ಮಧುರೈ ಎಲ್‌ಐಸಿ ಕಚೇರಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಪೊಲೀಸರ ತನಿಖೆಯಿಂದ ಇದೊಂದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಡೆತ್ ಕ್ಲೇಮ್ ಫೈಲ್‌ಗಳನ್ನು ನಾಶಮಾಡಲು ಸಹೋದ್ಯೋಗಿಯೇ ನಡೆಸಿದ ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.

ಮಧುರೈ: ಕಳೆದ ತಿಂಗಳು ತಮಿಳುನಾಡಿನ ಮಧುರೈನಲ್ಲಿ ಎಲ್‌ಐಸಿ ಕಟ್ಟಡಕ್ಕೆ ಬೆಂಕಿ ಬಿದ್ದು, ಮಹಿಳಾ ಅಧಿಕಾರಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಇದೊಂದು ಬೆಂಕಿ ಅನಾಹುತ ಅಲ್ಲ, ಮೊದಲೇ ಪ್ಲಾನ್ ಮಾಡಿ ಮಾಡಿದ ಕೊಲೆ ಎಂಬುದು ಈಗ ಪೊಲೀಸರ ತನಿಖೆಯಿಂದ ಸಾಬೀತಾಗಿದೆ. ಈ ಹಿನ್ನೆಲೆ ಈಗ ಹತ್ಯೆಗೀಡಾದ ಮಹಿಳಾ ಅಧಿಕಾರಿಯ ಸಹೋದ್ಯೋಗಿ ಹಾಗೂ ಎಲ್‌ಐಸಿಯ ಸಹಾಯಕ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದ 46 ವರ್ಷದ ರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಿರಿಯ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 54 ವರ್ಷದ ಎ ಕಲ್ಯಾಣಿ ನಂಬಿ ಎಂಬುವವರನ್ನು ಕೊಲೆ ಮಾಡಿದ್ದ. ಡಿಸೆಂಬರ್ 17ರಂದು ಪಶ್ಚಿಮ ವೆಲ್ಲಿ ಸ್ಟ್ರೀಟ್‌ ಎಲ್‌ಐಸಿ ಕಟ್ಟಡದ 2ನೇ ಮಹಡಿಯಲ್ಲಿ ಘಟನೆ ನಡೆದಿತ್ತು.

ಘಟನೆಯಲ್ಲಿ ಕಲ್ಯಾಣಿ ನಂಬಿ ಅವರು ಸುಟ್ಟು ಕರಕಲಾಗಿದ್ದರೆ, ರಾಮ್‌ಗೆ ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆತ ಬಿಡುಗಡೆಗೊಂಡಿದ್ದ. ತಿಲಗರ್ ತಿದಲ್‌ನ ಪೊಲೀಸರು ತಾವು ಆರಂಭದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತದಿಂದ ಆಗಿದೆ ಎಂದು ನಾವು ಭಾವಿಸಿದ್ದೆವು. ಆದರೆ ಆರೋಪಿ ರಾಮ್, ಕಟ್ಟಡಕ್ಕೆ ಯಾರೋ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಆಗಮಿಸಿ ಕಲ್ಯಾಣಿಯ ಆಭರಣವನ್ನು ದರೋಡೆ ಮಾಡಲು ಯತ್ನಿಸಿದ ನಂತರ ಕಚೇರಿಗೆ ಬೆಂಕಿ ಹಚ್ಚಿದ್ದ ಎಂಬ ಹೇಳಿಕೆ ನೀಡಿದ್ದ. ಆದರೆ ನಂತರದ ವಿಚಾರಣೆಯಲ್ಲಿ ಆತ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡಿದ, ಇದು ಅನುಮಾನಕ್ಕೆ ಕಾರಣವಾಯ್ತು

ಇದಾದ ನಂತರ ತೀವ್ರವಾಗಿ ತನಿಖೆಗಿಳಿದ ಪೊಲೀಸರು ರಾಮ್ ಕ್ಯಾಬಿನ್‌ನಿಂದ ಪೆಟ್ರೋಲ್ ತುಂಬಿದ್ದ ಕೆಲವು ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವನ ಬೈಕ್‌ನಿಂದ ಪೆಟ್ರೋಲ್ ತೆಗೆಯಲು ಬಳಸಿದ ಟ್ಯೂಬ್ ಕೂಡ ಪತ್ತೆಯಾಗಿದೆ. ಕಲ್ಯಾಣಿ ಅವರು ಆ ರಾತ್ರಿ ತನಗೆ ಕರೆ ಮಾಡಿ ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದರು ಎಂದು ಆಕೆಯ ಮಗ ಪೊಲೀಸರಿಗೆ ತಿಳಿಸಿದ್ದಾನೆ. ಈ ಅಂಶಗಳು ಕೊಲೆಯ ಸಂಚನ್ನು ಬಯಲು ಮಾಡಲು ಸಹಾಯ ಮಾಡಿದವು.

ಮೇಲಾಧಿಕಾರಿಯ ಕೊಲೆಗೇನು ಕಾರಣ?

