ರೋಗಿಯೊಬ್ಬರು ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳುವ ಮೂಲಕ ತಮ್ಮ ಬಿಲ್‌ನಲ್ಲಿ 44,000 ರೂ. ಉಳಿತಾಯ ಮಾಡಿದ್ದಾರೆ. ತಾವು ಪಡೆಯದ ಚಿಕಿತ್ಸೆಗೂ ಬಿಲ್‌ನಲ್ಲಿ ಹಣ ಸೇರಿಸಿರುವುದನ್ನು ಕಂಡುಕೊಂಡ ಅವರು, ಈ ಮೂಲಕ ಆಸ್ಪತ್ರೆ ಬಿಲ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮಹತ್ವವನ್ನು ಸಾರಿದ್ದಾರೆ.

ಬೆಂಗಳೂರು (ಮಾ.18): ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೈಗೆ ಸಿಗುವ ಲಕ್ಷಾಂತರ ರೂಪಾಯಿಗಳ ಬಿಲ್ ಕಂಡು ಸುಮ್ಮನೆ ಹಣ ಪಾವತಿಸುವವರೇ ಹೆಚ್ಚು. ಆದರೆ, ಜಾಗರೂಕತೆಯಿಂದ ಬಿಲ್ ಪರಿಶೀಲಿಸಿದರೆ ಎಷ್ಟು ಹಣ ಉಳಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಒಂದು 'ಐಟಮೈಸ್ಡ್ ಬಿಲ್' (ಪ್ರತಿ ವಸ್ತುವಿನ ವಿವರವಿರುವ ಪಟ್ಟಿ) ಕೇಳಿದ ಕಾರಣಕ್ಕೆ ರೋಗಿಯೊಬ್ಬರಿಗೆ ಸುಮಾರು 44,000 ರೂಪಾಯಿ ಉಳಿತಾಯವಾಗಿದೆ! ಅಚ್ಚರಿಯೆಂದರೆ, ಆ ರೋಗಿಗೆ ತಾನು ಮಾಡಿಸಿಕೊಳ್ಳದ ಶಸ್ತ್ರಚಿಕಿತ್ಸೆಗೂ ಬಿಲ್ ಹಾಕಲಾಗಿತ್ತು.

Add Asianetnews Kannada as a Preferred SourcegooglePreferred

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನ ಪ್ರಕಾರ, ಜನವರಿಯಲ್ಲಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಹೊರರೋಗಿಯಾಗಿ (Outpatient) ಚಿಕಿತ್ಸೆ ಪಡೆದ ವ್ಯಕ್ತಿಗೆ ಇನ್ಶೂರೆನ್ಸ್ ಕಳೆದ ನಂತರವೂ 1 ಲಕ್ಷ ರೂಪಾಯಿ (ಸುಮಾರು $1,100) ಬಿಲ್ ನೀಡಲಾಗಿತ್ತು. ಆ ರೋಗಿಯು ಸಾಲ ಮಾಡಿ ಹಣ ಕಟ್ಟಲು ಸಿದ್ಧರಾಗಿದ್ದರು. ಆದರೆ, ಸಹೋದ್ಯೋಗಿಯೊಬ್ಬರ ಸಲಹೆಯಂತೆ ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳಿದರು.

ಆಸ್ಪತ್ರೆ ನೀಡಿದ ಆರು ಪುಟಗಳ ಸುದೀರ್ಘ ಬಿಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬೆಚ್ಚಿಬೀಳುವ ಸತ್ಯಗಳು ಹೊರಬಂದಿದ್ದವು. ತಾನು ಆಸ್ಪತ್ರೆಯಲ್ಲಿದ್ದಾಗ ಎಂದಿಗೂ ಪಡೆದುಕೊಳ್ಳದ ಅನಸ್ತೇಷಿಯಾ ಕನ್ಸಲ್ಟೇಶನ್‌ಗೆ ಬರೋಬ್ಬರಿ 31,430 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಒಂದು 'ಸಪ್ಲೈ ಕಿಟ್' ಅನ್ನು ಎರಡು ಬಾರಿ ಬಿಲ್‌ನಲ್ಲಿ ಸೇರಿಸಲಾಗಿತ್ತು.

