂಭನ ಉಂಟಾಗಿದ್ದರಿಂದ ಈ ಹಾನಿಯನ್ನು ಯಾವುದೇ ವೈದ್ಯಕೀಯ ಚಿಕಿತ್ಸೆಯಿಂದ ಸರಿಪಡಿಸಲು ಸಾಧ್ಯವಾಗಲಿಲ್ಲ ಎಂದು ಡಾ. ಸುಧೀರ್‌ ಕುಮಾರ್ ಎಕ್ಸ್‌ನಲ್ಲಿ ಬರೆದಿದ್ದಾರೆ.

30ರಿಂದ 40ರ ಹರೆಯದ ವೈದ್ಯರಲ್ಲಿ ಹೆಚ್ಚುತ್ತಿರುವ ಹೃದಯಘಾತ ಸಮಸ್ಯೆ

ಇದು ಹೊಸ ಪ್ರಕರಣವಲ್ಲ, 30 ಮತ್ತು 40 ರ ಹರೆಯದ ಯುವ ವೈದ್ಯರು ಹಠಾತ್ ಹೃದಯಾಘಾತದಿಂದ ಬಳಲುತ್ತಿರುವ ಆತಂಕಕಾರಿ ಪ್ರಕರಣ ಹೆಚ್ಚಾಗುತ್ತಿದೆ ಎಂದು ವೈದ್ಯ ಸುಧೀರ್‌ಕುಮಾರ್ ಅವರು ಹೇಳಿದ್ದಾರೆ. ದೀರ್ಘಕಾಲದ ಕೆಲಸದ ಸಮಯ ಇಂತಹ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವೈದ್ಯರು ಸಾಮಾನ್ಯವಾಗಿ ದಿನಕ್ಕೆ 12ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಕೆಲವೊಮ್ಮೆ ಒಂದೇ ಪಾಳಿಯಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ವೈದ್ಯರಿಗೆ ತೀವ್ರವಾದ ಒತ್ತಡವೂ ಇದೆ. ರೋಗಿಯ ಜೀವನ್ಮರಣ ನಿರ್ಧಾರಗಳ ನಿರಂತರ ಒತ್ತಡ, ರೋಗಿಯ ಹೆಚ್ಚಿನ ನಿರೀಕ್ಷೆಗಳು ಮತ್ತು ವೈದ್ಯಕೀಯ, ಕಾನೂನು ಕಾಳಜಿಗಳು ವೈದ್ಯರ ಮೇಲೆ ಪರಿಣಾಮ ಬೀರುತ್ತವೆ ಎಂದು ಸುಧೀರ್‌ಕುಮಾರ್ ಹೇಳಿದ್ದಾರೆ.

ಅನಾರೋಗ್ಯಕರ ಜೀವನಶೈಲಿ, ಅನಿಯಮಿತ ಊಟ, ದೈಹಿಕ ವ್ಯಾಯಾಮದ ಕೊರತೆ ಮತ್ತು ನಿರ್ಲಕ್ಷ್ಯದ ಆರೋಗ್ಯ ತಪಾಸಣೆಗಳು ಈ ರೀತಿಯ ಹಠಾತ್ ಹೃದಯಾಘಾತಕ್ಕೆ ಕಾರಣಗಳಾಗಿವೆ. ಕೆಲಸದಲ್ಲಿ ಉಂಟಾಗುವ ಮಾನಸಿಕ ಒತ್ತಡ, ಅದರಲ್ಲೂ ವಿಶೇಷವಾಗಿ ಸಂಪೂರ್ಣ ಶಕ್ತಿ ಕುಂದುವುದು, ಖಿನ್ನತೆ ಮತ್ತು ಆತಂಕವನ್ನು ಸಹ ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ ಇದರಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಎಂದು ವೈದ್ಯರಾದ ಸುಧೀರ್‌ಕುಮಾರ್ ಹೇಳಿದ್ದಾರೆ. ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ವೈದ್ಯ ಗ್ರಾಡ್ಲಿನ್ ರಾಯ್ ಅವರು ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾರೆ.

ಇದನ್ನೂ ಓದಿ: ಪತ್ನಿಯ ತಂಗಿ ಜೊತೆ ಮದ್ವೆಗೆ ಒತ್ತಾಯಿಸಿ ವಿವಾಹಿತನ ಹೈಡ್ರಾಮಾ

ಇದನ್ನೂ ಓದಿ: ಸಿನಿಮಾ ಸ್ಟೈಲ್ ಘಟನೆ: ಪ್ರೇಮಿಯ ಮದ್ವೆಯಾಗಲು ಓಡಿಹೋದ ಹುಡುಗಿ ಮದ್ವೆಯಾಗಿದ್ದು ಬೇರೆಯವನ