ಆರೋಪಿ ರಾಮ್‌ ಬಗ್ಗೆ ಹಲವು ಇನ್ಸ್ಶೂರೆನ್ಸ್ ಏಜೆಂಟ್‌ಗಳು ಕರೆ ಮಾಡಿ ಅವರು ಎಲ್‌ಐಸಿ ಗ್ರಾಹಕರ 40 ಕ್ಕೂ ಹೆಚ್ಚು ಡೆತ್ ಕ್ಲೇಮ್‌ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕಲ್ಯಾಣಿಗೆ ದೂರು ನೀಡಿದ್ದರು . ಹೀಗಾಗಿ ಕಲ್ಯಾಣಿ ಅವರು ಆರೋಪಿ ರಾಮ್‌ ಬಳಿ ಈ ವಿಚಾರವನ್ನು ಪ್ರಶ್ನಿಸಿದ್ದರು. ಹಾಗೂ ಇದನ್ನು ಮತ್ತಷ್ಟು ವಿಳಂಬ ಮಾಡಿದ್ದಲ್ಲಿ ಮೇಲಾಧಿಕಾರಿಗಳಿಗೆ ಹೇಳುವುದಾಗಿ ಹೇಳಿದ್ದರು. ಹೀಗಾಗಿ ರಾಮ್ ಕಲ್ಯಾಣಿ ಕತೆ ಮುಗಿಸುವುದರ ಜೊತೆಗೆ ಡೆತ್ ಕ್ಲೇಮ್ ಮಾಡಿದ ಕೆಲ ಫೈಲ್‌ಗಳ ಕತೆಯನ್ನು ಕೂಡ ಒಟ್ಟಿಗ ಮುಗಿಸುವ ಪ್ಲಾನ್ ಮಾಡಿ ಕೊಲೆ ಸಂಚು ರೂಪಿಸಿದ್ದಾನೆ.

ಪೊಲೀಸರ ಪ್ರಕಾರ, ಡಿಸೆಂಬರ್ 17 ರಂದು ರಾತ್ರಿ 8.30 ರ ಸುಮಾರಿಗೆ, ಕಲ್ಯಾಣಿ ಅವರು ತಮ್ಮ ಕ್ಯಾಬಿನ್‌ನಲ್ಲಿದ್ದಾಗ, ರಾಮ್ ಕಟ್ಟಡಕ್ಕೆ ಮುಖ್ಯ ವಿದ್ಯುತ್ ಸರಬರಾಜನ್ನು ಬಂದ್ ಮಾಡಿದ್ದಾನೆ.. ನಂತರ ಆತ ತಮಿಳುನಾಡು ಇಲೆಕ್ಟ್ರಿಸಿಟಿ ಬೋರ್ಡ್‌ಗೆ ಮೇಲ್ ಮಾಡಿದ್ದು, ಕಟ್ಟಡದ ವಿದ್ಯುತ್ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದು ತಿಳಿಸಿ ದುರಸ್ತಿಗೆ ವಿನಂತಿಸಿದ್ದಾನೆ. ನಂತರ ಆತ ಲಾಬಿಗೆ ಪ್ರವೇಶವನ್ನು ನೀಡುವ ಮುಖ್ಯ ಗಾಜಿನ ಬಾಗಿಲನ್ನು ಸಂಕೋಲೆಯಿಂದ ಲಾಕ್ ಮಾಡಿದ್ದಾನೆ.

ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್: ನಾಲ್ವರು ಸ್ನೇಹಿತರು ಜೊತೆಗೆ ಸಾವು

ಇತ್ತ ರಾಮ್ ವಿದ್ಯುತ್ ಸರಬರಾಜು ಬಂದ್ ಮಾಡಿದ್ದರಿಂದ ದೀಪಗಳು ಆರಿದಾಗ, ಯಾರೋ ಮುಖ್ಯ ಬಾಗಿಲನ್ನು ಲಾಕ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಲ್ಯಾಣಿ ಗಮನಿಸಿದ್ದಾರೆ. ಏನೋ ತಪ್ಪಾಗಿದೆ ಎಂದು ಗ್ರಹಿಸಿ, ಆಕೆ ಸಹಾಯಕ್ಕಾಗಿ ಕೂಗಿದ್ದಾಳೆ. ಈ ವೇಳೆ ಅವರನ್ನು ಎದುರಿಸಿದ ರಾಮ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಇಡೀ ಕ್ಯಾಬಿನ್‌ ಸಂಪೂರ್ಣವಾಗಿ ಬೆಂಕಿಗಾಹುತಿ ಆಗಿದೆ. ಈ ಘಟನೆಯನ್ನು ಆಕಸ್ಮಿಕವೆಂದು ಬಿಂಬಿಸುವುದಕ್ಕೆ ರಾಮ್ ತನ್ನ ಕ್ಯಾಬಿನ್‌ಗೂ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಈ ವೇಳೆ ಅವನಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ರಾಮ್ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಆತನ ಮನೆಯಿಂದಲೇ ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಆತನ ವಿರುದ್ಧ ಕೊಲೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ ಮುಂದುವರೆಯುತ್ತಾ? ಮಾರುಕಟ್ಟೆ ತಜ್ಞರು ಏನಂತಾರೆ?