ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್‌ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು

ಗುಜರಾತ್‌ನ ಕರಾವಳಿಯಲ್ಲಿ 21 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಕರಾವಳಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ನೆಲೆಸಿರುವ ಎಲ್ಲ ಜನರನ್ನೂ ತೆರವು ಮಾಡಲಾಗುತ್ತಿದೆ.

cyclone biparjoy 2023 live updates on arabian sea impacts and disasters gujarat kannada news ash

ನವದೆಹಲಿ/ಅಹಮದಾಬಾದ್‌ (ಜೂನ್ 14, 2023): ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ‘ಬಿಪೊರ್‌ಜೊಯ್‌’ (ವಿಪತ್ತು) ಚಂಡಮಾರುತ ಗುಜರಾತಿನ ಕರಾವಳಿಯತ್ತ ಮುನ್ನುಗ್ಗಿ ಬರುತ್ತಿದ್ದು, ಗಂಟೆಗೆ 125ರಿಂದ 150 ಕಿ.ಮೀ. ವೇಗದಲ್ಲಿ ತೀರಕ್ಕೆ ಗುರುವಾರ ಸಂಜೆ ವೇಳೆಗೆ ಅಪ್ಪಳಿಸಲಿದೆ. ಈ ಚಂಡಮಾರುತ ಅತ್ಯಂತ ಬೃಹತ್‌ ಪ್ರಮಾಣದಲ್ಲಿ ಹಾನಿಯುಂಟು ಮಾಡುವ ಸಾಧ್ಯತೆ ಇದೆ. 7 ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಲಿದೆ, ಈ ಪೈಕಿ ಕಛ್‌, ದೇವಭೂಮಿ ದ್ವಾರಕಾ ಹಾಗೂ ಜಾಮ್‌ನಗರ ಜಿಲ್ಲೆಗಳಲ್ಲಿ ಅಗಾಧ ಹಾನಿಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಮಧ್ಯೆ, ಗುಜರಾತ್‌ನ ಕರಾವಳಿಯಲ್ಲಿ 21 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಕರಾವಳಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ನೆಲೆಸಿರುವ ಎಲ್ಲ ಜನರನ್ನೂ ತೆರವು ಮಾಡಲಾಗುತ್ತಿದೆ.

ಇದನ್ನು ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್‌ ಅಲರ್ಟ್‌: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಚಂಡಮಾರುತವು ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಗುಜರಾತಿನ ಜಖಾವು ಬಂದರು ಪ್ರದೇಶಕ್ಕೆ ಅಪ್ಪಳಿಸಲಿದೆ. ಇದು ಅಗಾಧ ಪ್ರಮಾಣದ ಹಾನಿಯುಂಟು ಮಾಡುವ ಸಾಮರ್ಥ್ಯ ಹೊಂದಿದೆ. ಬೆಳೆದು ನಿಂತ ಬೆಳೆಗಳು, ಮನೆ, ರಸ್ತೆ, ವಿದ್ಯುತ್‌, ಸಂವಹನ ಕಂಬಗಳಿಗೆ ಬಿರುಗಾಳಿಯಿಂದ ಹಾನಿಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ 6 ಮೀಟರ್‌ ಎತ್ತರದವರೆಗೂ ಅಲೆಗಳು ಸೃಷ್ಟಿಯಾಗಲಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಿದೆ. ಹೀಗಾಗಿ ಅಪಾಯದ ಅಂಚಿನಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಂಡಮಾರುತದಿಂದಾಗಿ ಕಛ್‌, ದ್ವಾರಕಾ, ಜಾಮ್‌ನಗರ, ಪೋರಬಂದರ್‌ ಜಿಲ್ಲೆಗಳಲ್ಲಿ ಜೂನ್ 15ರವರೆಗೂ 20ರಿಂದ 25 ಸೆಂ.ಮೀ.ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳು ಈ ಸಮಯದಲ್ಲಿ ಇಷ್ಟೊಂದು ಭಾರಿ ಮಳೆಯನ್ನು ಕಾಣುವುದಿಲ್ಲ. ಹೀಗಾಗಿ ಚಂಡಮಾರುತದಿಂದ ಹಲವು ತಗ್ಗು ಪ್ರದೇಶಗಳಿಗೆ ಮುಳುಗಡೆಯಾಗುವ ಆತಂಕವಿದೆ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

50 ಜನರ ರಕ್ಷಣೆ:
ಈ ನಡುವೆ, ದ್ವಾರಕಾದಿಂದ 40 ಕಿ.ಮೀ. ದೂರದಲ್ಲಿರುವ ‘ಕೀ ಸಿಂಗಾಪುರ’ ಎಂಬ ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 50 ಮಂದಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

