ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್ ಅಲರ್ಟ್: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ
ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಬುಧವಾರ ಹಾಗೂ ಗುರುವಾರ ತೀವ್ರ ಎಚ್ಚರಿಕೆಯಿಂದ ಇರುವಂತೆಯೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನವದೆಹಲಿ (ಜೂನ್ 12, 2023): ‘ಬಿಪೊರ್‌ಜೊಯ್’ ಚಂಡಮಾರುತ ಗುಜರಾತ್‌ನಲ್ಲಿ ಜೂನ್ 15 ರಂದು ಅಪ್ಪಳಿಸಲಿದೆ ಎಂದು ತಿಳಿದುಬಂದಿದ್ದು, ಅಲ್ಲದೆ, ಈ ಚಂಡಮಾರುತ ಭೀಕರವಾಗಿರಲಿದೆ ಎಂದೂ ಹೇಳಲಾಗ್ತಿದೆ. ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ 1 ಗಂಟೆಗೆ ಈ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈಗಾಗಲೇ, ಈ ಚಂಡಮಾರುತ ತೀವ್ರಗೊಂಡಿದ್ದು, ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಬೆಳಗ್ಗೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನಿಡಿದೆ.
ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಬುಧವಾರ ಹಾಗೂ ಗುರುವಾರ ತೀವ್ರ ಎಚ್ಚರಿಕೆಯಿಂದ ಇರುವಂತೆಯೂ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಅಲ್ಲದೆ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಸೈಕ್ಲೋನಿಕ್ ಚಂಡಮಾರುತ ಹಿನ್ನೆಲೆ ‘ಆರೆಂಜ್’ ಎಚ್ಚರಿಕೆಯನ್ನು ನೀಡಿದೆ ಮತ್ತು ಮುಂದಿನ ದಿನಗಳಲ್ಲಿ ಗುಜರಾತ್ ಹಾಗೂ ಪಾಕಿಸ್ತಾನದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಜೂನ್ 15 ರ ಮಧ್ಯಾಹ್ನ ಗುಜರಾತ್‌ಗೆ ಕಾಲಿಡಬಹುದು ಎಂದೂ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದೆ.
ಇದನ್ನು ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ‘ಬಿಪೊರ್‌ಜೊಯ್’ ಚಂಡಮಾರುತ ಗುಜರಾತ್‌ನ ಕಛ್ ಹಗೂ ಪಾಕಿಸ್ತಾನದ ಕರಾಚಿ ನಡುವೆ ಜೂನ್ 15ರ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಹೇಳಿದೆ. ಇದೇ ವೇಳೆ ಬಿಪೊರ್‌ಜೊಯ್ ಅತಿ ತೀವ್ರ ಸ್ವರೂಪದ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ ಎಂದಿರುವ ಹವಾಮಾನ ಇಲಾಖೆ ಸೌರಾಷ್ಟ್ರ ಹಾಗೂ ಕಛ್ ಕರಾವಳಿಯಲ್ಲಿ ಕಟ್ಟೆಚ್ಚರ ಸಾರಿದೆ.
ಬಂಗಾಳಿ ಭಾಷೆಯಲ್ಲಿ ಚಂಡಮಾರುತಕ್ಕೆ ‘ಬಿಪೊರ್‌ಜೊಯ್’ (ವಿಪತ್ತು) ಎಂದು ಹೆಸರಿಡಲಾಗಿದೆ. ಭಾನುವಾರ ಅದು ಗುಜರಾತ್‌ನ ಪೋರಬಂದರ್ನಿಂದ 480 ಕಿ.ಮೀ. ದೂರದ ನೈಋತ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಇನ್ನು ಅದು ಉತ್ತರ ಭಾಗದತ್ತ ಚಲಿಸಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್ ಮತ್ತು ಪಾಕಿಸ್ತಾನದ ಕರಾಚಿ ಕರಾವಳಿಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸಲಿದೆ. ನಿರ್ದಿಷ್ಟ ಸ್ಥಳವು ಅದು ಸಮೀಪಕ್ಕೆ ಬಂದಾಗ ಗೊತ್ತಾಗುತ್ತದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ.ಎಸ್.ಪೈ ಹೇಳಿದ್ದಾರೆ.
ಇದನ್ನೂ ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ
ಭಾನುವಾರದಿಂದ 3 ದಿನ ಅದು ಗಂಟೆಗೆ 40 ರಿಂದ 70 ಕಿ.ಮೀ. ವೇಗದ ಬಿರುಗಾಳಿ ಎಬ್ಬಿಸಲಿದ್ದು, ಗುಜರಾತ್ ಕರಾವಳಿ ಪ್ರಕ್ಷುಬ್ಧಗೊಂಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಜೂನ್ 6 ರಂದೇ ಚಂಡಮಾರುತ ಸೃಷ್ಟಿಯಾಗಿದ್ದು, ನಿಖರವಾಗಿ ಒಂದೇ ದಿಕ್ಕಿನತ್ತ ಸಾಗದೆ ಈ ಚಂಡಮಾರುತ ಸಾಕಷ್ಟು ಗೊಂದಲ ಮೂಡಿಸಿದೆ.
ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..