ಹೋರಾಟವಿಲ್ಲದೆಯೇ ಬಿಲ್ ಕಡಿತ!

ಈ ಬಗ್ಗೆ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗಕ್ಕೆ ಕರೆ ಮಾಡಿದಾಗ, ಸಿಬ್ಬಂದಿ ಯಾವುದೇ ವಿರೋಧ ವ್ಯಕ್ತಪಡಿಸದೆ ಈ ಬಗ್ಗೆ ಪರಿಶೀಲನೆ ಮಾಡೋದಾಗಿ ತಿಳಿಸಿದರು. ಎರಡು ವಾರಗಳ ನಂತರ, ಆ ತಪ್ಪು ಚಾರ್ಜ್‌ಗಳನ್ನು ತೆಗೆದುಹಾಕಲಾಯಿತು. ಇದರಿಂದ 1 ಲಕ್ಷ ರೂಪಾಯಿ ಇದ್ದ ಬಿಲ್ ಕೇವಲ 57,000 ರೂಪಾಯಿಗೆ ($618) ಇಳಿಕೆಯಾಯಿತು. ಅಂದರೆ ರೋಗಿಗೆ ಸುಮಾರು 44,000 ರೂಪಾಯಿ ಉಳಿತಾಯವಾಯಿತು.

'ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ'

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಲ್‌ನಲ್ಲಿ ಐಟಮೈಸ್ಡ್ ಲಿಸ್ಟ್ ಕೇಳಿದರೆ ಸಾಕು, ತಕ್ಷಣವೇ ಶೇ. 20 ರಷ್ಟು ಬಿಲ್ ಕಡಿಮೆಯಾಗುತ್ತದೆ" ಎಂದು ಒಬ್ಬರು ಹೇಳಿದ್ದಾರೆ. "ಇದು ಆಕಸ್ಮಿಕ ತಪ್ಪುಗಳಲ್ಲ, ಇದು ಉದ್ದೇಶಪೂರ್ವಕ ಲೂಟಿ. ಒಂದು ವೇಳೆ ತಪ್ಪಾಗಿದ್ದರೆ ಅದು ರೋಗಿಯ ಪರವಾಗಿಯೂ ಆಗಬೇಕಿತ್ತಲ್ಲವೇ?" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

"ವಿಚಿತ್ರವೆಂದರೆ ಇನ್ಶೂರೆನ್ಸ್ ಕಂಪನಿಗಳೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಪ್ರೀಮಿಯಂ ಕಟ್ಟುವಾಗ ಕಿರಿಕಿರಿ ಮಾಡುವ ಅವರು, ಆಸ್ಪತ್ರೆಗಳು ಹೀಗೆ ಮೋಸ ಮಾಡುವಾಗ ಯಾಕೆ ಸುಮ್ಮನಿರುತ್ತಾರೆ?" ಎಂದು ಗ್ರಾಹಕರು ಕಿಡಿಕಾರಿದ್ದಾರೆ.

ಆಸ್ಪತ್ರೆಗಳು ಸಾಮಾನ್ಯ ಜನರು ಬಿಲ್ ಪರಿಶೀಲಿಸುವುದಿಲ್ಲ ಎಂಬ ನಂಬಿಕೆಯ ಮೇಲೆ ಇಂತಹ ತಪ್ಪುಗಳನ್ನು ಮಾಡುತ್ತವೆ. ಆದ್ದರಿಂದ, ಕೇವಲ ಬಿಲ್‌ನ ಒಟ್ಟು ಮೊತ್ತದ ಸಾರಾಂಶವನ್ನು (Summary) ನೋಡಬೇಡಿ. ಪೂರ್ಣ ವಿವರವಿರುವ ಐಟಮೈಸ್ಡ್ ಬಿಲ್ ಕೇಳಿ. ಅದಕ್ಕೆ ಕೇವಲ 5 ನಿಮಿಷ ಬೇಕಾಗಬಹುದು, ಆದರೆ ನಿಮ್ಮ ಕಷ್ಟದ ಹಣ ಸಾವಿರಾರು ರೂಪಾಯಿ ಉಳಿತಾಯವಾಗಬಹುದು.