ಪಾಕ್‌ನಲ್ಲಿ 1 ಲಕ್ಷ ಜನರ ಸ್ಥಳಾಂತರ
ಕರಾಚಿ: ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ಬಿಪೊರ್‌ಜೊಯ್‌ ಚಂಡಮಾರುತ ಪಾಕಿಸ್ತಾನ ಕರಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ಸರ್ಕಾರ 1 ಲಕ್ಷ ಜನರನ್ನು ಸ್ಥಳಾಂತರ ಮಾಡಲು ಸೇನೆಯನ್ನು ನಿಯೋಜನೆ ಮಾಡಿದೆ. ಬಿಪೊರ್‌ಜೊಯ್‌ ಚಂಡಮಾರುತ ಜೂನ್ 15ರಂದು ಸಿಂಧ್‌ ಕರಾವಳಿಗೆ ಗಂಟೆಗೆ 150 ಕಿಲೋಮೀಟರ್‌ ವೇಗವಾಗಿ ಅಪ್ಪಳಿಸುತ್ತದೆ. ಬಳಿಕ ಜೂ.17-18ರಂದು ಕಡಿಮೆಯಾಗುತ್ತದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಸಮುದ್ರ ತೀರದಿಂದ 10 ಕಿಲೋಮೀಟರ್‌ ದೂರದ ವರೆಗೂ ಜನರನ್ನು ಸ್ಥಳಾಂತರ ಆಗುವಂತೆ ಮನವಿ ಮಾಡಲಾಗಿದೆ. ಈ ಕಾರ್ಯಕ್ಕಾಗಿ ಸೇನೆ ಹಾಗೂ ನೌಕಾಪಡೆಗಳನ್ನು ನಿಯೋಜನೆ ಮಾಡಿ 43 ಪುರ್ನವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಿಂಧ್‌ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

56 ರೈಲು ಮಾರ್ಗ ಕಡಿತ, 90 ಸಂಚಾರ ರದ್ದು
ಅಹಮದಾಬಾದ್‌: ಗುಜರಾತ್‌ ಕರಾವಳಿಗೆ ಬಿಪೊರ್‌ಜೊಯ್‌ ಚಂಡಮಾರುತ ಅಪ್ಪಳಿಸುವ ಸೂಚನೆ ಮೇರೆಗೆ ಭಾರತೀಯ ರೈಲ್ವೆಯು 56 ರೈಲುಗಳ ಮಾರ್ಗ ಕಡಿತಗೊಳಿಸಿದ್ದು, 90 ರೈಲುಗಳನ್ನು ರದ್ದುಗೊಳಿಸಿದೆ. ಇದರಲ್ಲಿ ದ್ವಾರಕ, ಪೋರಬಂದರ್‌, ವೆರಾವಲ್‌, ಓಕಾ, ಗಾಂಧಿಧಾಮ್‌ಗೆ ಹೋಗುವ ರೈಲುಗಳ ಮಾರ್ಗ ಕಡಿತಗೊಳಿಸಿ ಅಹಮದಾಬಾದ್‌, ರಾಜಕೋಟ್‌ ಹಾಗೂ ಸುರೇಂದ್ರನಗರದಲ್ಲಿ ನಿಲ್ಲಿಸಲಾಗುವುದು. ಇದರೊಂದಿಗೆ ಡಬಲ್‌ ಕಂಟೈನರ್‌ ರೈಲುಗಳನ್ನು ನಿಲ್ಲಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ವಲಯ ತಿಳಿಸಿದೆ. ಇದರೊಂದಿಗೆ ಚಂಡಮಾರುತಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ರೈಲ್ವೆ, ತುರ್ತು ವೈದ್ಯಕೀಯ ರೈಲು, ಮರ ಕತ್ತರಿಸುವ ಯಂತ್ರ, ಜೆಸಿಬಿ ಹೀಗೆ ಹಲವು ರಕ್ಷಣಾ ಉಪಕರಣಗಳನ್ನು ಸಿದ್ಧಪಡಿಸಿಕೊಂಡಿದೆ. ಇದರೊಂದಿಗೆ ಭಾವನಗರ, ಪೋರಬಂದರ್‌, ವೆರಾವಲ್‌, ಓಕಾ, ದ್ವಾರಕ, ಕಂಭಾಲಿಯಾ, ಜಾಮ್‌ನಗರ್‌ ನಿಲ್ದಾಣಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

Latest Videos
Follow Us:
Download App:
  • android
  • ios