Kerala DSP suspended: ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಸಹೋದ್ಯೋಗಿ ಅಧಿಕಾರಿಯೊಬ್ಬರ ಆತ್ಮಹತ್ಯೆಯ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಹಿಳೆಗೆ ಲೈಂಗಿಕ ಕಿರುಕುಳ

ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದ ನಂತರ ಕೇರಳದಲ್ಲಿ ಡಿಎಸ್‌ಪಿ ದರ್ಜೆಯ ಉನ್ನತ ಪೊಲೀಸ್ ಅಧಿಕಾರಿಯೊರ್ವರನ್ನು ಗೃಹ ಇಲಾಖೆ ಅಮಾನತುಗೊಳಿಸಿದೆ. ಕೋಝಿಕ್ಕೋಡ್ ಗ್ರಾಮೀಣ ಪ್ರದೇಶದ ವಟಕರದ ಡೆಪ್ಯುಟಿ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಎ. ಉಮೇಶ್ ಅಮಾನತ್ತಾದ ಹಿರಿಯ ಅಧಿಕಾರಿ. ಎ. ಉಮೇಶ್ ವಿಚಾರಣೆ ನಡೆಸಿದ ನಂತರ ರಾಜ್ಯ ಪೊಲೀಸ್ ಮುಖ್ಯಸ್ಥರ ಶಿಫಾರಸಿನ ಮೇರೆಗೆ ಕೇರಳ ಗೃಹ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಪೊಲೀಸ್ ಅಧಿಕಾರಿಯೊಬ್ಬರ ಸಾವಿನ ನಂತರ ಪ್ರಕರಣ ಬೆಳಕಿಗೆ:

ಇತ್ತೀಚೆಗೆ ಕೇರಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ವೇಶ್ಯಾವಾಟಿಕೆಯ ಆರೋಪದ ಮೇಲೆ ಮಹಿಳೆಯೊಬ್ಬಳ ಬಂಧನವಾಗಿತ್ತು. ಹೀಗೆ ಬಂಧನವಾಗಿದ್ದ ಮಹಿಳೆಗೆ ಕಸ್ಟಡಿಯಲ್ಲಿದ್ದಾಗಲೇ ಲೈಂಗಿಕ ಕಿರುಕುಳ ನೀಡಿದ ಆರೋಪ ಅಮಾನತ್ತಾದ ಡಿಎಸ್‌ಪಿ ಉಮೇಶ್ ವಿರುದ್ಧ ಕೇಳಿ ಬಂದಿದೆ.

ಅಪರಾಧಿಗಳಿಂದ ಲಂಚ ಸ್ವೀಕಾರ, ಹಲವು ಅಕ್ರಮ ಚಟುವಟಿಕೆಯಲ್ಲಿ ಭಾಗಿ

ಪಾಲಕ್ಕಾಡ್‌ನ ವಡಕ್ಕೆಂಚೇರಿ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾಗ, ಉಮೇಶ್ ಅವರು ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ಮತ್ತು ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ವ್ಯಕ್ತಿಗಳಿಂದ ಲಂಚ ಪಡೆಯುವ ಮೂಲಕ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಂತರಿಕ ವಿಚಾರಣೆಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಸ್ಟೇಷನ್ ಹೌಸ್ ಆಫೀಸರ್ ಬಿನು ಥಾಮಸ್ ಡೆತ್‌ನೋಟ್‌ ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ

ನವೆಂಬರ್ 15 ರಂದು ಶವವಾಗಿ ಪತ್ತೆಯಾದ ಚೆರ್ಪುಲಸ್ಸೆರಿ ಸ್ಟೇಷನ್ ಹೌಸ್ ಆಫೀಸರ್ ಬಿನು ಥಾಮಸ್ ಅವರ ಡೆತ್‌ನೋಟ್‌ನ್ನು ಪೊಲೀಸರು ವಶಪಡಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕೇರಳಮುಖ್ಯಮಂತ್ರಿ ಕಚೇರಿ ನೀಡಿದ ಸರ್ಕಾರಿ ಆದೇಶದ ಪ್ರಕಾರ, ರಾಜ್ಯ ಪೊಲೀಸ್ ಮುಖ್ಯಸ್ಥರು ಸಲ್ಲಿಸಿದ ವಿಶೇಷ ವರದಿಯಲ್ಲಿ, ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದ ಉಮೇಶ್‌, ಅವರ ಅಶಿಸ್ತಿನಿಂದ ಕೂಡಿದ, ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಇಡೀ ಪೊಲೀಸ್ ಪಡೆಯ ಘನತೆಗೆ ಕಳಂಕ ತಂದಿವೆ ಎಂದು ಹೇಳಲಾಗಿದೆ. ಸರ್ಕಾರವು ವರದಿಯನ್ನು ವಿವರವಾಗಿ ಪರಿಶೀಲಿಸಿದ್ದು, ಉಪ ಪೊಲೀಸ್ ಆಯುಕ್ತರ ಗಂಭೀರ ದುಷ್ಕೃತ್ಯಗಳು, ಅಶಿಸ್ತು, ಅಧಿಕಾರ ದುರುಪಯೋಗ ಮತ್ತು ಅನೈತಿಕ ಮತ್ತು ಕಾನೂನುಬಾಹಿರ ಕ್ರಮಗಳಿಗೆ ಪ್ರಾಥಮಿಕ ಸಾಕ್ಷಿಗಳು ಸಿಕ್ಕಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಯಮನಾದ ಮರ್ಸಿಡಿಸ್: ಮದುಮಗನ ಹುಚ್ಚಾಟದ ಚಾಲನೆಗೆ ಕೆಲಸ ಮುಗಿಸಿ ಮನೆಗೆ ಹೋಗ್ತಿದ್ದ ಹುಡುಗ ಸಾವು

ಹೀಗಾಗಿ ಆರೋಪಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಉಪ ಎಸ್ಪಿ ಉಮೇಶ್ ಎ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಮೇಶ್ ಅವರ ಮೌಖಿಕ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿಯಾಗಿ ನೇಮಕಗೊಳ್ಳಲು ಪರಿಗಣಿಸಬೇಕಾದ ಸಮರ್ಥ ಅಧಿಕಾರಿಗಳ ಸಮಿತಿಯನ್ನು ಸಲ್ಲಿಸುವಂತೆಯೂ ಈ ಆದೇಶದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ಗೃಹಿಣಿಯ ಅನೈತಿಕ ಸಂಬಂಧಕ್ಕೆ ಅನಾಥರಾದ ಮಕ್ಕಳು: ಪತ್ನಿಯ ಕೊಲೆ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